ADVERTISEMENT

ಅತ್ಯಾಚಾರಿಗಳ ರಕ್ಷಣೆಗೆ ನಿಂತ ಯೋಗಿ ಸರ್ಕಾರ: ಹರ್ಷಕುಮಾರ್ ಕುಗ್ವೆ ಟೀಕೆ

ದಲಿತ ಸಂಘರ್ಷ ಸಮಿತಿ ಪ್ರತಿಭಟನೆಯಲ್ಲಿ ಹರ್ಷಕುಮಾರ್ ಕುಗ್ವೆ ಟೀಕೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 16:15 IST
Last Updated 1 ಅಕ್ಟೋಬರ್ 2020, 16:15 IST
ಹತ್ರಾಸ್‌ನಲ್ಲಿ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಹುತಾತ್ಮಕರ ಸ್ಮಾರಕದ ಎದುರು ಗುರುವಾರ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರ ಹರ್ಷಕುಮಾರ್‌ ಕುಗ್ವೆ ಮಾತನಾಡಿದರು.
ಹತ್ರಾಸ್‌ನಲ್ಲಿ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಹುತಾತ್ಮಕರ ಸ್ಮಾರಕದ ಎದುರು ಗುರುವಾರ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರ ಹರ್ಷಕುಮಾರ್‌ ಕುಗ್ವೆ ಮಾತನಾಡಿದರು.   

ಉಡುಪಿ: ಹತ್ರಾಸ್‌ನಲ್ಲಿ ಕಾಮುಕರು ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆಸಿದರೆ, ಅತ್ಯಾಚಾರಿಗಳ ರಕ್ಷಣೆಗೆ ನಿಂತಿರುವ ಉತ್ತರ ಪ್ರದೇಶ ಸರ್ಕಾರ ಮೃತ ಯುವತಿಯ ಕುಟುಂಬದ ಮೇಲೆ ಅತ್ಯಾಚಾರ ನಡೆಸಿದೆ ಎಂದು ಸಾಮಾಜಿಕ ಹೋರಾಟಗಾರ ಹರ್ಷಕುಮಾರ್‌ ಕುಗ್ವೆ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಹುತಾತ್ಮಕರ ಸ್ಮಾರಕದ ಎದುರು ಗುರುವಾರ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಯುವತಿಯ ಮೃತದೇಹವನ್ನು ಕೊನೆಯ ಬಾರಿಗೆ ನೋಡಲು ಕುಟುಂಬಸ್ಥರಿಗೂ ಅವಕಾಶ ಕೊಡದಂತೆ ಮಧ್ಯರಾತ್ರಿ ಶವ ಸಂಸ್ಕಾರ ಮಾಡಲಾಗಿದೆ. ಉತ್ತರ ಪ್ರದೇಶ ಸರ್ಕಾರದ ಈ ನಡೆ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಜನಾಂಗೀಯ ದ್ವೇಷದ ಸಿದ್ಧಾಂತವನ್ನು ತಲೆಯಲ್ಲಿ ತುಂಬಿಕೊಂಡು ಅಧಿಕಾರ ನಡೆಸುತ್ತಿದ್ದಾನೆ. ಪ್ರಜ್ಞಾವಂತ ನಾಗರಿಕರು ಹತ್ರಾಸ್‌ ಘಟನೆಯನ್ನು ಖಂಡಿಸದಿದ್ದರೆ, ದೇಶದೆಲ್ಲೆಡೆ ಇಂತಹ ಅಮಾನುಷ ಕೃತ್ಯಗಳು ನಡೆಯುತ್ತವೆ ಎಂದರು.

ADVERTISEMENT

ಉತ್ತರ ಪ್ರದೇಶ ಪೊಲೀಸರು ಯುವತಿಯ ಮೇಲೆ ಅತ್ಯಾಚಾರವೇ ನಡೆದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಹಾಗಾದರೆ, ಮರು ಮರಣೋತ್ತರ ಪರೀಕ್ಷೆಗೂ ಅವಕಾಶ ಸಿಗದಂತೆ ಮಧ್ಯರಾತ್ರಿ ಯುವತಿಯ ಶವವನ್ನು ಸುಟ್ಟು ಹಾಕಿದ್ದೇಕೆ ಎಂದು ಹರ್ಷಕುಮಾರ್ ಕುಗ್ವೆ ಪ್ರಶ್ನಿಸಿದರು.

ಅತ್ಯಾಚಾರ ಕೃತ್ಯವನ್ನು ಖಂಡಿಸಬೇಕಾದ ಮಾಧ್ಯಮಗಳು ಕಣ್ಮುಚ್ಚಿ ಕುಳಿತಿವೆ. ಇದರ ಮಧ್ಯೆಯೂ ತನುಶ್ರೀ ಪಾಂಡೆಯಂತಹ ದಿಟ್ಟ ಪರ್ತಕರ್ತೆ ಏಕಾಂಗಿಯಾಗಿ ಯುವತಿಗಾದ ಅನ್ಯಾಯವನ್ನು ನಡುರಾತ್ರಿ ಸಮಾಜದ ಮುಂದಿಡುವ ದಿಟ್ಟತನ ತೋರಿದ್ದಾಳೆ. ಆಕೆಗೆ ಸಮಾಜ ಅಭಿನಂದನೆ ಸಲ್ಲಿಸಬೇಕು ಎಂದರು.

ಫಾದರ್ ವಿಲಿಯಂ ಮಾರ್ಟಿಸ್ ಮಾತನಾಡಿ, ‘ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆದರೂ, ಸಚಿವೆ ನಿರ್ಮಲಾ ಸೀತಾರಾಮನ್‌, ಸ್ಮೃತಿ ಇರಾನಿ, ರಾಜ್ಯಪಾಲೆ ಕಿರಣ್‌ಬೇಡಿ, ಸಂಸದೆ ಶೋಭಾ ಕರಂದ್ಲಾಜೆ ಮೌನಕ್ಕೆ ಜಾರಿದ್ದಾರೆ. ಕನಿಷ್ಠ ಪ್ರತಿರೋಧವನ್ನೂ ತೋರದಂತಹ ಕಲ್ಲು ಹೃದಯಿಗಳಾಗಿದ್ದಾರೆ. ಯುವತಿಯ ಸಾವಿಗೆ ದೇಶ ಕಂಬನಿ ಮಿಡಿಯುತ್ತಿದ್ದರೆ ಪ್ರಧಾನಿ ಕನಿಷ್ಠ ಟ್ವೀಟ್‌ ಮೂಲಕವೂ ಖಂಡನೆ ವ್ಯಕ್ತಪಡಿಸಿಲ್ಲ ಎಂದು ಟೀಕಿಸಿದರು.

ದಲಿತ ಮುಖಂಡ ಸುಂದರ್ ಮಾಸ್ತರ್ ಮಾತನಾಡಿ, ‘ಭೇಟಿ ಬಚಾವೋ, ಭೇಟಿ ಪಡಾವೋ’ ಎನ್ನುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ದಲಿತ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಅಮಾನುಷ ಕೃತ್ಯ ನಡೆದರೂ ಕನಿಷ್ಠ ಬಹಿರಂಗವಾಗಿ ಖಂಡಿಸಲು ಬಿಜೆಪಿಗೆ ನಾಯಕರಿಗೆ ಧೈರ್ಯವಿಲ್ಲ ಎಂದು ಟೀಕಿಸಿದರು.

ರಾಜ್ಯದ ದಲಿತ ಸಂಸದರು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಕೂಡ ಸಮುದಾಯದ ಯುವತಿಗಾದ ಅನ್ಯಾಯದ ವಿರುದ್ಧ ಧನಿ ಎತ್ತದಿರುವುದು ನಾಚಿಕೆಗೇಡು. ಮುಂದಿನ ದಿನಗಳಲ್ಲಿ ದಲಿತರು, ಅಲ್ಪಸಂಖ್ಯಾತರು, ಮುಸ್ಲಿಮರು ಮನುವಾದಿ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು ಎಂದರು.

ಮುಖಂಡರಾದ ಅಮೃತ್ ಶೆಣೈ, ಶ್ಯಾಮರಾಜ್ ಬಿರ್ತಿ, ಯಾಸೀನ್ ಮಲ್ಪೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.