ADVERTISEMENT

ಯಾದಗಿರಿಯಲ್ಲಿ 25 ಫಾರ್ಮಾ ಕಂಪೆನಿಗಳ ಸ್ಥಾಪನೆಗೆ ಅನುಮತಿ: ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 12:20 IST
Last Updated 6 ನವೆಂಬರ್ 2020, 12:20 IST
ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌   

ಉಡುಪಿ: ಯಾದಗಿರಿ ಜಿಲ್ಲೆಯಲ್ಲಿ ಕೆಐಎಡಿಬಿಯಿಂದ ಅಭಿವೃದ್ಧಿಪಡಿಸುತ್ತಿರುವ 4 ಸಾವಿರ ಎಕರೆ ಫಾರ್ಮಾ ಪಾರ್ಕ್‌ನಲ್ಲಿ ಹೈದರಾಬಾದ್‌ನ 25 ಫಾರ್ಮಾ ಕಂಪೆನಿಗಳಿಗೆ ಕಾರ್ಖಾನೆ ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.

ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಫಾರ್ಮಾ ಕಂಪೆನಿಗಳಿಂದ ₹ 1,000 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, ಸ್ಥಳೀಯವಾಗಿ ಉದ್ಯೋಗಗಳು ಸೃಷ್ಟಿಯಾಗಿ, ವಲಸೆ ಹೋಗುವ ಪ್ರಮಾಣ ತಗ್ಗಲಿದೆ ಎಂದರು.

ಬೆಂಗಳೂರು ಕೇಂದ್ರಿತ ಕೈಗಾರಿಕೆಗಳ ಸ್ಥಾಪನೆ ತಪ್ಪಿಸಲು, 2 ಹಾಗೂ 3ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಲಾಗಿದೆ. ಅದಕ್ಕಾಗಿ ಕೈಗಾರಿಕಾ ನೀತಿಯಲ್ಲಿ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳನ್ನು ವಲಯ–1ಕ್ಕೆ ಸೇರಿಸಿ ಹಲವು ಸೌಲಭ್ಯಗಳನ್ನು ನೀಡಲಾಗಿದೆ ಎಂದರು.

ADVERTISEMENT

ಕೊಪ್ಪಳದ ಆಟಿಕೆಗಳ ಕ್ಲಸ್ಟರ್‌ನಲ್ಲಿ ಕಂಪೆನಿ ಸ್ಥಾಪಿಸಲು ಉದ್ಯಮಿಗಳು ಒಲವು ತೋರಿದ್ದು, ಖಾಸಗಿ ವ್ಯಕ್ತಿಗಳಿಂದ 600 ಎಕರೆ ಜಮೀನು ಖರೀದಿಸಿದ್ದಾರೆ. ಹಾಗೆಯೇ, ಹುಬ್ಬಳ್ಳಿ–ಧಾರವಾಡದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್‌ ಆರಂಭಕ್ಕೆ ಸಿದ್ಧತೆ ನಡೆಯುತ್ತಿದ್ದು ಯಶಸ್ವಿಯಾದರೆ 20 ರಿಂದ 30,000 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಶೆಟ್ಟರ್ ಹೇಳಿದರು.

ರಾಜಕೀಯ ಬೇಡ:ಯುಪಿಎ ಸರ್ಕಾರವಿದ್ದಾಗ ಜನಾರ್ಧನ ರೆಡ್ಡಿ ಅವರನ್ನು ಸಿಬಿಐ ಬಂಧಿಸಿತ್ತು. ಆಗ, ಬಿಜೆಪಿ ರಾಜಕೀಯ ಮಾಡಿರಲಿಲ್ಲ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌, ವಿನಯ್‌ ಕುಲಕರ್ಣಿ ಬಂಧನ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಬಂಧನ ವಿಚಾರದಲ್ಲಿ ಸ್ವಾಮೀಜಿಗಳ ಮಧ್ಯ ಪ್ರವೇಶ ಹಾಗೂ ಹೇಳಿಕೆಗಳ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮೇಲ್ನೋಟಕ್ಕೆ ಜೋಡಿಗಳಂತೆ ಇದ್ದಾರೆ. ಮುಂದೆ ಮುಖ್ಯಮಂತ್ರಿ ಕುರ್ಚಿ ಹಿಡಿಯಲು ಒಳಗೊಳಗೆ ಒಬ್ಬರ ವಿರುದ್ಧ ಮತ್ತೊಬ್ಬರು ಕತ್ತಿ ಮಸಿಯುತ್ತಿದ್ದಾರೆ ಎಂದು ಶೆಟ್ಟರ್‌ ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.