ADVERTISEMENT

34,918 ಹೆಕ್ಟೇರ್‌ ಕೈಬಿಡಲು ಜಿಲ್ಲಾಡಳಿತದಿಂದ ಮನವಿ

ಜಿಲ್ಲೆಯಲ್ಲಿ 68,794 ಹೆಕ್ಟೇರ್ ಡೀಮ್ಡ್‌ ಫಾರೆಸ್ಟ್‌ ಪ್ರದೇಶ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 15:41 IST
Last Updated 19 ಡಿಸೆಂಬರ್ 2019, 15:41 IST
ಉಡುಪಿ ಪ್ರಜಾವಾಣಿ ಕಚೇರಿಯಲ್ಲಿ ಗುರುವಾರ ನಡೆದ ಫೋನ್‌ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ಭಾಗವಹಿಸಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.
ಉಡುಪಿ ಪ್ರಜಾವಾಣಿ ಕಚೇರಿಯಲ್ಲಿ ಗುರುವಾರ ನಡೆದ ಫೋನ್‌ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ಭಾಗವಹಿಸಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.   

ಉಡುಪಿ: ಜಿಲ್ಲೆಯಲ್ಲಿ68,794 ಹೆಕ್ಟೇರ್ ಪ್ರದೇಶ ಡೀಮ್ಡ್‌ ಫಾರೆಸ್ಟ್‌ ವ್ಯಾಪ್ತಿಗೊಳಪಟ್ಟಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಬಡವರಿಗೆ ಹಕ್ಕುಪತ್ರ ನೀಡಲು ಕಾನೂನಾತ್ಮಕವಾಗಿ ಅಡ್ಡಿಯಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದರು.

ಗುರುವಾರ ಉಡುಪಿ ‘ಪ್ರಜಾವಾಣಿ’ ಕಚೇರಿಯಲ್ಲಿ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಸುಪ್ರೀಂಕೋರ್ಟ್‌ನ ಆದೇಶದಂತೆ ಡೀಮ್ಡ್‌ ಫಾರೆಸ್ಟ್‌ ಜಾಗವನ್ನು ಯಾರಿಗೂ ಹಂಚಿಕೆ ಮಾಡಲು ಸಾಧ್ಯವಿಲ್ಲ. ಹಾಗಾಗಿ,34,918 ಹೆಕ್ಟೇರ್‌ ಪ್ರದೇಶವನ್ನು ಡೀಮ್ಡ್‌ ಫಾರೆಸ್ಟ್‌ನಿಂದ ಕೈಬಿಡಬೇಕು ಎಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಮನವಿಗೆ ಒಪ್ಪಿಗೆ ಸಿಕ್ಕರೆ ಬಡವರಿಗೆ ಹಕ್ಕುಪತ್ರಗಳನ್ನು ನೀಡಬಹುದು ಎಂದರು.

ಮರಳಿನ ಸಮಸ್ಯೆ ಬಗೆಹರಿಸಲು ಆದ್ಯತೆ:

ADVERTISEMENT

2 ವರ್ಷಗಳಿಂದ ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಗಂಭೀರವಾಗಿತ್ತು. ಕಾನೂನಿನ ಅಡೆತಡೆಗಳು ನಿವಾರಣೆಯಾದ ಬಳಿಕ, ಈಚೆಗಷ್ಟೆ ಮರಳುಗಾರಿಕೆ ಆರಂಭವಾಗಿದೆ. ಆದರೆ, ಸಂಪೂರ್ಣವಾಗಿ ಆರಂಭವಾಗಿಲ್ಲ. ಇನ್ನೂ 6 ತಿಂಗಳಲ್ಲಿ ಸಮಸ್ಯೆ ಸಂಪೂರ್ಣ ಬಗೆಹರಿಯುವ ವಿಶ್ವಾಸವಿದೆ ಎಂದು ಡಿಸಿ ಹೇಳಿದರು.

ಸದ್ಯ ಜಿಲ್ಲೆಯ ಮರಳನ್ನು ಹೊರ ಜಿಲ್ಲೆಗಳಿಗೆ ಸಾಗಾಟ ಮಾಡಲು ನಿರ್ಬಂಧ ಹೇರಲಾಗಿದೆ. ಜಿಲ್ಲೆಯ ಬೇಡಿಕೆಯಷ್ಟು ಮರಳು ಪೂರೈಕೆಯಾದ ಬಳಿಕ, ಲಾರಿ ಮಾಲೀಕರ, ಕಾರ್ಮಿಕರ ಹಾಗೂ ಮರಳು ಉದ್ಯಮ ನಂಬಿ ಬದುಕುತ್ತಿರುವವರ ಹಿತದೃಷ್ಟಿಯಿಂದ ಹೊರ ಜಿಲ್ಲೆಗಳಿಗೆ ಸಾಗಾಟ ಮಾಡಲು ಅನುಮತಿ ನೀಡುವ ಕುರಿತು ಯೋಚಿಸಲಾಗುವುದು ಎಂದರು.

ಕೆಲ ವರ್ಷಗಳಿಂದ ಜಿಲ್ಲೆಯಲ್ಲಿ ಮರಳು ತೆಗೆಯಲು ಅನುಮತಿ ಸಿಗದ ಪರಿಣಾಮ, ಹೆಚ್ಚಿನ ಪ್ರಮಾಣದಲ್ಲಿ ಮರಳು ಖರೀದಿಸಿ ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕರು ಅಗತ್ಯವಿದ್ದಷ್ಟು ಮಾತ್ರ ಮರಳು ಖರೀದಿಸಬೇಕು. ದೊಡ್ಡ ಕಾಮಗಾರಿಗೆ ಒಂದು ತಿಂಗಳಿಗಾಗುವಷ್ಟು ಮರಳನ್ನು ಮಾತ್ರ ಶೇಖರಿಸಿಟ್ಟುಕೊಳ್ಳಬಹುದು. ಅಗತ್ಯಕ್ಕಿಂತ ಹೆಚ್ಚಿನ ಮರಳು ಸಂಗ್ರಹಿಸಿದರೆ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಮಸ್ಯೆಗಳಿದ್ದು, ಹಂತಹಂತವಾಗಿ ಬಗೆಹರಿಸಲಾಗುತ್ತಿದೆ. ಮಣಿಪಾಲದ ಟೈಗರ್‌ ಸರ್ಕಲ್‌ ಬಳಿ ಭೂಸ್ವಾಧೀನ ಪ್ರಕ್ರಿಯೆ ಸಮಸ್ಯೆ ಬಗೆಹರಿದಿದ್ದು, ನನೆಗುದಿಗೆ ಬಿದ್ದಿದ್ದ ಕಾಮಗಾರಿಗೆ ಮತ್ತೆ ಚಾಲನೆ ಸಿಕ್ಕಿದೆ. ಇಂದ್ರಾಳಿ ರೈಲ್ವೆ ಸೇತುವೆ ಬಳಿ ಕಾಮಗಾರಿ ಬಾಕಿಯಿದ್ದು ಶೀಘ್ರ ರೈಲ್ವೆ ಅಧಿಕಾರಿಗಳ ಜತೆ ಸಭೆ ನಡೆಸಿ ಒಪ್ಪಿಗೆ ಪಡೆಯಲಾಗುವುದು. ಶೀಘ್ರವೇ ಮಣಿಪಾಲ ಅಂತ್ಯದವರೆಗೂ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಲಿದೆ ಎಂದರು.

ಮಣಿಪಾಲದಿಂದ ಪರ್ಕಳದವರೆಗೆ ಹೆದ್ದಾರಿ ನಿರ್ಮಾಣಕ್ಕೆ ಸ್ಥಳೀಯರಿಂದ ಭಿನ್ನ ಅಭಿಪ್ರಾಯಗಳು ಕೇಳಿಬಂದಿವೆ. ಕೆಲವರು ಹಳೆಯ ರಸ್ತೆ ವಿಸ್ತರಣೆ ಮಾಡಿ ಎಂದರೆ, ಕೆಲವರು ಹೊಸ ಮಾರ್ಗದಲ್ಲಿ ರಸ್ತೆ ನಿರ್ಮಿಸಿ ಎಂದು ಮನವಿ ಮಾಡಿದ್ದಾರೆ. ಯೋಜನೆಯಲ್ಲಿರುವಂತೆ ಹೊಸ ಮಾರ್ಗದಲ್ಲಿಯೇ ರಸ್ತೆ ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ. ಶೀಘ್ರ ಭೂಸ್ವಾಧೀನ ನಡೆದು ಕಾಮಗಾರಿ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.