ADVERTISEMENT

ಮಕ್ಕಳಿಗೆ ಹಾಡು, ಕಥೆ ಹೇಳುವ ಸಂಸ್ಕೃತಿ ಉಳಿಸಲು ಗಮನ: ಜಗದೀಶ್‌ ಪೈ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 6:00 IST
Last Updated 17 ಅಕ್ಟೋಬರ್ 2019, 6:00 IST
   

ಉಡುಪಿ:ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಲಾಭಿ ಮಾಡಿರಲಿಲ್ಲ; ಅರ್ಜಿಯನ್ನೂ ಹಾಕಿರಲಿಲ್ಲ. ಅಧ್ಯಕ್ಷ ಹುದ್ದೆ ಬಯಸದೆ ಬಂದ ಭಾಗ್ಯ. ಸರ್ಕಾರ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಶ್ರದ್ಧೆಯಿಂದ ನಿಭಾಯಿಸುತ್ತೇನೆ ಎಂದು ಕೊಂಕಣಿ ಅಕಾಡೆಮಿ ಅಧ್ಯಕ್ಷರಾಗಿ ನೇಮಕವಾದ ಕಾರ್ಕಳದ ವೈದ್ಯ ಡಾ.ಜಗದೀಶ್ ಪೈ ತಿಳಿಸಿದರು.

ಮಾಧ್ಯಮಗಳಲ್ಲಿ ಅಕಾಡೆಮಿಗೆ ನೇಮಕವಾದ ಸುದ್ದಿ ಬಂದಾಗ ನಂಬಲಿಲ್ಲ. ವೈದ್ಯ ವೃತ್ತಿ ಮಾಡುವ ನನಗೆ ಕೊಂಕಣಿ ಅಕಾಡೆಮಿ ಅಧ್ಯಕ್ಷ ಸ್ಥಾನ ಸಿಗಲು ಸಾಧ್ಯವೇ ಎಂಬ ಪ್ರಶ್ನೆಗಳು ಎದ್ದವು. ಒಂದಾದಮೇಲೆ ಒಂದರಂತೆ ದೂರವಾಣಿ ಕರೆಗಳು ಬಂದಾಗ ನೇಮಕ ಖಚಿತವಾಯಿತು ಎಂದು ಜಗದೀಶ್‌ ಪೈ ಅನುಭವ ಹಂಚಿಕೊಂಡರು.

ಕೊಂಕಣಿ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದ್ದು, ಈಚೆಗೆ ಕೆಲವು ಆಚರಣೆಗಳು ನಶಿಸುವ ಹಂತಕ್ಕೆ ಬಂದಿವೆ. ಚಿಕ್ಕಮಕ್ಕಳಿಗೆ ಕೊಂಕಣಿಯ ಹಾಡುಗಳನ್ನು ಹೇಳುವ, ಕಥೆ ಹೇಳುವ ಸಂಸ್ಕೃತಿ ಮರೆಯಾಗುತ್ತಿದೆ. ಅವುಗಳನ್ನು ಮತ್ತೆ ಮುನ್ನಲೆಗೆ ತರುವ ಆಲೋಚನೆ ಇದೆ ಎಂದರು.

ADVERTISEMENT

ಅಕಾಡೆಮಿಯ ಸದಸ್ಯರ ಜತೆ ಚರ್ಚಿಸಿ, ಅಭಿಪ್ರಾಯ ಸಂಗ್ರಹಿಸಿ, ಸರ್ಕಾರದಿಂದ ಲಭ್ಯವಾಗುವ ಅನುದಾನವನ್ನು ಬಳಸಿಕೊಂಡು ಕೆಲಸ ಮಾಡುವ ಉದ್ದೇಶವಿದೆ ಎಂದು ತಿಳಿಸಿದರು.

ಹುಟ್ಟಿ ಬೆಳೆದಿದ್ದು ಕಾರ್ಕಳದಲ್ಲಿ. ಇಲ್ಲಿಯೇ ಜನರಲ್ ಪ್ರಾಕ್ಟಿಷನರ್ ಆಗಿದ್ದೇನೆ. ಉತ್ಥಾನ ಪತ್ರಿಕೆಯಲ್ಲಿ ತಿಂಗಳಿಗೊಮ್ಮೆ ವ್ಯಕ್ತಿತ್ವ ವಿಕಸನ ಕುರಿತು, ಅಧ್ಯಾತ್ಮದ ಹಿನ್ನೆಲೆಯಲ್ಲಿ ಲೇಖನ ಬರೆಯುತ್ತಿದ್ದೇನೆ. ಉತ್ಕರ್ಷ ಪಥ ಹಾಗೂ ಸಾರ್ಥಕ ಜೀವನದ ನಿಚ್ಚಣಿಗೆ ಪುಸ್ತಕಗಳು ಪ್ರಕಟವಾಗಿವೆ ಎಂದು ವೃತ್ತಿ ಹಾಗೂ ಪ್ರವೃತ್ತಿಯ ಬಗ್ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.