ADVERTISEMENT

ಕುಂದಾಪುರ: ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರ ಅನಾವರಣ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 13:06 IST
Last Updated 5 ಜೂನ್ 2025, 13:06 IST
<div class="paragraphs"><p>ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾಮಂದಿರದಲ್ಲಿ ಬುಧವಾರ ಕಸಾಪ ಸಂಸ್ಥಾಪಕರ ದಿನಾಚರಣೆ ನಡೆಯಿತು</p></div>

ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾಮಂದಿರದಲ್ಲಿ ಬುಧವಾರ ಕಸಾಪ ಸಂಸ್ಥಾಪಕರ ದಿನಾಚರಣೆ ನಡೆಯಿತು

   

ಕುಂದಾಪುರ: ಶಾಲಾ ಪಠ್ಯ ಪುಸ್ತಕಗಳಲ್ಲಿ ಸತ್ಯಕ್ಕಿಂತ ಹೆಚ್ಚು ಸುಳ್ಳುಗಳನ್ನೆ ಪಾಠದ ಮೂಲಕ ಹೇಳಿಸಲಾಗಿದೆ. ಕೆಲವರಿಗೆ ಇದರ ಸತ್ಯಗಳು ಗೊತ್ತಿದ್ದರೂ, ಮೌನಕ್ಕೆ ಶರಣಾಗಿ ಸುಳ್ಳನ್ನಷ್ಟೇ ಪ್ರಚಾರ ಮಾಡುವ ವರ್ಗಗಳಿವೆ ಎಂದು ಲೇಖಕಿ, ನಿವೃತ್ತ ಉಪನ್ಯಾಸಕಿ ಪಾರ್ವತಿ ಜಿ. ಐತಾಳ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ, ತಾಲ್ಲೂಕು ಘಟಕದ ವತಿಯಿಂದ ಕಸಾಪ ಸಂಸ್ಥಾಪಕ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 141ನೇ ಜನ್ಮ ದಿನದ ಪ್ರಯುಕ್ತ ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾಮಂದಿರದಲ್ಲಿ ನಡೆದ ಸಂಸ್ಥಾಪಕರ ದಿನಾಚರಣೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರ ಅನಾವರಣಗೊಳಿಸಿ ಅವರು ಮಾತನಾಡಿದರು.

ADVERTISEMENT

ದೇಶದಲ್ಲಿ ಇದೀಗ ಪಠ್ಯ ಪುಸ್ತಕದ ಬದಲಾವಣೆ ಪರ್ವ ಆರಂಭವಾಗಿದೆ. ದೇಶದ ಮೇಲೆ ದಾಳಿ ಮಾಡಿ, ಆಡಳಿತ ನಡೆಸಿದವರನ್ನೂ ವೈಭವೀಕರಿಸಿ ಇತಿಹಾಸದ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಸುಳ್ಳು ಕಲಿಸಲಾಗಿದೆ ಎಂದರು.

ತಾಲ್ಲೂಕು ಘಟಕದ ಅಧ್ಯಕ್ಷ ಉಮೇಶ್ ಪುತ್ರನ್, ಕನ್ನಡ ನಾಡು ನುಡಿ ಮತ್ತು ಸಾಹಿತ್ಯ ಪರಿಷತ್‌ ಬಗ್ಗೆ ಮಾತನಾಡಿದರು.

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ, ‘ಕಸಾಪಕ್ಕೆ ಈಗ ರಾಜ್ಯ ಸರ್ಕಾರದಿಂದ ಅನುದಾನ ಬರುತ್ತಿಲ್ಲ. ಸ್ಥಾಪಕರ ದಿನಕ್ಕೆ ಬರುತ್ತಿದ್ದ ₹4 ಸಾವಿರ ಅನುದಾನ ಹಾಗೂ ತಾಲ್ಲೂಕು ಸಮ್ಮೇಳನಕ್ಕೆ ನೀಡುತ್ತಿದ್ದ ಅನುದಾನ ಸ್ಥಗಿತವಾಗಿದೆ. ಬಹುತೇಕ ಜಿಲ್ಲೆಗಳಿಗೆ ಜಿಲ್ಲಾ ಸಮ್ಮೇಳನಕ್ಕೇ ಅನುದಾನವೇ ಬಂದಿಲ್ಲ’ ಎಂದು ದೂರಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ, ಜಿಲ್ಲಾ ಕಸಾಪ ಕೋಶಾಧಿಕಾರಿ ಮನೋಹರ ಪಿ., ತಾಲ್ಲೂಕು ಕಾರ್ಯದರ್ಶಿ ಅಕ್ಷತಾ ಗಿರೀಶ್ ಇದ್ದರು. ಉಪನ್ಯಾಸಕ ಕಾಳಾವರ ಉದಯ ಕುಮಾರ್ ಶೆಟ್ಟಿ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.