ADVERTISEMENT

ನಾಸ್ತಿಕರು–ಆಸ್ತಿಕರ ನಡುವಿನ ಯುದ್ಧ

ಶಬರಿಮಲೆ ವಿವಾದ– ಮಂಜುನಾಥ ಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 16:31 IST
Last Updated 4 ಜನವರಿ 2019, 16:31 IST
ಪ್ರತಿಭಟನೆಯಲ್ಲಿ ಶಬರಿಮಲೆ ಕ್ಷೇತ್ರ ಸಂರಕ್ಷಿಸಿ ಹೋರಾಟ ಸಮಿತಿ ಕಾರ್ಯಕರ್ತರು ಭಾಗವಹಿಸಿದರು. ಪ್ರಜಾವಾಣಿ ಚಿತ್ರ
ಪ್ರತಿಭಟನೆಯಲ್ಲಿ ಶಬರಿಮಲೆ ಕ್ಷೇತ್ರ ಸಂರಕ್ಷಿಸಿ ಹೋರಾಟ ಸಮಿತಿ ಕಾರ್ಯಕರ್ತರು ಭಾಗವಹಿಸಿದರು. ಪ್ರಜಾವಾಣಿ ಚಿತ್ರ   

ಉಡುಪಿ: ‘ಹಿಂದೂ ಸಮಾಜದ ಧಾರ್ಮಿಕ ನಂಬಿಕೆ ಹಾಳು ಮಾಡುವ ವ್ಯವಸ್ಥಿತ ಷಡ್ಯಂತ್ರವನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಕಮ್ಯುನಿಸ್ಟ್‌ ಸರ್ಕಾರ ನಡೆಸುತ್ತಿದೆ’ ಎಂದು ವಿಶ್ವ ಹಿಂದೂ ಪರಿಷತ್‌ ಪ್ರಮುಖ್‌ ಮಂಜುನಾಥ ಸ್ವಾಮಿ ಆರೋಪಿಸಿದರು.

ಕೇರಳದಲ್ಲಿರುವ ಪವಿತ್ರ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಜಿಲ್ಲಾ ಶಬರಿಮಲೆ ಪಾವಿತ್ರ್ಯ ಉಳಿಸಿ ಹೋರಾಟ ಸಮಿತಿ ಕಾರ್ಯಕರ್ತರು ಗುರುವಾರ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಶಬರಿಮಲೆ ದೇವಸ್ಥಾನಕ್ಕೆ 800 ವರ್ಷಗಳ ಪರಂಪರೆ ಇದೆ. ಅದನ್ನು ಹಾಳುಮಾಡುವ ಕೆಲಸಕ್ಕೆ ಕೇರಳ ಸರ್ಕಾರ ಕೈಹಾಕಿದೆ. ಸುಪ್ರೀಂ ಕೋರ್ಟ್‌ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ್ದರೂ, ಆದೇಶ ಪುನರ್ ಪರಿಶೀಲಿಸಲು ಅಯ್ಯಪ್ಪ ಭಕ್ತರು ಸರ್ಕಾರಕ್ಕೆ ಮನವಿ ಮಾಡಿದರೆ, ಗಮನ ಹರಿಸುತ್ತಿಲ್ಲ. ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿ ನ್ಯಾಯಾಲಯದ ತೀರ್ಪು ಜಾರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಜಿಲ್ಲಾ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ‘ತಲೆತಲಾಂತರಗಳಿಂದ ಹಿಂದೂ ಧಾರ್ಮಿಕ ಕೇಂದ್ರಗಳು ಇತರೆ ಧರ್ಮಗಳ ತುಳಿತಕ್ಕೆ ಒಳಗಾಗುತ್ತಾ ಬಂದಿದ್ದೆ. ಅಯೋಧ್ಯೆಯ ರಾಮ ಮಂದಿರ, ಕಾಶಿ ವಿಶ್ವನಾಥ ದೇವಸ್ಥಾನ, ಮಥುರೆಯ ಶ್ರೀಕೃಷ್ಣ ಮಂದಿರಗಳನ್ನು ನಾಶಮಾಡಿಅನ್ಯ ಧರ್ಮದ ಶ್ರದ್ಧಾ ಕೇಂದ್ರವಾಗಿ ಪರಿವರ್ತಿಸಲಾಗಿದೆ. ಇದೀಗ ನಾಸ್ತಿಕರು ನೂರಾರು ವರ್ಷಗಳ ಪರಂಪರೆ ಇರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪಾವಿತ್ರ್ಯೆಯನ್ನು ಹಾಳು ಮಾಡುವ ಕೆಲಸಕ್ಕೆ ಮುಂದಾಗಿರುವುದು ಖಂಡನೀಯ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷ ಕೆ.ಶೀಲ ಶೆಟ್ಟಿ, ಸದಸ್ಯೆ ಗೀತಾಂಜಲಿ ಸುವರ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಸುಕುಮಾರ ಶೆಟ್ಟಿ, ಶ್ಯಾಮಲ ಕುಂದರ್‌ ಇದ್ದರು.

ಸಂಪ್ರದಾಯ ಪಾಲನೆಯಲ್ಲಿ ರಾಜಿ ಇಲ್ಲ
ಕೃಷ್ಣ ಮಠದಲ್ಲಿ ಅಷ್ಟಮಠಗಳ ಸ್ವಾಮೀಜಿಗಳು ಮಾತ್ರ ಕೃಷ್ಣನಿಗೆ ಪೂಜೆ ಮಾಡುತ್ತಾರೆ. ನಾವೇಕೆ ಪೂಜೆ ಮಾಡಬಾರದು ಎಂದು ವ್ಯಕ್ತಿಯೊಬ್ಬ ಪ್ರಶ್ನಿಸಬಹುದು. ಪ್ರತಿಯೊಂದು ದೇವಸ್ಥಾನಕ್ಕೂ ಪ್ರತ್ಯೇಕ ನಿಯಮಗಳಿವೆ. ಅದು ಭಕ್ತಿ ಮತ್ತು ಶ್ರದ್ಧೆಯ ವಿಷಯ. ಸಂಪ್ರದಾಯ ಪಾಲನೆಯಲ್ಲಿ ರಾಜಿ ಸಾಧ್ಯವಿಲ್ಲ ಎಂದು ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.