ADVERTISEMENT

ಮೊಬೈಲ್ ಅಪ್ಲಿಕೇಶನ್ ಸೇವೆ ಸ್ಥಗಿತ: ಡಿ.ಸಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 14:37 IST
Last Updated 27 ಸೆಪ್ಟೆಂಬರ್ 2024, 14:37 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳು ಶುಕ್ರವಾರ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳು ಶುಕ್ರವಾರ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು   

ಉಡುಪಿ: ಸುಸಜ್ಜಿತವಾದ ಕಚೇರಿ, ಗುಣಮಟ್ಟದ ಫೋನ್, ಸಿಯುಜಿ ಸಿಮ್, ಡೇಟಾ ಸಹಿತ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ಏಳು ತಾಲ್ಲೂಕಿನ ಗ್ರಾಮ ಆಡಳಿತಾಧಿಕಾರಿಗಳು ಶುಕ್ರವಾರ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು.

ಮೊಬೈಲ್ ಅಪ್ಲಿಕೇಶನ್ ಸೇವೆಗಳನ್ನು ಸ್ಥಗಿತಗೊಳಿಸಿ ಗುರುವಾರದಿಂದಲೇ ಗ್ರಾಮ ಆಡಳಿತಾಧಿಕಾರಿಗಳು ಆಯಾ ತಾಲ್ಲೂಕು ವ್ಯಾಪ್ತಿಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದರು.

ಕರ್ನಾಟಕ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಕೇಂದ್ರ ಸಂಘದ ವತಿಯಿಂದ ಮುಷ್ಕರಕ್ಕೆ ಕರೆ ನೀಡಿದ್ದು, ಜಿಲ್ಲಾ ಘಟಕದ ವತಿಯಿಂದ ನಡೆದ ಮುಷ್ಕರದಲ್ಲಿ ಅಧ್ಯಕ್ಷ ಭರತ್‌ ಶೆಟ್ಟಿ ಮಾತನಾಡಿ, ಇ–ಆಫೀಸ್‌, ಆಧಾರ್ ಸೀಡ್‌, ಪೌತಿ ಆಂದೋಲನ ಆ್ಯಪ್‌, ಬೆಳೆ ಸಮೀಕ್ಷೆ, ಲ್ಯಾಂಡ್‌ ಬಿಟ್‌ ಸೇರಿದಂತೆ 21 ಆ್ಯಪ್‌ಗಳನ್ನು ನಮ್ಮ ಮೊಬೈಲ್‌ಗಳಲ್ಲಿ ಇನ್‌ಸ್ಟಾಲ್‌ ಮಾಡಿ ಕೆಲಸ ಮಾಡಬೇಕಾಗಿದೆ. ಆದರೆ ಸರ್ಕಾರ ಇದಕ್ಕಾಗಿ ಮೊಬೈಲ್‌ ಫೋನ್‌ ಒದಗಿಸುವುದಿಲ್ಲ ಎಂದು ಹೇಳಿದರು.

ADVERTISEMENT

ಹಲವು ಕಡೆ ಕಚೇರಿಗಳು ಇಲ್ಲದ ಕಾರಣ ಗ್ರಾಮ ಆಡಳಿತಾಧಿಕಾರಿಗಳು ದೇವಾಲಯದ ಆವರಣ ಮೊದಲಾದೆಡೆ ಕುಳಿತುಕೊಂಡು ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಈ ಕಾರಣಕ್ಕೆ ಮುಷ್ಕರ ನಡೆಸುತ್ತಿದ್ದೇವೆ ಎಂದರು.

ಸರ್ಕಾರ ಇಂಟರ್‌ನೆಟ್‌ ಸೌಲಭ್ಯವನ್ನೂ ಒದಗಿಸುವುದಿಲ್ಲ ಇದರಿಂದಾಗಿ ನಾವು ಸ್ವಂತ ಖರ್ಚಿನಿಂದ ಇಂಟರ್‌ನೆಟ್‌ ಹಾಕಿಸಿಕೊಳ್ಳಬೇಕಾಗುತ್ತದೆ. ಪ್ರಿಂಟರ್‌ ಮತ್ತು ಸ್ಕ್ಯಾನರ್‌ಗಳನ್ನೂ ನೀಡದಿರುವುದರಿಂದ ನಾವು ಇಂತಹ ಸೇವೆ ಒದಗಿಸುವ ಕೇಂದ್ರಗಳಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ನಮ್ಮ ಹೋರಾಟಕ್ಕೆ ಗ್ರಾಮ ಸಹಾಯಕರು ಕೂಡ ಬೆಂಬಲ ಸೂಚಿಸಿದ್ದಾರೆ ಎಂದರು.

ಜಿಲ್ಲೆಯಲ್ಲಿ 175 ಮಂದಿ ಗ್ರಾಮ ಆಡಳಿತಾಧಿಕಾರಿಗಳಿದ್ದು, 101 ಮಂದಿ ಗ್ರಾಮ ಪಂಚಾಯಿತಿಗಳಲ್ಲಿ ಉಳಿದ 74 ಮಂದಿ ಎ.ಸಿ, ಡಿ.ಸಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಕಂದಾಯ ಇಲಾಖೆಯ ಮೂರು ವರ್ಷಗಳ ಸೇವೆಯನ್ನು ಪರಿಗಣಿಸಿ ಅಂತರ್‌ ಜಿಲ್ಲಾ ವರ್ಗಾವಣೆಗಾಗಿ ಕಂದಾಯ ಇಲಾಖೆಯಲ್ಲಿ ಹೊಸ ಮಾರ್ಗಸೂಚಿ ರಚಿಸಬೇಕು ಎಂದು ಆಗ್ರಹಿಸಿದರು.

ಪ್ರಯಾಣ ಭತ್ಯೆಯನ್ನು ₹500 ರಿಂದ ₹3 ಸಾವಿರಕ್ಕೆ ಏರಿಕೆ ಮಾಡಬೇಕು. ಮನೆ ಹಾನಿ ಪ್ರಕರಣಗಳ ಕುರಿತ ಜವಾಬ್ದಾರಿಯಿಂದ ಗ್ರಾಮ ಆಡಳಿತಾಧಿಕಾರಿಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಪ್ರಮೋದ್‌, ಶಿವರಾಯ, ಕಾರ್ತಿಕೇಯ ಭಟ್‌, ಆನಂದ ಮುಕ್ಕಣ್ಣನವರ್‌ ಇದ್ದರು.

ಕಂದಾಯ ಸಚಿವರು ಸೋಮವಾರ ನಮ್ಮನ್ನು ಸಭೆಗೆ ಕರೆದಿದ್ದಾರೆ. ಅದರಲ್ಲಿ ಬೇಡಿಕೆ ಈಡೇರಿಸುವ ಭರವಸೆ ನೀಡದಿದ್ದರೆ ಮುಷ್ಕರ ಮುಂದುವರಿಸಲಿದ್ದೇವೆ.
ಭರತ್‌ ಶೆಟ್ಟಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಜಿಲ್ಲಾ ಘಟಕ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.