ADVERTISEMENT

ಕೋವಿಡ್‌: ಉಡುಪಿಯಲ್ಲಿ ಅತಿ ಹೆಚ್ಚು ಸೋಂಕಿತರು

92 ಮಂದಿಗೆ ಕೋವಿಡ್‌ ಸೋಂಕು: ರಾಜ್ಯಕ್ಕೆ ಪ್ರಥಮ, 564ಕ್ಕೇರಿಕೆಯಾದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 17:01 IST
Last Updated 4 ಜೂನ್ 2020, 17:01 IST
ಕೊರೊನಾ ವೈರಸ್‌
ಕೊರೊನಾ ವೈರಸ್‌   

ಉಡುಪಿ: ಜಿಲ್ಲೆಯಲ್ಲಿ ಗುರುವಾರ 92 ಮಂದಿಗೆ ಕೋವಿಡ್‌–19 ಸೋಂಕು ದೃಢಪಟ್ಟಿದೆ. ಸೋಂಕಿತರೆಲ್ಲರೂ ಮುಂಬೈನಿಂದ ಬಂದವರಾಗಿದ್ದು, 78 ಪುರುಷರು, 13 ಮಹಿಳೆಯರು ಹಾಗೂ ಒಂದು ಮಗುವಿಗೆ ಸೋಂಕು ತಗುಲಿದೆ.

92 ಸೋಂಕಿತರಲ್ಲಿ ಐವರಲ್ಲಿ ಮಾತ್ರ ಸೋಂಕಿನ ಗುಣಲಕ್ಷಣಗಳಿದ್ದು, ಅವರಿಗೆ ಡಾ.ಟಿಎಂಎ ಪೈ ಕೋವಿಡ್‌ ಆಸ್ಪತ್ರೆಯಲ್ಲಿ, ಉಳಿದವರಿಗೆ ಆಯಾ ತಾಲ್ಲೂಕಿನ ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಸೋಂಕಿತರಲ್ಲಿ ಒಬ್ಬರು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಮಾಹಿತಿ ನೀಡಿದರು.

ಮತ್ತೆ ಮೊದಲ ಸ್ಥಾನ: 92 ಸೋಂಕಿತ ಪ್ರಕರಣಗಳೊಂದಿಗೆ ಉಡುಪಿ ಮತ್ತೆ ರಾಜ್ಯದಲ್ಲೇ ಅತಿ ಹೆಚ್ಚು ಸೋಂಕಿತರು ಇರುವ ಜಿಲ್ಲೆಯಾಗಿ ಗುರುತಿಸಿಕೊಂಡಿದೆ. ಬುಧವಾರ ಮೊದಲ ಸ್ಥಾನದಲ್ಲಿದ್ದ ಕಲಬುರಗಿಯನ್ನು ಉಡುಪಿ ಮತ್ತೆ ಹಿಂದಿಕ್ಕಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 564ಕ್ಕೇರಿಕೆಯಾಗಿದ್ದು, 481 ಸಕ್ರಿಯ ಪ್ರಕರಣಗಳಿವೆ.82 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.

ADVERTISEMENT

3119 ವರದಿ ನೆಗೆಟಿವ್‌: ಗುರುವಾರ ಒಂದೇ ದಿನ 3,211 ವರದಿಗಳು ಬಂದಿದ್ದು, ಇದರಲ್ಲಿ 92 ಪಾಸಿಟಿವ್ ಹಾಗೂ 3,119 ವರದಿಗಳು ನೆಗೆಟಿವ್ ಬಂದಿವೆ. ಇನ್ನೂ 1,732 ವರದಿಗಳು ಬರಬೇಕಿದ್ದು, ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

20 ಮಂದಿ ಬಿಡುಗಡೆ: ಸೋಂಕಿನಿಂದ ಗುಣಮುಖರಾದ 20 ಮಂದಿ ಗುರುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈಚೆಗಷ್ಟೆ, ಕುಂದಾಪುರ ಹಾಗೂ ಉಡುಪಿ ಕೋವಿಡ್ ಆಸ್ಪತ್ರೆಗಳಿಂದ ಹಲವರು ಗುಣಮುಖರಾಗಿ ಡಿಸ್‌ಚಾರ್ಜ್‌ ಆಗಿದ್ದರು.

ಕಂಟೈನ್‌ಮೆಂಟ್ ಝೋನ್‌: ಸೋಂಕಿತರು ವಾಸವಿದ್ದ ಮನೆಗಳ ಸುತ್ತಲಿನ ಪ್ರದೇಶವನ್ನು ಜಿಲ್ಲಾಡಳಿತ ಕಂಟೈನ್‌ಮೆಂಟ್‌ ಪ್ರದೇಶಗಳಾಗಿಸಿದೆ. ಬೆಂದೂರು ತಾಲ್ಲೂಕಿನ ಕೆರ್ಗಾಲು, ಯಳಜಿತ್, ಬಿಜೂರು, ನಾಡ, ಶಿರ್ವ ಉಡುಪಿ ತಾಲ್ಲೂಕಿನ ಪುತ್ತೂರು, ಕುಂದಾಪುರ ತಾಲ್ಲೂಕಿನ ವಡ್ಡರ್ಸೆ ಗ್ರಾಮಗಳನ್ನು ಕಂಟೈನ್‌ಮೆಂಟ್‌ ಪ್ರದೇಶಗಳಾಗಿ ಮಾಡಿದ್ದು, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.