ಉಡುಪಿ: ‘ಜಿಲ್ಲೆಯ ಬೀಚ್‍ಗಳ ಸಮಗ್ರ ಅಭಿವೃದ್ಧಿಗಾಗಿ ವಿಸ್ತೃತ ಯೋಜನೆಯ ತಯಾರಿಸುವಾಗ ಪ್ರವಾಸಿಗರ ಸುರಕ್ಷತೆಗೆ ಒತ್ತು ನೀಡಬೇಕು’ ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಡಲ ತೀರಗಳಿಗೆ ದೇಶದ ನಾನಾ ಭಾಗಗಳಿಂದ ಪ್ರವಾಸಿಗರು ಬರುತ್ತಾರೆ. ಬೀಚ್‍ಗಳ ಸ್ಥಳೀಯ ಭೌಗೋಳಿಕ ಪ್ರದೇಶದ ಮಾಹಿತಿ ಕೊರತೆಯಿಂದ ಜೀವಹಾನಿ ಉಂಟಾಗುತ್ತದೆ. ಈ ಬಗ್ಗೆ ಪ್ರವಾಸಿಗರಿಗೆ ಸರ್ವಋತುಗಳಲ್ಲಿ ಮಾಹಿತಿ ನೀಡುವುದು, ಅವರ ಭದ್ರತೆ, ಸುರಕ್ಷತೆ ಸೇರಿದಂತೆ ಮೂಲಸೌಲಭ್ಯ ಕಲ್ಪಿಸುವುದನ್ನು ಒಳಗೊಂಡಂತೆ ಯೋಜನೆಯನ್ನು ರೂಪಿಸಬೇಕು ಎಂದರು.
ಜಿಲ್ಲೆಯ ಪ್ರಾಕೃತಿಕ, ಧಾರ್ಮಿಕ ಪ್ರವಾಸೋದ್ಯಮಗಳ ಬಗ್ಗೆ ದೇಶ ವಿದೇಶಗಳಲ್ಲಿ ಪ್ರಚಾರ ಪಡಿಸುವ ಮಾಹಿತಿಯನ್ನು ಒಳಗೊಂಡ ನೂತನ ವೆಬ್‍ಸೈಟ್ ಅಭಿವೃದ್ಧಿಪಡಿಸಬೇಕು. ಇದರಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಫೋಟೊಗಳು, ಪ್ರವಾಸಿಗರಿಗೆ ಸಿಗುವ ಸೌಲಭ್ಯ, ಕರಾವಳಿಯ ಪರಂಪರೆ, ಮಾರ್ಗಸೂಚಿ ಹಾಗೂ ನೆರೆಹೊರೆ ಜಿಲ್ಲೆಯ ಪ್ರವಾಸಿತಾಣಗಳ ಮಾಹಿತಿಯನ್ನು ನೀಡಿದರೆ ಅನುಕೂಲವಾಗಲಿದೆ ಎಂದರು.
ಬ್ರಹ್ಮಾವರ ತಾಲ್ಲೂಕಿನ ಕೋಡಿಕನ್ಯಾನ ಬೀಚ್ ಬಳಿ ವಿಶೇಷ ಪ್ರವಾಸೋದ್ಯಮ ವಲಯವನ್ನು ಆಧುನಿಕ ಶೈಲಿಯಲ್ಲಿ ಅಭಿವೃದ್ಧಿಪಡಿಸಲು 80 ಎಕರೆ ಜಮೀನನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಪ್ರವಾಸೋದ್ಯಮ ಅಭಿವೃದ್ಧಿಗೆ ಕಾಯ್ದಿರಿಸಬೇಕೆಂದು ಸೂಚನೆ ನೀಡಿದರು.
ಕುಂದಾಪುರದ ಕೋಡಿಯ ಸೀವಾಕ್, ಕೋಡಿ ಬೀಚ್‍ನ ಪಕ್ಕದಲ್ಲಿ 26 ಎಕರೆ ಜಮೀನನ್ನು ಪ್ರವಾಸೋದ್ಯಮ ಇಲಾಖೆಗೆ ನೀಡಿ, ಖಾಸಗಿ ಸಹಭಾಗಿತ್ವದೊಂದಿಗೆ ಪ್ರವಾಸೋದ್ಯಮ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಸ್ಥಳವನ್ನು ಶೀಘ್ರದಲ್ಲಿಯೇ ಪ್ರವಾಸೋದ್ಯಮ ಇಲಾಖೆಗೆ ನೀಡಬೇಕು ಎಂದರು.
ರಾಜ್ಯ ಪ್ರವಾಸೋದ್ಯಮ ಇಲಾಖೆ ಈಗಾಗಲೇ ಜಿಲ್ಲೆಯ ಕಡಲ ತೀರಗಳ ಪ್ರವಾಸೋದ್ಯಮವನ್ನು ಖಾಸಗಿಯವರ ಸಹಭಾಗಿತ್ವದಲ್ಲಿ ಅಭಿವೃದ್ಧಿಗೊಳಿಸಲು ಸೂಚನೆ ನೀಡಿದ್ದು, ಇದರ ಅನುಷ್ಠಾನಕ್ಕೆ ಕ್ರಮ ವಹಿಸಬೇಕೆಂದು ಸೂಚನೆ ನೀಡಿದರು.
ಜಿಲ್ಲೆಗೆ ಬರುವವ ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಸಂಚಾರ ಬೆಳೆಸಲು ಅನುಕೂಲವಾಗುವಂತೆ ರೂಟ್‍ಮ್ಯಾಪ್ ಒಳಗೊಂಡ ಫಲಕಗಳನ್ನು ಅಲ್ಲಲ್ಲಿ ಪ್ರದರ್ಶಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಖಾರಿ ಡಾ. ಅರುಣ್ ಕೆ., ಡಿಎಫ್‍ಒ ಗಣಪತಿ, ಉಪವಿಭಾಗಾಧಿಕಾರಿ ಮಹೇಶ್ಚಂದ್ರ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಸಿ.ಯು., ಅಸೋಸಿಯೇಷನ್ ಆಫ್ ಕೋಸ್ಟಲ್ ಟೂರಿಸಂ ಅಧ್ಯಕ್ಷ ಮನೋಹರ್ ಶೆಟ್ಟಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸಂಬಂಧಿತ ಚಟುವಟಿಕೆ ನಡೆಸುವ ಮುನ್ನ ಕೆ.ಟಿ.ಟಿ.ಎಫ್. ಕಾಯ್ದೆಯನ್ವಯ ನೋಂದಣಿ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಈವರೆಗೂ ಕೆಲವು ಭಾಗೀದಾರರು ನೋಂದಣಿ ಮಾಡಿರುವುದಿಲ್ಲ. ಈ ಬಗ್ಗೆ ಕ್ರಮ ವಹಿಸಬೇಕುಕೆ.ವಿದ್ಯಾಕುಮಾರಿ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.