
ಉಡುಪಿ: ‘ಕೃಷ್ಣ ಮಠದಲ್ಲಿ ನ.28ರಂದು ನಡೆದ, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ತಪ್ಪಿದ್ದಕ್ಕೆ ಬೇಸರ ಇಲ್ಲ. ಅವಕಾಶ ತಪ್ಪಿಸಿದವರು ಯಾರು ಎಂದು ಗೊತ್ತಿಲ್ಲ. ಯಾರ ಮೇಲೆಯೂ ಗೂಬೆ ಕೂರಿಸುವುದಿಲ್ಲ’ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ನ. 27ರಂದು ರಾತ್ರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕರೆ ಮಾಡಿ ಪ್ರಧಾನಿ ಸ್ವರ್ಣ ಕವಚ ಅನಾವರಣಗೊಳಿಸುವ ಕಾರ್ಯಕ್ರಮಕ್ಕೆ ನಿಮಗೆ ಪ್ರವೇಶ ಇಲ್ಲ ಎಂದು ತಿಳಿಸಿದ್ದರು. ಮನೆಯಲ್ಲೇ ಕುಳಿತು ಕಾರ್ಯಕ್ರಮ ವೀಕ್ಷಿಸಿದೆ’ ಎಂದರು.
‘ನಾನು ಭಾಗವಹಿಸದೇ ಇದ್ದ ವಿಚಾರ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ. ಅವಕಾಶ ಕೊಡಿ ಎಂದು ಯಾರನ್ನೂ ಕೋರಿರಲಿಲ್ಲ. ತಿಂಗಳ ಹಿಂದೆ ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರನ್ನು ಭೇಟಿಯಾಗಿದ್ದಾಗ ಸ್ವರ್ಣ ಕವಚದ ವಿಚಾರ ಪ್ರಸ್ತಾಪಿಸಿದರು. ನಾನು ಅದನ್ನು ಸೇವೆಯ ರೂಪದಲ್ಲಿ ಮಾಡಿಸುವುದಾಗಿ ಒಪ್ಪಿಕೊಂಡಿದ್ದೆ. ಸ್ವರ್ಣ ಕವಚ ಅನಾವರಣವನ್ನು ಪ್ರಧಾನಿ ನಿರ್ವಹಿಸುವರು ಎಂದು ಅನಂತರ ಪುತ್ತಿಗೆ ಶ್ರೀಗಳು ಘೋಷಿಸಿದ್ದರು’ ಎಂದು ಪ್ರಮೋದ್ ಹೇಳಿದರು.
‘ಪಾಸ್‌ಗಾಗಿ ನಾಲ್ಕು ಬಾರಿ ಆಧಾರ್ ಪ್ರತಿ ಮತ್ತು ಫೋಟೊ ಕೊಟ್ಟಿದ್ದೆ. ಸ್ವರ್ಣ ಕವಚ ಅನಾವರಣ ಮಾಡುವಾಗ ಎಲ್ಲಾದರೂ ದೂರ ನಿಂತು ನೋಡಲು ಅವಕಾಶ ಸಿಗಬಹುದು ಎಂದುಕೊಂಡಿದ್ದೆ, ಸಿಗಲಿಲ್ಲ. ಕನಕನ ಸೇವೆ ಮಾಡಲು ಅವಕಾಶ ಕೊಟ್ಟಿದ್ದಕ್ಕೆ ಪುತ್ತಿಗೆ ಶ್ರೀಗಳಿಗೆ ಕೃತಜ್ಞತೆ ಸಲ್ಲಿಸಿದ್ದೇನೆ’ ಎಂದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಪಾಲ್ಗೊಂಡಿದ್ದರು.
‘ಮನವಿ ಮಾಡಿಯೂ ಸಿ.ಎಂ ಬಂದಿರಲಿಲ್ಲ’ ‘
ದೇಶದ ಪ್ರಧಾನಿ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕನಕನ ಕಿಂಡಿಯ ಸ್ವರ್ಣ ಕವಚ ಅನಾವರಣಗೊಳಿಸಿ ಕನಕನ ಕಿಂಡಿಯ ಮೂಲಕ ದೇವರ ದರ್ಶನ ಮಾಡಿದ್ದು ಸಮಸ್ತ ಕನಕ ಕೃಷ್ಣನ ಭಕ್ತರಿಗೆ ಸಂತಸ ತಂದಿದೆ. ನಾನು ಶಾಸಕ ಸಚಿವನಾಗಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ಕು ಬಾರಿ ಉಡುಪಿಗೆ ಬಂದಿದ್ದರು. ಪ್ರತಿ ಬಾರಿ ವಿನಂತಿ ಮಾಡಿಯೂ ಅವರು ಮಠಕ್ಕೆ ಬಂದಿಲ್ಲ’ ಎಂದು ಪ್ರಮೋದ್ ಮಧ್ವರಾಜ್ ದೂರಿದರು. ‘ಹಾಲುಮತ ಕುರುಬ ಸಮಾಜದವರಾದ ಮುಖ್ಯಮಂತ್ರಿ ಕನಕನ ಗುಡಿಗೆ ಭೇಟಿ ನೀಡದೆ ಲೋಪ ಮಾಡಿದ್ದಾರೆ ಎಂಬ ಅಭಿಪ್ರಾಯ ನನ್ನಲ್ಲಿದೆ. ಶೀಘ್ರದಲ್ಲಿ ಅವರು ಉಡುಪಿಗೆ ಬಂದು ಕನಕನ ಕಿಂಡಿಯ ಮೂಲಕ ದೇವರ ದರ್ಶನ ಮಾಡಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.