ADVERTISEMENT

7.15ಕ್ಕೆ ಮೆಜೆಸ್ಟಿಕ್ ತಲುಪುವ ಪಂಚಗಂಗಾ!

ಕರಾವಳಿ ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 2:27 IST
Last Updated 1 ಜುಲೈ 2022, 2:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕುಂದಾಪುರ: ‘ಕರಾವಳಿ ಮತ್ತು ರಾಜಧಾನಿ ಬೆಂಗಳೂರು ನಡುವಿನ ಜೀವನಾಡಿ ಪಂಚಗಂಗಾ ಎಕ್ಸ್‌ಪ್ರೆಸ್‌ ರೈಲು ಬೆಂಗಳೂರು ತಲುಪುವ ಸಮಯದಲ್ಲಿ ಸುಧಾರಣೆ ತರಲಾಗಿದೆ. ಜುಲೈ 1ರಿಂದ ಈ ರೈಲು ನಿಗದಿತ ಸಮಯಕ್ಕಿಂತ 1 ಗಂಟೆ ಮುಂಚಿತವಾಗಿ ಬೆಂಗಳೂರು ತಲುಪಲಿದೆ’ ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ತಿಳಿಸಿದ್ದಾರೆ.

ಪಂಚಗಂಗಾ ಎಕ್ಸ್‌ಪ್ರೆಸ್‌ ಬೆಂಗಳೂರಿನ ಹೊರವಲಯಕ್ಕೆ ಬೆಳಿಗ್ಗೆ 6.30ರ ಸುಮಾರಿಗೆ ತಲುಪಿದರೂ, ನಗರ ನಿಲ್ದಾಣಕ್ಕೆ ತಲುಪುವಾಗ 8 ಗಂಟೆ ಆಗಿರುತ್ತಿತ್ತು. ಈ ಅವಧಿ ಕಡಿಮೆ ಮಾಡಲು ಕಳೆದ ಒಂದೂವರೆ ವರ್ಷದಿಂದ ಸಮಿತಿಯವರು ಪ್ರಯತ್ನ ನಡೆಸುತ್ತಿದ್ದರು. ಶಾಸಕರಾದ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ದಿನಕರ್ ಶೆಟ್ಟಿ ಕುಮಟಾ ಹಾಗೂ ಸಂಸದ ಅನಂತ ಕುಮಾರ್ ಹೆಗಡೆ ಅವರೂ ಸಮಿತಿಯ ಜತೆ ಕೈಜೋಡಿಸಿ, ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಿದ್ದರು.

‘ಜೂನ್‌ 1ರಿಂದಲೇ ಸಮಯ ಬದಲಾವಣೆ ಜಾರಿಗೆ ಬರಬೇಕಿತ್ತು. ಆದರೆ ಕೆಲವು ಲಾಬಿಗಳ ಕಾರಣದಿಂದ ಸ್ವಲ್ಪ ತಡವಾಗಿ, ಜುಲೈ 1ರಿಂದ ಇದು ಜಾರಿಯಾಗುತ್ತಿದೆ. ಸಮಯದ ಬದಲಾವಣೆಯಿಂದ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ’ ಎಂದು ಗಣೇಶ್‌ ತಿಳಿಸಿದರು.

ADVERTISEMENT

ಪಂಚಗಂಗಾ ಸಮಸ್ಯೆ ಪರಿಹಾರಕ್ಕಾಗಿ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಗೌತಮ್ ಶೆಟ್ಟಿ, ಉತ್ತರ ಕನ್ನಡ ರೈಲು ಸೇವಾ ಸಮಿತಿಯ ರಾಜೀವ್ ಗಾಂವ್ಕರ್ ಹಾಗೂ ಸಮಿತಿಯ ಸದಸ್ಯರು ಶ್ರಮ ವಹಿಸಿದ್ದರು. ಬೆಂಗಳೂರಿನ ರೈಲ್ವೆ ಮಂಡಳಿಯ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.