ADVERTISEMENT

ಕಾರ್ಕಳ: ಪರಶುರಾಮ ಥೀಮ್ ಪಾರ್ಕ್‌ ಕಾಮಗಾರಿ ಆರಂಭಿಸಲು ಆಗ್ರಹಿಸಿ ವಾಹನ ಜಾಥಾ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 6:34 IST
Last Updated 7 ಆಗಸ್ಟ್ 2025, 6:34 IST
ಸಭೆಯಲ್ಲಿ ಶಾಸಕ ಸುನಿಲ್ ಕುಮಾರ್‌ ಮಾತನಾಡಿದರು
ಸಭೆಯಲ್ಲಿ ಶಾಸಕ ಸುನಿಲ್ ಕುಮಾರ್‌ ಮಾತನಾಡಿದರು   

ಉಡುಪಿ: ‘ಕಾರ್ಕಳದ ಪರಶುರಾಮ ಥೀಮ್‌ ಪಾರ್ಕ್‌ ನಮಗೆ ಚುನಾವಣೆಯ ವಿಷಯವಲ್ಲ. ಅದು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿ ಹೊಂದಬೇಕು ಎಂಬುದು ನಮ್ಮ ಉದ್ದೇಶ’ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.

ಪರಶುರಾಮ ಮೂರ್ತಿಯ ಕಾಮಗಾರಿಯನ್ನು ಶ್ರೀಘ್ರ ಪ್ರಾರಂಭಿಸಬೇಕೆಂದು ಆಗ್ರಹಿಸಿ ಕಾರ್ಕಳದಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿವರೆಗೆ ಬುಧವಾರ ಹಮ್ಮಿಕೊಂಡಿದ್ದ ವಾಹನ ಜಾಥಾದ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಮುಂದಿನ ಚುನಾವಣೆ ತನಕ ಪರಶುರಾಮ ಮೂರ್ತಿಯನ್ನು ನಿರ್ಮಾಣ ಮಾಡುವುದಿಲ್ಲ ಎಂದು ಕಾರ್ಕಳಕ್ಕೆ ಭೇಟಿ ನೀಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದರು. ಈಗ ಕಾಂಗ್ರೆಸ್‌ ಮುಖಂಡ ಉದಯ್‌ ಕುಮಾರ್‌ ಶೆಟ್ಟಿ ಅವರು ಮೂರ್ತಿ ನಿರ್ಮಾಣಕ್ಕೆ ಆಗ್ರಹಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಯಾಕೆ ಈ ದ್ವಂದ್ವ ನಿಲುವು’ ಎಂದು ಪ್ರಶ್ನಿಸಿದರು.

ADVERTISEMENT

‘ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ನಮ್ಮ ವಿರೋಧವಿಲ್ಲ. ಥೀಮ್‌ ಪಾರ್ಕ್‌ಗೆ ಹೋಗುವ ರಸ್ತೆಗೆ ಮಣ್ಣು ಹಾಕಿ ಮುಚ್ಚಿದ್ದು ಅರ್ಜಿ ಸಲ್ಲಿಸುವಾಗ ನೆನಪಾಗಲಿಲ್ಲವೇ’ ಎಂದರು.

‘ಒಂದು ಕಡೆ ಕೇಸ್‌ ಹಾಕ್ತೀರಿ, ಇನ್ನೊಂದು ಕಡೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತೀರಿ ಇದರಲ್ಲಿ ಯಾವುದನ್ನು ನಂಬುವುದು. ನೀವು ಕೇಸ್‌ ವಾಪಸ್‌ ಪಡೆದು ಅರ್ಜಿ ಸಲ್ಲಿಸಿದ್ದರೆ ಅರ್ಥವಿರುತ್ತಿತ್ತು’ ಎಂದು ಹೇಳಿದರು.

‌‘ಕಾಂಗ್ರೆಸ್‌ ಸರ್ಕಾರಕ್ಕೆ ಥೀಮ್‌ ಪಾರ್ಕ್‌ ಅನ್ನು ಅಭಿವೃದ್ಧಿಪಡಿಸಬಹುದಿತ್ತು. ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ಥೀಮ್ ಪಾರ್ಕ್‌ ಇಂದು ದೂಳು ಹಿಡಿದಿದೆ’ ಎಂದರು.

‘ಪರಶುರಾಮ ಮೂರ್ತಿ ಫೈಬರ್‌ನದ್ದಲ್ಲ ಎಂದು ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಆರೋಪಪಟ್ಟಿಯಲ್ಲಿ ಹೇಳಿದ್ದಾರೆ. ಇದರಿಂದ ಸುಳ್ಳಿನ ಮೆರವಣಿಗೆ ನಿಂತು ಸತ್ಯದ ವಿಜಯೋತ್ಸವ ಆರಂಭವಾಗಿದೆ’ ಎಂದು ತಿಳಿಸಿದರು.

ಮುಖಂಡರಾದ ಮಟ್ಟಾರು ರತ್ನಾಕರ ಹೆಗ್ಡೆ, ಮುಟ್ಲುಪಾಡಿ ಸತೀಶ್‌ ಶೆಟ್ಟಿ, ಸುಮಿತ್‌ ಶೆಟ್ಟಿ, ಮಹಾವೀರ ಹೆಗ್ಡೆ ಉಪಸ್ಥಿತರಿದ್ದರು.

ಸರ್ಕಾರವು ಬೇರೆ ಬೇರೆ ಹಗರಣಗಳ ಕುರಿತು ಮೂರು ತಿಂಗಳಲ್ಲಿ ವಿಚಾರಣೆ ನಡೆಸಿ ಕ್ಲೀನ್‌ಚಿಟ್‌ ನೀಡುತ್ತಿದೆ. ಪರಶುರಾಮ ಮೂರ್ತಿ ಕುರಿತ ತನಿಖೆ ಎರಡು ವರ್ಷವಾದರೂ ಮುಗಿದಿಲ್ಲ
ಸುನಿಲ್‌ ಕುಮಾರ್‌ ಶಾಸಕ
ಕಾರ್ಕಳದ ಜನರು ಇಂದು ಜಿಲ್ಲಾಧಿಕಾರಿ ಕಚೇರಿವರೆಗೆ ಬರಲು ಕಾಂಗ್ರೆಸ್‌ನವರೇ ಕಾರಣ. ಮುಂದೆ ಜನರು ಅದಕ್ಕೆ ತಕ್ಕ ಪಾಠ ಕಲಿಸ್ತಾರೆ
ಕುತ್ತಾರು ನವೀನ್‌ ಶೆಟ್ಟಿ ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.