ಉಡುಪಿ: ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರನ್ನು ಕೂಡಲೇ ಬಂಧಿಸಿ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಪೃಥ್ವಿರಾಜ್ ಹೆಗ್ಡೆ ಒತ್ತಾಯಿಸಿದರು.
ಜಿಲ್ಲಾ ಯುವಮೋರ್ಚಾ ವತಿಯಿಂದ ನಗರದ ಬನ್ನಂಜೆ ನಾರಾಯಣ ಗುರು ವೃತ್ತದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ವರೆಗೆ ಬುಧವಾರ ನಡೆದ ಪ್ರತಿಭಟನಾ ಮೆರವಣಿಯಲ್ಲಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಬಾಂಗ್ಲಾದೇಶದ ಮಾದರಿಯಲ್ಲಿ ದಂಗೆ ಏಳುತ್ತೇವೆ ಎಂಬ ಹೇಳಿಕೆ ನೀಡಿರುವ ಐವನ್ ಡಿಸೋಜ ಅವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಧಿಕಾರಕ್ಕೆ ಬಂದ ಬಳಿಕ ಹಿಂದೂ ವಿರೋಧಿ ನೀತಿಯನ್ನು ಅನುಸರಿಸಲಾಗುತ್ತಿದೆ. ಭಷ್ಟಾಚಾರ, ಅಪರಾಧ ಚಟುವಟಿಕೆ ಹೆಚ್ಚುತ್ತಿವೆ. ಹಿಂದೂ ಯುವತಿಯರಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಆರೋಪಿಸಿದರು.
ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರಧಾನ ಕಾರ್ಯದರ್ಶಿ ಶಶಾಂಕ್ ಶಿವತ್ತಾಯ, ಅಭಿರಾಜ್ ಸುವರ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.