ಉಡುಪಿ: ಬೀಡಿ ಕಾರ್ಮಿಕರ ಕನಿಷ್ಠ ವೇತನ ಹಾಗೂ ತುಟ್ಟಿಭತ್ಯೆಯನ್ನು ಸರ್ಕಾರ ಕಡಿತಗೊಳಿಸಿದೆ ಎಂದು ಆರೋಪಿಸಿ, ಬೀಡಿ ಆ್ಯಂಡ್ ಟೊಬ್ಯಾಕೊ ಲೇಬರ್ ಯೂನಿಯನ್ ನೇತೃತ್ವದಲ್ಲಿ ನಗರದ ತಹಶೀಲ್ದಾರ್ ಕಚೇರಿ ಮುಂದೆ ಸರ್ಕಾರದ ಆದೇಶದ ಪ್ರತಿ ಸುಟ್ಟು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಅಖಿಲ ಭಾರತ ಬೀಡಿ ಫೆಡರೇಷನ್ ಯೂನಿಯನ್ ಕೇಂದ್ರ ಸಮಿತಿ (ದೆಹಲಿ) ಸದಸ್ಯ ಕವಿರಾಜ್ ಎಸ್. ಕಾಂಚನ್ ಮಾತನಾಡಿ, ‘ಪ್ರತಿ ಸಾವಿರ ಬೀಡಿಯ ವೇತನವನ್ನು ₹331ರಿಂದ ₹270 ಇಳಿಕೆ ಮಾಡಿ ಕಾರ್ಮಿಕರಿಗೆ ಅನ್ಯಾಯ ಮಾಡಲಾಗಿದೆ. ಈ ಆದೇಶ ಹಿಂಪಡೆದು ಸರ್ಕಾರವು ಬೀಡಿ ಕಾರ್ಮಿಕರ ಹಿತ ದೃಷ್ಟಿಯಿಂದ ಪ್ರತಿ ಸಾವಿರ ಬೀಡಿಗೆ ₹395 ಕನಿಷ್ಠ ವೇತನ ನಿಗದಿಪಡಿಸಿ ಹೊಸ ಆದೇಶ ಹೊರಡಿಸಬೇಕು. ಕನಿಷ್ಠ ₹331 ನಿಗದಿಪಡಿಸಬೇಕು’ ಎಂದು ಅವರು ಒತ್ತಾಯಿಸಿದರು.
2025ನೇ ಸಾಲಿನಲ್ಲಿ ನೂತನ ಕನಿಷ್ಠ ವೇತನ ನಿಗದಿ ಪಡಿಸಲು 5(1)ಎ ಸಮಿತಿ ರಚಿಸಿ ಮಾಹಿತಿ ಪಡೆದಿದ್ದರೂ ಮಾಲಕರ ಪರವಾಗಿರುವ ಕೆಲವು ಕಾರ್ಮಿಕ ಸಂಘಟನೆಗಳು ಕಡಿಮೆ ಕೂಲಿಗೆ ಒಪ್ಪಿದ್ದವು. ನಾವು ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.
ಬೀಡಿ ಕಾರ್ಮಿಕರು ಕೆಲಸ ಬಿಡುವಾಗ ಕಾನೂನು ಬದ್ಧವಾಗಿ ನೀಡಬೇಕಾದ ಗ್ರಾಚ್ಯುಟಿ ಹಣವನ್ನು ನೀಡದ ಮಾಲಕರ ವಿರುದ್ಧ ಕಾನೂನು ಕ್ರಮ ಕೈಗೊಂಡು ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಮತ್ತು ಗ್ರಾಚ್ಯುಟಿ ಕೊಡಿಸಬೇಕು ಎಂದು ಒತ್ತಾಯಿಸಿದರು.
ನಂತರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಹಾಗೂ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಬೀಡಿ ಆ್ಯಂಡ್ ಟೊಬ್ಯಾಕೊ ಲೇಬರ್ ಯೂನಿಯನ್ ಅಧ್ಯಕ್ಷೆ ನಳಿನಿ ಎಸ್., ಪ್ರಧಾನ ಕಾರ್ಯದರ್ಶಿ ಉಮೇಶ್ ಕುಂದರ್, ಸಿಐಟಿಯು ಉಡುಪಿ ಜಿಲ್ಲಾ ಕೋಶಾಧಿಕಾರಿ ಶಶಿಧರ ಗೋಲ್ಲ, ಸಮಿತಿ ಸದಸ್ಯರಾದ ಗಿರಿಜಾ, ವಸಂತಿ, ಶಾರದಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.