ADVERTISEMENT

ಅರ್ಹತೆ ಇದ್ದರೂ ಮೇಲ್ದರ್ಜೆಗೇರದ ಪಡುಬಿದ್ರಿ ಗ್ರಾ.ಪಂ.

ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಗ್ರಾ. ಪಂ. ಮಾಸಿಕ ಸಭೆಯಲ್ಲಿ ನಿರ್ಣಯ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 7:51 IST
Last Updated 4 ನವೆಂಬರ್ 2025, 7:51 IST
ಅರ್ಹತೆ ಹೊಂದಿದ್ದರೂ ಮೇಲ್ದರ್ಜೆಗೇರದ ಪಡುಬಿದ್ರಿ ಗ್ರಾಮ ಪಂಚಾಯಿತಿ : 
ಅರ್ಹತೆ ಹೊಂದಿದ್ದರೂ ಮೇಲ್ದರ್ಜೆಗೇರದ ಪಡುಬಿದ್ರಿ ಗ್ರಾಮ ಪಂಚಾಯಿತಿ :    

ಹಮೀದ್‌ ಪಡುಬಿದ್ರಿ

ಪಡುಬಿದ್ರಿ: ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಕ್ಷೇತ್ರವಾಗಿ ಬೆಳೆಯುತ್ತಿರುವ ಪಡುಬಿದ್ರಿ ಗ್ರಾಮ ಪಂಚಾಯಿತಿಗೆ ಮೇಲ್ದರ್ಜೆಗೇರುವ ಎಲ್ಲಾ ಅರ್ಹತೆ ಇದ್ದರೂ ಇನ್ನೂ ಪಂಚಾಯಿತಿಯಾಗಿಯೇ ಉಳಿದಿದೆ.

ನಡ್ಸಾಲು ಮತ್ತು ಪಾದೆಬೆಟ್ಟು ಗ್ರಾಮವನ್ನು ಒಳಗೊಂಡ ಪಡುಬಿದ್ರಿ ಗ್ರಾಮ ಪಂಚಾಯಿತಿಯಲ್ಲಿ 2011ರ ಜನಗಣತಿಯ ಪ್ರಕಾರ 13,476 ಜನಸಂಖ್ಯೆ ಇದ್ದು, 1,062ಜನ ಸಾಂಧ್ರತೆ ಹೊಂದಿದೆ. 2,866 ಕುಟುಂಬಗಳಿವೆ. 13 ಚದರ ಕಿ.ಮೀ ಇದೆ. 2020ರಲ್ಲಿ ಆಗಬೇಕಾಗಿದ್ದ ಜನಗಣತಿ ಆಗದೆ ಇರುವುದರಿಂದ ಈಗಿನ ಪ್ರಕಾರ 20 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರಬಹುದು ಎಂದು ಅಂದಾಜಿಸಲಾಗಿದೆ.

ADVERTISEMENT

ಇಲ್ಲಿ 13 ವಾರ್ಡುಗಳಿದ್ದು, 34 ಮಂದಿ ಪಂಚಾಯಿತಿ ಸದಸ್ಯರಿದ್ದಾರೆ. ಪಡುಬಿದ್ರಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66, ಕಾರ್ಕಳಕ್ಕೆ ತೆರಳುವ ಪ್ರಮುಖ ರಾಜ್ಯ ಹೆದ್ದಾರಿ 1ನ್ನು ಹೊಂದಿದೆ. ಸಮೀಪದ ನಂದಿಕೂರು ಗ್ರಾಮದಲ್ಲಿ ಕೈಗಾರಿಕಾ ಪ್ರದೇಶ, ಎಲ್ಲೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಅದಾನಿ ಒಡೆತನದ ವಿದ್ಯುತ್ ಸ್ಥಾವರವು ಇದೆ.

ಪಲಿಮಾರು ಮತ್ತು ಪಡುಬಿದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಶೇಷ ಅರ್ಥಿಕ ವಲಯ ಇದೆ. ಅಲ್ಲದೆ ಇಲ್ಲಿ ಹಲವು ಸಣ್ಣ ಕೈಗಾರಿಕೆಗಳು ಇವೆ. ಇಲ್ಲಿನ ಮುಖ್ಯಬೀಚ್ ಹಾಗೂ ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಬ್ಲೂಫ್ಲ್ಯಾಗ್ ಬೀಚ್‌ಗೆ ಪ್ರತಿನಿತ್ಯ ಪ್ರವಾಸಿಗರು ಭೇಟಿ ನೀಡುವ ಮೂಲಕ ಇದು ಪ್ರವಾಸಿ ಕೇಂದ್ರವಾಗಿ ಬೆಳೆಯುತ್ತಿದೆ.

ಆದಾಯದಲ್ಲೂ ಮುಂದಿರುವ ಪಂಚಾಯಿತಿ ಇಲ್ಲಿನ ಇಲ್ಲಿನ ಆಡಳಿತ ವ್ಯವಸ್ಥೆಯನ್ನು ಸುಧಾರಿಸಲು ಪಟ್ಟಣ ಪಂಚಾಯಿತಿ ಅಥವಾ ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಿದಲ್ಲಿ ಇಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ವೇಗ ಸಿಗಲಿದೆ ಎಂಬುವುದು ಇಲ್ಲಿನ ಜನರ ಅಭಿಪ್ರಾಯವಾಗಿದೆ.

ಮೇಲ್ದರ್ಜೆಗೇರಿಸಲು ನಿರ್ಣಯ: ಪಡುಬಿದ್ರಿ ವೇಗವಾಗಿ ಬೆಳೆಯುತ್ತಿರುವ ಪಡುಬಿದ್ರಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಗ್ರಾಮ ಪಂಚಾಯಿತಿ ಮಾಸಿಕ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಸುಮಾರು 20 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಪಡುಬಿದ್ರಿಯಲ್ಲಿ ಹೆಚ್ಚಿನವರು ಕೈಗಾರಿಕೆ, ವ್ಯಾಪಾರ ಮತ್ತು ವಿವಿಧ ಸಂಸ್ಥೆಗಳ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷಿ ಅವಲಂಬಿತ ಕುಟುಂಬಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು, ಗ್ರಾಮವು ನಗರೀಕರಣದ ಹಾದಿಯಲ್ಲಿ ವೇಗವಾಗಿ ಸಾಗುತ್ತಿದೆ.

1993ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕಾಯ್ದೆ ಪ್ರಕಾರ 2500 ಜನರಿಗೆ ಒಂದು ಪಂಚಾಯಿತಿ ರಚನೆ ಆಗಬೇಕಾದರೆ, ಪಡುಬಿದ್ರಿಯ ಜನಸಂಖ್ಯೆ ಅದರ ಎಂಟು ಪಟ್ಟು ಹೆಚ್ಚು ಇದೆ. ಇದರ ಪರಿಣಾಮವಾಗಿ ಅನುದಾನ ಕೊರತೆ, ಸಿಬ್ಬಂದಿ ಅಭಾವ, ಬೀದಿ ದೀಪ ಹಾಗೂ ಕುಡಿಯುವ ನೀರಿನ ನಿರ್ವಹಣೆಯಲ್ಲಿ ತೊಂದರೆ ಉಂಟಾಗಿದೆ ಎಂದು ಜನರು ಹೇಳುತ್ತಾರೆ.

ಪಂಚಾಯಿತಿ ವ್ಯಾಪ್ತಿಯಲ್ಲಿ ನಡ್ಸಾಲು ಮತ್ತು ಪಾದೆಬೆಟ್ಟು ಗ್ರಾಮಗಳು ಸೇರಿದ್ದು, ಎರಡೂ ಕಡೆ ಕೈಗಾರಿಕೆ, ವಾಣಿಜ್ಯ ಮತ್ತು ಸೇವಾ ಕ್ಷೇತ್ರದ ಚಟುವಟಿಕೆಗಳು ವೇಗವಾಗಿ ನಡೆಯುತ್ತಿವೆ.

ಪಡುಬಿದ್ರಿ ಗ್ರಾಮ ಪಂಚಾಯಿತಿಯನ್ನು ಮೆಲ್ದರ್ಜೆಗೇರಿಸಲು ಕಳೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ನಿರ್ಣಯದ ಪ್ರಸ್ತಾವನೆಯನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಲಾಗುವುದು
ಮಂಜುನಾಥ್ ಶೆಟ್ಟಿ ಪಡುಬಿದ್ರಿ ಗ್ರಾಮ ಪಂಚಾಯಿತಿ ಪಿಡಿಒ

'ಮೇಲ್ದರ್ಜೆಗೇರಿದರೆ ಅನುಕೂಲ

ಪಡುಬಿದ್ರಿ ಗ್ರಾಮ ಪಂಚಾಯಿತಿ ಮೇಲ್ದರ್ಜೆಗೇರಿದಲ್ಲಿ ಇಲ್ಲಿನ ಮೂಲಸೌಕರ್ಯಗಳಿಗೆ ವಿವಿಧ ಅನುದಾನಗಳು ದೊರಕಲಿದೆ. ಗ್ರಾಮ ಪಂಚಾಯಿತಿಯ ಈಗಿನ ಅನುದಾನದಲ್ಲಿ ಇಲ್ಲಿನ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಾಧ್ಯವಾಗುತಿಲ್ಲ. ಪಟ್ಟಣ ಮಟ್ಟದ ಸೌಕರ್ಯಗಳು ಒಳಚರಂಡಿ ಪಾರ್ಕಿಂಗ್ ಬೀದಿ ದೀಪ ನಿರ್ವಹಣೆ ಕುಡಿಯುವ ನೀರು ಹಾಗೂ ಆಡಳಿತ ಸಿಬ್ಬಂದಿ ಹೆಚ್ಚಳ ಅಗತ್ಯವಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಪಡುಬಿದ್ರಿ ಗ್ರಾಮ ಪಂಚಾಯಿತಿಯನ್ನು ನಗರಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ತರಬೇಕು ಹಾಗೂ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಬೇಕಿದೆ ಎಂದು ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ವೈ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.