ADVERTISEMENT

ಕೆಎಂಸಿಯಲ್ಲಿ ಪಾರ್ಕಿನ್ಸನ್‌ ಕಾಯಿಲೆಗೆ ನವೀನ ಚಿಕಿತ್ಸೆ

ಬ್ರೈನ್ಸೆನ್ಸ್ ತಂತ್ರಜ್ಞಾನದೊಂದಿಗೆ ಡೀಪ್ ಬ್ರೈನ್ ಸ್ಟಿಮ್ಯುಲೇಶನ್ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2022, 16:00 IST
Last Updated 8 ಡಿಸೆಂಬರ್ 2022, 16:00 IST
ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ದಾವಣಗೆರೆ ಜಿಲ್ಲೆಯ 62 ವರ್ಷದ ಮಹಿಳೆಗೆ ಡೀಪ್ ಬ್ರೈನ್ ಸ್ಟಿಮ್ಯುಲೇಶನ್ ಸಾಧನ ಬಳಸಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ರೋಗಿ ಹಾಗೂ ವೈದ್ಯರು ಚಿತ್ರದಲ್ಲಿದ್ದಾರೆ.
ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ದಾವಣಗೆರೆ ಜಿಲ್ಲೆಯ 62 ವರ್ಷದ ಮಹಿಳೆಗೆ ಡೀಪ್ ಬ್ರೈನ್ ಸ್ಟಿಮ್ಯುಲೇಶನ್ ಸಾಧನ ಬಳಸಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ರೋಗಿ ಹಾಗೂ ವೈದ್ಯರು ಚಿತ್ರದಲ್ಲಿದ್ದಾರೆ.   

ಉಡುಪಿ: ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ದಾವಣಗೆರೆ ಜಿಲ್ಲೆಯ 62 ವರ್ಷದ ಮಹಿಳೆಗೆ ಡೀಪ್ ಬ್ರೈನ್ ಸ್ಟಿಮ್ಯುಲೇಶನ್ ಸಾಧನ ಬಳಸಿ ಚಿಕಿತ್ಸೆ ನೀಡಲಾಗಿದ್ದು, ಕರಾವಳಿ ಭಾಗದಲ್ಲಿ ನಡೆದ ಮೊದಲ ಯಶಸ್ವಿ ಚಿಕಿತ್ಸೆಯಾಗಿದೆ ಎಂದು ಮಣಿಪಾಲದ ಕೆಎಂಸಿ ಆಸ್ಪತ್ರೆ ತಿಳಿಸಿದೆ.

12 ವರ್ಷಗಳಿಂದ ನರ ದುರ್ಬಲಗೊಳಿಸುವ ಸಮಸ್ಯೆಯಿಂದ ಮಹಿಳೆ ಬಳಲುತ್ತಿದ್ದರು. ಕೈಕಾಲುಗಳಲ್ಲಿನ ನಡುಕ, ಬಿಗಿತ ಮತ್ತು ನಿಧಾನಗತಿಯ ಕಾರಣದಿಂದಾಗಿ ದೈನಂದಿನ ಚಟುವಟಿಕೆ ನಿರ್ವಹಿಸಲು ಹಾಗೂ ನಡೆಯಲು ರೋಗಿಗೆ ತೊಂದರೆಯಾಗಿತ್ತು.

ನರ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಗಿರೀಶ್ ಮೆನನ್, ನರ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಅಪರ್ಣಾ ಪೈ, ನರ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ.ದುಷ್ಯಂತ್ ಬಾಬು ಮತ್ತು ನರ ಶಸ್ತ್ರಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕ ಡಾ.ಅಜಯ್ ಹೆಗ್ಡೆ ಅವರನ್ನೊಳಗೊಂಡ ತಂಡದ ಸಮಗ್ರ ಮೌಲ್ಯಮಾಪನ ಮಾಡಿ, ಹತ್ತು ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿದರು.

ADVERTISEMENT

ಈ ಸಂದರ್ಭ ಇಂಟ್ರಾ ಆಪರೇಟಿವ್ ಮೇಲ್ವಿಚಾರಣೆಯಲ್ಲಿ ರೋಗಿಯನ್ನು ಎಚ್ಚರ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಯಿತು. 1 ಸೆಂ.ಮೀ ಗಿಂತ ಕಡಿಮೆ ಗಾತ್ರದ ಹಾಗೂ ಮೆದುಳಿನಲ್ಲಿ ಬಹಳ ಆಳದಲ್ಲಿ ಸಬ್‌ಥಾಲಾಮಿಕ್ ನ್ಯೂಕ್ಲಿಯಸ್ ಎಂದು ಕರೆಯಲ್ಪಡುವ ಜಾಗದಲ್ಲಿ ವಿದ್ಯುದ್ವಾರಗಳಂತಹ ಎರಡು ತೆಳುವಾದ ತಂತಿಯನ್ನು ಇರಿಸುವ ಶಸ್ತ್ರಚಿಕಿತ್ಸೆ ಇದಾಗಿತ್ತು.

ಸದ್ಯ ರೋಗಿಯ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. 5-6 ವರ್ಷಗಳಿಂದ ಸೇವಿಸುತ್ತಿದ್ದ ಔಷಧಿಗಳನ್ನು ಶೇ 60ರಷ್ಟು ಕಡಿಮೆ ಮಾಡಿದ್ದಾರೆ. ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಸಾಧ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬ್ರೈನ್ಸೆನ್ಸ್ ತಂತ್ರಜ್ಞಾನದೊಂದಿಗೆ ಮಿದುಳಿನಲ್ಲಿ ಅಳವಡಿಸಲಾಗಿರುವ ಸಾಧನವು ಮಿದುಳಿನ ಸಂಕೇತಗಳನ್ನು ದಾಖಲಿಸುತ್ತದೆ. ರೋಗಿಯ ಅಗತ್ಯಗಳಿಗೆ ಅನುಗುಣವಾಗಿ ಸ್ಪಂದಿಸಲು ಸಾಧನಕ್ಕೆ ರಿಮೋಟ್ ಕಂಟ್ರೋಲ್ ವ್ಯವಸ್ಥೆ ಇದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.

ಬೆಂಗಳೂರು, ಮುಂಬೈನಂತಹ ಮಹಾ ನಗರಗಳಲ್ಲಿ ಮಾತ್ರ ನಡೆಸಲಾಗುತ್ತಿದ್ದ ಸಂಕೀರ್ಣ ಪ್ರಕ್ರಿಯೆಯು ಕಡಿಮೆ ವೆಚ್ಚದಲ್ಲಿ ಮಣಿಪಾಲದ ಕಸ್ತೂರಬಾ ಆಸ್ಪತ್ರೆಯಲ್ಲಿ ಲಭ್ಯವಿದೆ ಎಂದುಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಯ ಸಿಒಒ ಡಾ.ಆನಂದ್ ವೇಣುಗೋಪಾಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.