ಉಡುಪಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಕೊರಗ ಸಂಘಟನೆಗಳ ನೇತೃತ್ವದಲ್ಲಿ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಧರಣಿ ಸತ್ಯಾಗ್ರಹ ನಡೆಯಿತು.
ಕೊರಗ ಸಮುದಾಯದವರ ಅಭಿವೃದ್ಧಿ ಕಾರ್ಯಗಳಿಗಾಗಿ 2021–22ನೇ ಸಾಲಿನಲ್ಲಿ ಮಂಜೂರಾದ ₹3.20 ಕೋಟಿ ಅನುದಾನದಲ್ಲಿ ₹1.60 ಕೋಟಿ ಮಾತ್ರ ಬಿಡುಗಡೆಯಾಗಿದ್ದು, ಅದನ್ನು ಶಿಕ್ಷಣ, ಸ್ವ ಉದ್ಯೋಗ, ಭೂ ಅಭಿವೃದ್ಧಿ ಕೆಲಸಗಳಿಗೆ ವ್ಯಯ ಮಾಡಲಾಗಿದೆ. ಬಾಕಿ ಹಣವನ್ನು ನಾಲ್ಕು ವರ್ಷಗಳಾದರೂ ಸರ್ಕಾರ ಇನ್ನೂ ಬಿಡುಗಡೆಗೊಳಿಸಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು.
ಬಾಕಿ ಹಣವನ್ನು ಕೂಡಲೇ ಬಿಡುಗಡೆಗೊಳಿಸಿ, ಮಕ್ಕಳ ಶಿಕ್ಷಣಕ್ಕೆ ಹಾಗೂ ಯುವಜನರ ಉದ್ಯೋಗಕ್ಕೆ ಭರಿಸಿಕೊಳ್ಳಬೇಕು ಹಾಗೂ ಕೊರಗರಿಗೆ ಉಚಿತ ಶಿಕ್ಷಣದ ಗ್ಯಾರಂಟಿ ಕೊಡಬೇಕು ಎಂದು ಒತ್ತಾಯಿಸಿದರು.
ಈ ಬಾರಿಯ ಬಜೆಟ್‌ನಲ್ಲಿ ಆದಿವಾಸಿಗಳಿಗೆ ಘೋಷಿಸಿದ ₹ 200 ಕೋಟಿ ಅನುದಾನದಲ್ಲಿ ಕೊರಗರಿಗೂ ₹25 ಕೋಟಿ ಮೀಸಲಿರಿಸಬೇಕು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುವ ಯೋಜನೆಗಳಿಗೆ ಸ್ಥಳೀಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ, ಕೊರಗರ ಭಾಗಿದಾರಿಕೆಯಲ್ಲಿ ಕ್ರಿಯಾಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.
ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.
ಶಾಸಕ ಯಶಪಾಲ್ ಸುವರ್ಣ ಅವರಿಗೂ ಮನವಿ ನೀಡಲಾಯಿತು. ಸಂಘಟನೆಗಳ ಮುಖಂಡರಾದ ಗೌರಿ ಕೊರಗ, ಗಣೇಶ್ ಕೊರಗ ಕುಂದಾಪುರ, ಗಣೇಶ್ ಬಾರಕೂರು, ಲಕ್ಷ್ಮಣ್ ಬೈಂದೂರು, ಕುಡುಪ ಸಚ್ಚಿರಿಪೇಟೆ, ರಂಗ ಕೊರಗ, ಬಾಬು ಪಾಂಗಾಳ, ಕುಮಾರ್ ದಾಸ್ ಹಾಲಾಡಿ, ವಿನಿತಾ ಕುಂಬಾಶಿ, ಸುಮಂಗಲ ಮಧುವನ, ಬಬಿತ, ವಸಂತ ಕಾಡಬೆಟ್ಟು ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಸಂಘದ ಅಧ್ಯಕ್ಷರಾದ ಎಂ. ಸುಂದರ್, ರಾಮು ಕೋಡಿಕಲ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.