ಉಡುಪಿ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯು ಮಂಗಳವಾರ ಅಬ್ಬರಿಸಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಮಂಗಳವಾರ ಮುಂಜಾನೆಯಿಂದ ಮಧ್ಯಾಹ್ನದ ವರೆಗೆ ಗಾಳಿ ಸಹಿತ ಭಾರಿ ಮಳೆಯಾಗಿದ್ದು, ಹಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿದ್ದವು. ಅಲ್ಪ ಬಿಡುವಿನ ನಂತರ ಸಂಜೆಯಿಂದ ಸಾಧಾರಣ ಮಳೆ ಸುರಿದಿದೆ.
ಮಳೆಗಾಲ ಸನ್ನಿಹಿತವಾದರೂ ಸಂಬಂಧಪಟ್ಟವರು ಸಾಕಷ್ಟು ಪೂರ್ವತಯಾರಿ ನಡೆಸದಿರುವುದರಿಂದ ಉಡುಪಿ ನಗರದಲ್ಲಿ ಸಮಸ್ಯೆ ಉಂಟಾಗಿದೆ. ಚರಂಡಿಗಳ ಹೂಳು ತೆಗೆಯದ ಕಾರಣ ಮಳೆನೀರು ರಸ್ತೆಯಲ್ಲೇ ಹರಿದು ಅವಾಂತರ ಉಂಟಾಗಿದೆ ಎಂದು ಜನರು ದೂರಿದ್ದಾರೆ.
ಹಲವು ಗಂಟೆಗಳ ಕಾಲ ನಿರಂತರವಾಗಿ ಮಳೆ ಸುರಿದ ಕಾರಣ ಮಳೆ ನೀರು ಹರಿದುಹೋಗಲು ಸಮರ್ಪಕ ವ್ಯವಸ್ಥೆ ಇಲ್ಲದೆ ಅಂಬಲಪಾಡಿಯಲ್ಲಿ ರಸ್ತೆ ಕೆರೆಯಂತಾಗಿತ್ತು. ಇದರಿಂದ ಬೆಳಿಗ್ಗೆ ಕೆಲಸಕ್ಕೆ ಹೋಗುವವರಿಗೆ ಸಮಸ್ಯೆಯಾಗಿತ್ತು.
ಅಂಬಲಪಾಡಿಯಲ್ಲಿ ಮೇಲ್ಸೆತುವೆ ಕಾಮಗಾರಿ ನಡೆಯುತ್ತಿರುವುದರಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಸೇರಿದಂತೆ ಎಲ್ಲಾ ವಾಹನಗಳು ಸರ್ವಿಸ್ ರಸ್ತೆಗಳಲ್ಲಿಯ ಸಂಚರಿಸುತ್ತಿವೆ. ಈ ಸರ್ವಿಸ್ ರಸ್ತೆಗಳ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ರಸ್ತೆಯಲ್ಲೇ ಮಳೆ ನೀರು ಸಂಗ್ರಹವಾಗಿತ್ತು. ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಚ್ಚಿನ ತೊಂದರೆಯಾಗಿತ್ತು. ಶಿವಪಾಡಿ, ಸಗ್ರಿಯಲ್ಲೂ ತಗ್ಗು ಪ್ರದೇಶಗಳು ಜಲಾವೃತವಾಗಿದ್ದವು.
ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಕಾರ್ಕಳದಲ್ಲಿ 7.2 ಸೆಂ.ಮೀ, ಉಡುಪಿಯಲ್ಲಿ 6 ಸೆಂ.ಮೀ., ಕಾಪುವಿನಲ್ಲಿ 7.3 ಸೆಂ.ಮೀ., ಹೆಬ್ರಿಯಲ್ಲಿ 2.6 ಸೆಂ.ಮೀ ಮಳೆಯಾಗಿದೆ.
ಕಾಲುವೆಯಂತಾದ ಮಣಿಪಾಲ ರಸ್ತೆ
ಮಂಗಳವಾರ ಬೆಳಿಗ್ಗೆ ಸುರಿದ ಬಿರುಸಿನ ಮಳೆಗೆ ಮಣಿಪಾಲದ ಲಕ್ಷ್ಮೀಂದ್ರ ನಗರದ ಬಳಿ ರಾಷ್ಟ್ರೀಯ ಹೆದ್ದಾರಿಯು ಕಾಲುವೆಯಂತಾಗಿತ್ತು. ಕಲ್ಲು ಮಣ್ಣು ಸೇರಿದ ಕೆಸರು ನೀರು ರಭಸದಿಂದ ಇಳಿಜಾರು ರಸ್ತೆಯಲ್ಲಿ ಹರಿದಿದೆ. ನೀರು ಹರಿದ ರಭಸಕ್ಕೆ ರಸ್ತೆಯ ಪಕ್ಕ ಕಣಿವೆ ನಿರ್ಮಾಣವಾಗಿದೆ. ಚರಂಡಿಯಲ್ಲಿ ಹೂಳು ತುಂಬಿದ್ದ ಕಾರಣ ನೀರು ಉಕ್ಕಿ ರಸ್ತೆಗೆ ಹರಿದಿದೆ. ಇದರಿಂದ ಕೆಲಕಾಲ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ನಗರ ಸಭೆಯವರು ಬಂದು ನೀರು ಹರಿದು ಹೋಗಲು ವ್ಯವಸ್ಥೆ ಮಾಡಿದ ಬಳಿಕ ರಸ್ತೆಯಲ್ಲಿ ವಾಹನಗಳು ಸಂಚರಿಸಿದವು. ನೀರು ಹರಿಯುವುದು ನಿಂತ ಬಳಿಕ ರಸ್ತೆಯಲ್ಲಿ ಕಲ್ಲುಗಳ ರಾಶಿ ತುಂಬಿತ್ತು. ಸಮೀಪದ ಅಂಗಡಿಗಳಿಗೂ ಮಳೆ ನೀರು ನುಗ್ಗಿದ ಕಾರಣ ಹಾನಿಯುಂಟಾಗಿದೆ. ಶಾಸಕ ಯಶ್‌ಪಾಲ್ ಸುವರ್ಣ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸೂಚನೆಗಳನ್ನು ಪಾಲಿಸಿ: ಡಿ.ಸಿ.
ಈಗಾಗಲೇ ಪ್ರಸಕ್ತ ಸಾಲಿನ ಮುಂಗಾರು ಪ್ರಾರಂಭವಾಗಿದ್ದು ಈ ಸಂದರ್ಭದಲ್ಲಿ ಗುಡುಗು ಸಿಡಿಲಿನಿಂದ ಹಾಗೂ ಗಾಳಿ ಮಳೆಯಿಂದ ಸಾರ್ವಜನಿಕರ ಮತ್ತು ಜಾನುವಾರುಗಳ ಪ್ರಾಣಹಾನಿಯಾಗುವ ಸಂಭವವಿರುತ್ತದೆ. ಈ ಹಿಂದಿನ ಸಾಲಿನಲ್ಲಿ ಗುಡುಗು ಸಿಡಿಲಿನಿಂದ ಮತ್ತು ಗಾಳಿ ಮಳೆಯಿಂದ ಅಧಿಕ ಪ್ರಮಾಣದಲ್ಲಿ ಜಾನುವಾರು ಹಾಗೂ ಮಾನವ ಹಾನಿ ಸಂಭವಿಸಿದ್ದು ಅದನ್ನು ತಡೆಗಟ್ಟಲು ಪ್ರಸ್ತುತ ಸಾಲಿನಲ್ಲಿ ಸಾರ್ವಜನಿಕರು ಭಾರತೀಯ ಹವಾಮಾನ ಇಲಾಖೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹಾಗೂ ಜಿಲ್ಲಾ ಪ್ರಾಧಿಕಾರದಿಂದ ಹೊರಡಿಸುವ ಮುನ್ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅಂತಹ ಸಂದರ್ಭದಲ್ಲಿ ಮಕ್ಕಳು ಹಾಗೂ ಸಾರ್ವಜನಿಕರು ಆದಷ್ಟೂ ಮನೆಯಲ್ಲಿಯೇ ಇದ್ದು ಯಾವುದೇ ಅನಾಹುತವಾಗದಂತೆ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಬೇಕು. ಇದರಿಂದ ಸಂಭವಿಸಬಹುದಾದ ಮಾನವ ಹಾಗೂ ಜಾನುವಾರು ಪ್ರಾಣ ಹಾನಿಯನ್ನು ತಡೆಗಟ್ಟಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.