ADVERTISEMENT

ಉಡುಪಿಗೆ ಪ್ರಧಾನಿ ಭೇಟಿ: ಕಂಗೊಳಿಸುತ್ತಿದೆ ಕೃಷ್ಣಮಠ

ರಸ್ತೆ ಬದಿಯಲ್ಲಿ ಬ್ಯಾರಿಕೇಡ್‌ ಸ್ಥಾಪನೆ: ಧ್ವಜ, ತೋರಣಗಳಿಂದ ಸಿಂಗಾರ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 20:25 IST
Last Updated 26 ನವೆಂಬರ್ 2025, 20:25 IST
ಉಡುಪಿಯ ಕೃಷ್ಣಮಠದ ಪರಿಸರವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ
ಉಡುಪಿಯ ಕೃಷ್ಣಮಠದ ಪರಿಸರವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ   

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ಇದೇ 28 ರಂದು ಕೃಷ್ಣ ಮಠಕ್ಕೆ ಭೇಟಿ ನೀಡಲಿರುವ ಕಾರಣ ಕೃಷ್ಣಮಠ ಪರಿಸರ ಹಾಗೂ ನಗರದ ವಿವಿಧೆಡೆ ಧ್ವಜ ತೋರಣಗಳಿಂದ ಅಲಂಕಾರ ಮಾಡಲಾಗಿದೆ.

ಮಠದ ರಾಜಾಂಗಣ, ರಥಬೀದಿ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಕರಾವಳಿ ಬೈಪಾಸ್‌ನಿಂದ ಕಲ್ಸಂಕದ ವರೆಗೆ ರಸ್ತೆಯ ಡಿವೈಡರ್‌ಗಳಲ್ಲಿ ಧ್ವಜಗಳನ್ನು ಕಟ್ಟಲಾಗಿದೆ. ಈ ರಸ್ತೆಯ ಇಕ್ಕೆಲಗಳಲ್ಲಿ ಈಗಾಗಲೇ ಬ್ಯಾರಿಕೇಡ್‌ಗಳನ್ನು ಸ್ಥಾಪಿಸಲಾಗಿದೆ.

ಹೆಲಿಪ್ಯಾಡ್‌ನಲ್ಲಿ ಇಳಿದು ಪ್ರಧಾನಿ ಅವರು ಕೃಷ್ಣ ಮಠಕ್ಕೆ ಬರಲಿರುವ ರಸ್ತೆಯ ದುರಸ್ತಿ ಕಾರ್ಯವೂ ಬಹುತೇಕ ಪೂರ್ಣಗೊಂಡಿದೆ. ಆದಿ ಉಡುಪಿಯಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್‌ನಲ್ಲಿ ಬುಧವಾರ ಹಲವು ಬಾರಿ ಹೆಲಿಕಾಪ್ಟರ್‌ಗಳು ಇಳಿದಿವೆ.

ADVERTISEMENT

ಕೃಷ್ಣಮಠದ ಪಾರ್ಕಿಂಗ್‌ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಟೆಂಟ್‌ಗೂ ಎಸ್‌ಪಿಜಿ ಅಧಿಕಾರಿಗಳು ಈಗಾಗಲೇ ಭೇಟಿ ನೀಡಿ ಪರಿಶೀಲಿಸಿದ್ದಾರೆ.

28ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ವರೆಗೆ ವಿವಿಧ ಸ್ಥಳಗಳಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ ಮತ್ತು ಬದಲಿ ವ್ಯವಸ್ಥೆ ಮಾಡಲಾಗಿದೆ. ವಾಹನಗಳ ಪಾರ್ಕಿಂಗ್‌ಗೂ ವ್ಯವಸ್ಥೆ ಮಾಡಲಾಗಿದೆ.

ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ:

ಕಾರ್ಯಕ್ರಮಕ್ಕೆ ಕುಂದಾಪುರದಿಂದ ಬರುವ ವಾಹನಗಳು ಸಿಲಾಸ್ ಶಾಲೆಯ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಬೇಕು.
ಕುಂದಾಪುರದಿಂದ ಬರುವ ವಾಹನಗಳು ಗುಂಡಿಬೈಲು ಹತ್ತಿರ ಜನರನ್ನು ಇಳಿಸಿ ಯು ಟರ್ನ್ ಪಡೆದು ಎಂಜಿಎಂ ಮೈದಾನಕ್ಕೆ ಹೋಗಬೇಕು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಕಳ ಬೆಳ್ವೆ ಮಾರ್ಗವಾಗಿ ಉಡುಪಿಗೆ ಬರುವ ವಾಹನಗಳು ಕ್ರಿಶ್ಚಿಯನ್ ಹೈಸ್ಕೂಲ್, ಪಿಯು ಕಾಲೇಜ್ ಮತ್ತು ಬೈಲೂರು ಮುದ್ದಣ ಎಸ್ಟೇಟ್‌ನಲ್ಲಿ ಪಾರ್ಕ್ ಮಾಡಿ ರೋಡ್ ಶೋಗೆ ತೆರಳಬೇಕು. ಮಂಗಳೂರು ಕಡೆಯಿಂದ ರೋಡ್ ಶೋಗೆ ಬರುವ ವಾಹನಗಳು ಬೈಲೂರು ಮುದ್ದಣ್ಣ ಎಸ್ಟೇಟ್‌ನಲ್ಲಿ ಪಾರ್ಕ್ ಮಾಡಬೇಕು. ಮಲ್ಪೆ ಕಡೆಯಿಂದ ರೋಡ್ ಶೋ ಗೆ ಬರುವ ವಾಹನಗಳು ಶಾಮಿಲಿ ಎದುರು ಗ್ರೌಂಡ್‌ನಲ್ಲಿ ಪಾರ್ಕ್ ಮಾಡಬೇಕು ಎಂದು ಹೇಳಿದ್ದಾರೆ.

ಕಾರ್ಕಳ ಹೆಬ್ರಿ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳು ಶಾರದಾ ಕಲ್ಯಾಣ ಮಂಟಪ ಮಾರ್ಗವಾಗಿ ಬೀಡಿನಗುಡ್ಡೆಯಲ್ಲಿ ಪಾರ್ಕ್ ಮಾಡಬೇಕು. ಮಲ್ಪೆ ಕಡೆಯಿಂದ ರೋಡ್ ಶೋಗೆ ಬರುವ ಜನರು ವಾಹನಗಳನ್ನು ವಿವೇಕಾನಂದ ಸ್ಕೂಲ್ ಪಾರ್ಕಿಂಗ್‌ನಲ್ಲಿ ಪಾರ್ಕ್ ಮಾಡಬೇಕು.

ಅಂದು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಯಾವುದೇ ವಾಹನಗಳು ಕರಾವಳಿ ಕಡೆಯಿಂದ ಉಡುಪಿ ಸಿಟಿ ಬಸ್ ನಿಲ್ದಾಣ ಮತ್ತು ಉಡುಪಿ ಸಿಟಿ ಕಡೆಗೆ ಬರುವಂತಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ರಸ್ತೆ ಡಿವೈಡರ್‌ಗಳಿಗೆ ತೋರಣ ಕಟ್ಟಲಾಗಿದೆ

ಬಸ್ ನಿಲ್ದಾಣಕ್ಕೆ ಬರುವಂತಿಲ್ಲ ಕೆಎಸ್ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಉಡುಪಿ ಬಸ್ ನಿಲ್ದಾಣಕ್ಕೆ ಬರುವಂತಿಲ್ಲ. ಅವುಗಳು ನೇರವಾಗಿ ಅಂಬಾಗಿಲು ಮಾರ್ಗವಾಗಿ ಮಣಿಪಾಲ ಅಲೆವೂರು ಮಾರ್ಗವಾಗಿ ಕೊರಂಗ್ರಪಾಡಿ ಮಾರ್ಗವಾಗಿ ಬಲೈಪಾದೆಯಾಗಿ ಚಲಿಸಬೇಕು. ಮಲ್ಪೆಯಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳು ಪಡುಕೆರೆ ಪಿತ್ರೋಡಿ ಉದ್ಯಾವರ ಮಾರ್ಗವಾಗಿ ಚಲಿಸಬೇಕು. ಮಲ್ಪೆಯಿಂದ ಕುಂದಾಪುರಕ್ಕೆ ಹೋಗುವ ವಾಹನಗಳು ಸಂತೆಕಟ್ಟೆ ಮತ್ತು ನೇಜಾರು ಮುಖೇನಾ ಸಂಚರಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಂಗಳೂರಿನಿಂದ ಕುಂದಾಪುರ ಕಡೆಗೆ ತೆರಳುವ ವಾಹನಗಳು ಕಟಪಾಡಿಯಿಂದ-ಮಣಿಪುರ-ದೆಂದೂರಕಟ್ಟೆ ರಾಂಪುರ-ಅಲೆವೂರು ಗುಡ್ಡೆ ಅಂಗಡಿ-ಮಣಿಪಾಲ-ಆರ್‌ಎಸ್‌ಬಿ ಸಭಾಭವನ-ಸಿಂಡಿಕೇಟ್ ಸರ್ಕಲ್ ಕಾಯಿನ್ ಸರ್ಕಲ್-ಪೆರಂಪಳ್ಳಿ-ಅಂಬಾಗಿಲು ಪೆರಂಪಳ್ಳಿ ಕ್ರಾಸ್- ಅಂಬಾಗಿಲು ರಾಷ್ಟ್ರೀಯ ಹೆದ್ದಾರಿ 66 ಮುಖಾಂತರ ಚಲಿಸಬೇಕು. ಕಟಪಾಡಿ ಉದ್ಯಾವರ ಕಡೆಯಿಂದ ಬಂದ ವಾಹನಗಳು-ಬಲೈಪಾದೆ-ಗುಡ್ಡೆ ಅಂಗಡಿ– ಕೊರಂಗ್ರಪಾಡಿ ಕ್ರಾಸ್-ಕೊರಂಗ್ರಪಾಡಿ-ಕುಕ್ಕಿಕಟ್ಟೆ- ಜೋಡು ರಸ್ತೆ ಅಲೆವೂರು ಗುಡ್ಡೆ ಅಂಗಡಿ-ಮಣಿಪಾಲ-ಆರ್‌ಎಸ್‌ಬಿ ಸಭಾ ಭವನ-ಸಿಂಡಿಕೇಟ್ ಸರ್ಕಲ್-ಕಾಯಿನ್ ಸರ್ಕಲ್-ಪೆರಂಪಳ್ಳಿ-ಅಂಬಾಗಿಲು ಪೆರಂಪಳ್ಳಿ ಕ್ರಾಸ್-ಅಂಬಾಗಿಲು ರಾಷ್ಟ್ರೀಯ ಹೆದ್ದಾರಿ ಮುಖಾಂತರ ಚಲಿಸಬೇಕು. ಕುಂದಾಪುರದಿಂದ-ಮಂಗಳೂರು ಕಡೆಗೆ ತೆರಳುವ ವಾಹನಗಳು ಅಂಬಾಗಿಲು ರಾ.ಹೆ. 66- ಅಂಬಾಗಿಲು ಪೆರಂಪಳ್ಳಿ ಕ್ರಾಸ್- ಪೆರಂಪಳ್ಳಿ- ಕಾಯಿನ್ ಸರ್ಕಲ್- ಸಿಂಡಿಕೇಟ್ ಸರ್ಕಲ್-ಮಣಿಪಾಲ ಆರ್‌ಎಸ್‌ಬಿ ಸಭಾ ಭವನ-ಅಲೆವೂರು ಗುಡ್ಡೆ ಅಂಗಡಿ-ರಾಂಪುರ-ದೆಂದುರ್‌ಕಟ್ಟೆ-ಮಣಿಪುರ-ಕಟಪಾಡಿ ಮುಖಾಂತರ ಚಲಿಸಬೇಕು. ಮಂಗಳೂರಿನಿಂದ ಮಲ್ಪೆ ಕಡೆಗೆ ಹೋಗುವ ವಾಹನಗಳು ರಾ.ಹೆ. ಕಿಯಾ ಶೋ ರೂಂ ಉದ್ಯಾವರ ಜಂಕ್ಷನ್-ಉದ್ಯಾವರ ಪೇಟೆ-ಪಿತ್ರೋಡಿ-ಸಂಪಿಗೆ ನಗರ ಕುತ್ಪಾಡಿ-ಕಡೆಕಾರು-ಕಿದಿಯೂರು-ಮಲ್ಪೆ ಮುಖಾಂತರ ಚಲಿಸಬೇಕು.

‘ಪ್ರಧಾನಿ ಸ್ವಾಗತಕ್ಕೆ ಸಿದ್ಧತೆ ಪೂರ್ಣ’ ಉಡುಪಿ: ‘ಉಡುಪಿಯ ಶ್ರೀಕೃಷ್ಣ ಮಠಕ್ಕೆ ಇದೇ 28 ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು ಅವರನ್ನು ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು ‘ಶ್ಲೋಕಗಳ ಪಾರಾಯಣದ ಬಳಿಕ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಮೋದಿ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ’ ಎಂದರು. ‘ಕೇಂದ್ರ ಸಚಿವ ಪ್ರಲ್ಹಾದ ಜೋಶಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಸಚಿವ ಬೈರತಿ ಸುರೇಶ್ ಅವರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸ್ವಾಗತ ಭಾಷಣ ಮಾಡುವರು. ಅಷ್ಟ ಮಠದ ಸ್ವಾಮೀಜಿಗಳಿಗೆ ಆಹ್ವಾನ ನೀಡಿದ್ದೇವೆ’ ಎಂದು ಹೇಳಿದರು. ‘ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಗಣ್ಯರಿಗೆ ಮಾತ್ರ ಪಾಸ್‌ ವ್ಯವಸ್ಥೆ ಇದ್ದು ಉಳಿದವರಿಗೆ ಮುಕ್ತ ಪ್ರವೇಶ ಇದೆ. ಒಂದು ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದೇವೆ. ಆನ್‌ಲೈನ್‌ ಮೂಲಕವೂ ಲಕ್ಷ ಕಂಠ ಗೀತಾ ಪಠನ ನಡೆಯಲಿದೆ ’ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಠದ ದಿವಾನ ನಾಗರಾಜ ಆಚಾರ್ಯ ಪ್ರಸನ್ನಾಚಾರ್ಯ ಸುಪ್ರಸಾದ್‌ ಶೆಟ್ಟಿ ಉಪಸ್ಥಿತರಿದ್ದರು.

ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠಕ್ಕೆ ಇದೇ 28ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವರು ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಬುಧವಾರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅವರು, ಮಧ್ಯಾಹ್ನ 12ಕ್ಕೆ ಪ್ರಧಾನಿಯವರು ಕೃಷ್ಣಮಠಕ್ಕೆ ಬರಲಿದ್ದು, ಮೊದಲು ಕನಕದಾಸರಿಗೆ ಪುಷ್ಪಾರ್ಚನೆ ಮಾಡುವರು. ಬಳಿಕ ಕನಕನ ಕಿಂಡಿಗೆ ಹೊದಿಸಿರುವ ಚಿನ್ನದ ಕವಚ, ಸುವರ್ಣ ತೀರ್ಥ ಮಂಟಪ ಅನಾವರಣಗೊಳಿಸುವರು ಎಂದು ಹೇಳಿದರು.

ಶ್ರೀಕೃಷ್ಣ, ಮುಖ್ಯಪ್ರಾಣ ದೇವರು, ಸುವರ್ಣ ಪಾದುಕೆಯ ದರ್ಶನ ಮಾಡಲಿದ್ದಾರೆ. ಸರ್ವಜ್ಞ ಪೀಠ, ಗೋಶಾಲೆ ದರ್ಶನ ಮಾಡಿದ ಬಳಿಕ ಅವರು ಗೀತಾಮಂದಿರಕ್ಕೆ ಭೇಟಿ ನೀಡುವರು. ಅಲ್ಲಿ ಲಘು ಉಪಾಹಾರ ಸೇವಿಸುವರು. ಬಳಿಕ ಸಭಾಕಾರ್ಯಕ್ರಮದಲ್ಲಿ ಪಾಲ್ಗೊಂಡು ಲಕ್ಷ ಕಂಠ ಗೀತಾ ಕಾರ್ಯಕ್ರಮದ ನಿಮಿತ್ತ ಭಗವದ್ಗೀತೆಯ 18ನೇ ಅಧ್ಯಾಯದ ಕೊನೆಯ ಕೆಲವು ಶ್ಲೋಕಗಳನ್ನು ಪಠಿಸುವರು. ಮೋದಿಯವರು ಕೋಟಿ ಗೀತಾ ಲೇಖನ ಯಜ್ಷದ ದೀಕ್ಷೆಯನ್ನೂ ಪಡೆಯುವರು ಎಂದರು.

ಕಾರ್ಯಕ್ರಮಕ್ಕೆ ಅಷ್ಟಮಠದ ಸ್ವಾಮೀಜಿಗಳಿಗೆ ಆಹ್ವಾನ ನೀಡಿದ್ದೇವೆ ಎಂದರು.

ಪ್ರವೇಶ ನಿರ್ಬಂಧ ಲಕ್ಷಕಂಠ ಗೀತಾ ಪಾರಾಯಣಕ್ಕೆ ಪ್ರಧಾನಿ ನರೇಂದ್ರ ಮೋದಿ ಬರುತ್ತಿರುವುದರಿಂದ ಇದೇ 28 ರಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಶ್ರೀ ಕೃಷ್ಣ ಮಠಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಪುತ್ತಿಗೆ ಶ್ರೀ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.