ADVERTISEMENT

ಉಡುಪಿ | ದಲಿತರ ಮೇಲೆ ದೌರ್ಜನ್ಯ: ಪ್ರತಿಭಟನೆ

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ದಲಿತ ಹಕ್ಕುಗಳ ಸಮಿತಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಮೇ 2025, 16:14 IST
Last Updated 30 ಮೇ 2025, 16:14 IST
ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು
ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು   

ಉಡುಪಿ: ರಾಜ್ಯದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹತ್ಯೆ, ದೇವಾಲಯ ಪ್ರವೇಶ ನಿರಾಕರಣೆ, ದಲಿತ ಮಹಿಳೆಯರ ಮೇಲಿನ ಅತ್ಯಾಚಾರ, ಕಿರುಕುಳ ಖಂಡಿಸಿ ದಲಿತ ಹಕ್ಕುಗಳ ಸಮಿತಿ (ಡಿಎಚ್‌ಎಸ್) ಉಡುಪಿ ಸಂಚಾಲನ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನಾ ಸಭೆಯಲ್ಲಿ ದಲಿತ ಹಕ್ಕುಗಳ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕ ಸಂಜೀವ ಬಳ್ಕೂರು ಮಾತನಾಡಿ, ‘ಮಂಡ್ಯದ ಕೆ.ಆರ್. ಪೇಟೆಯಲ್ಲಿ ದಲಿತ ಜಯಕುಮಾರ್ ಅವರ ಜಮೀನು ಅತಿಕ್ರಮಣ ಮಾಡಲು ರೌಡಿಗಳು ಅವರನ್ನು ಕೊಲೆ ಮಾಡಿದ್ದು, ಅವರ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿ ಪ್ರಕರಣ ದಾಖಲಿಸಲು ಮುಂದಾದಾಗ ಪ್ರಕರಣ ದಾಖಲಿಸಿಕೊಳ್ಳದೆ ವಾಪಸ್‌ ಕಳುಹಿಸಲಾಗಿದೆ’ ಎಂದು ಆರೋಪಿಸಿದರು.

‘ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಬನವಾಸಿ ಗ್ರಾಮದ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವುದು ಮತ್ತು ದೇವಸ್ಥಾನ ಪ್ರವೇಶ ನಿರಾಕರಿಸಿದ್ದು ಜನತೆ ನಾಚಿಕೆ ಪಡುವ ವಿಚಾರ’ ಎಂದರು.

ADVERTISEMENT

‘ಬಿಡದಿ ಹೋಬಳಿಯ ಭದ್ದರಾಪುರ ಗ್ರಾಮದ  ದಲಿತ ಬಾಲಕಿಯನ್ನು ಆತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಅದನ್ನು ಮುಚ್ಚಿ ಹಾಕಲು ಪ್ರಭಾವಿ ವ್ಯಕ್ತಿಗಳು ಪ್ರಯತ್ನಿಸಿದ್ದರು’ ಎಂದು ಆರೋಪಿಸಿದರು.

‘ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕವಣಗಾಲಿ ದೇವಾಲಯದಲ್ಲಿ ದಲಿತರಿಗೆ ಪ್ರವೇಶ ನಿರಾಕರಿಸಲಾಗಿದೆ. ಕೊಲ್ಲೂರು ಪ್ರದೇಶದಲ್ಲಿ ದಲಿತ ಮಹಿಳೆಯ ಮನೆಯನ್ನು ಯಾರು ಇಲ್ಲದ ಸಮಯದಲ್ಲಿ ಕೆಡವಿ ಜಾಗ ಆಕ್ರಮಣ ಮಾಡಲು ಮುಂದಾದ ವ್ಯಕ್ತಿಗಳನ್ನು ಬಂಧಿಸಬೇಕು’ ಎಂದು ಒತ್ತಾಯಿಸಿದರು.

ಸಹ ಸಂಚಾಲಕ ರವಿ ವಿ.ಎಂ., ಮುಖಂಡರಾದ ರಾಮ ಕಾರ್ಕಡ, ನಾಗರತ್ನ ನಾಡ, ಶಾರದ, ನಾಗರತ್ನ ಆರ್., ರಂಗನಾಥ ಸುವರ್ಣ, ಮನೋಜ್, ಸುಶೀಲಾ, ಪೂರ್ಣಿಮಾ ಬಳ್ಕೂರು, ಅಣಪ್ಪ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಉಡುಪಿ ಜಿಲ್ಲಾ ಹಂಚು ಕಾರ್ಮಿಕ ಸಂಘದ ಕಾರ್ಯದರ್ಶಿ ಎಚ್. ನರಸಿಂಹ, ಸಿಐಟಿಯು ಕುಂದಾಪುರ ತಾಲ್ಲೂಕು ಸಂಚಾಲಕ ಚಂದ್ರಶೇಖರ, ಸಿಐಟಿಯು ಉಡುಪಿ ವಲಯ ಸಂಚಾಲಕ ಕವಿರಾಜ್ ಎಸ್.ಕಾಂಚನ್ ಉಪಸ್ಥಿತರಿದ್ದರು.

ಹೆಚ್ಚುವರಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.