ADVERTISEMENT

ಪಿಯುಸಿ: ಉಡುಪಿಗೆ ಮತ್ತೆ ಅಗ್ರಪಟ್ಟ

ವಿಜ್ಞಾನ ವಿಭಾಗದಲ್ಲಿ ವಿದ್ಯೋದಯ ಕಾಲೇಜು ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 17:17 IST
Last Updated 14 ಜುಲೈ 2020, 17:17 IST
ಗ್ರೀಷ್ಮಾ, 593 ಅಂಕ 
ಗ್ರೀಷ್ಮಾ, 593 ಅಂಕ    

ಉಡುಪಿ: ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆ ಪಿಯುಸಿ ಫಲಿತಾಂಶದಲ್ಲೂ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷವೂ ಪ್ರಥಮ ಸ್ಥಾನದಲ್ಲಿದ್ದ ಜಿಲ್ಲೆ ಈ ವರ್ಷವೂ ಅಗ್ರಪಟ್ಟವನ್ನು ಉಳಿಸಿಕೊಂಡಿದೆ.‌

ಈ ವರ್ಷ ಶೇ 90.71ರಷ್ಟು ಫಲಿತಾಂಶ ಪಡೆದಿರುವ ಜಿಲ್ಲೆ, ಕಳೆದ ವರ್ಷ ಶೇ 92.20ರಷ್ಟು ಫಲಿತಾಂಶ ಪಡೆದಿತ್ತು. ಈ ವರ್ಷ ಶೇ 1.49 ಕುಸಿತವಾಗಿದೆ. ಈ ಸಾಲಿನಲ್ಲಿ ಪರೀಕ್ಷೆ ಬರೆದಿದ್ದ 13,775 (ಫ್ರೆಶರ್) ವಿದ್ಯಾರ್ಥಿಗಳ ಪೈಕಿ 12,495 ಮಕ್ಕಳು ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿನಿಯರೇ ಮುಂದು:

ADVERTISEMENT

ಉಡುಪಿಯ ವಿದ್ಯೋದಯ ಕಾಲೇಜು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ವಿಜ್ಞಾನ ವಿಭಾಗದಲ್ಲಿ ಅಭಿಜ್ಞಾ ರಾವ್ ರಾಜ್ಯಕ್ಕೆ ಪ್ರಥಮ ಹಾಗೂ ಇದೇ ಕಾಲೇಜಿನ ವಿದ್ಯಾರ್ಥಿನಿ ಕೆ. ಗ್ರೀಷ್ಮಾ (593) ಹಾಗೂ ಮಹಾತ್ಮಾಗಾಂಧಿ ಮೆಮೋರಿಯಲ್‌ ಕಾಲೇಜು ವಿದ್ಯಾರ್ಥಿನಿ ಮೇಧಾ ಎನ್‌.ಭಟ್‌ (593) ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ವಿದ್ಯೋದಯ ಕಾಲೇಜಿನ ಪದ್ಮಿಕಾ ಕೆ.ಶೆಟ್ಟಿ (592) ಐದನೇ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಕಾರ್ಕಳದ ಜ್ಞಾನ ಸುಧಾ ಕಾಲೇಜಿನ ಮಿತಿಕಾ ಕಾಮತ್‌ ಹಾಗೂ ಕುಂದಾಪುರದ ವೆಂಕಟರಮಣ ಪಿಯು ಕಾಲೇಜಿನ ಸ್ವಾತಿ ಪೈ ತಲಾ (594) ಅಂಕ ಪಡೆದು ರಾಜ್ಯಕ್ಕೆ ನಾಲ್ಕನೇ ಹಾಗೂ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ಎಂಜಿಎಂ ಕಾಲೇಜಿನ ಸಮನ್ವಿ 586 (ಶೇ 95.5) ಅಂಕಗಳೊಂದಿಗೆ ಗಮನಾರ್ಹ ಸಾಧನೆ ಮಾಡಿದ್ದಾರೆ.

ಶೇ 100 ಫಲಿತಾಂಶ:

ಶಿರ್ಲಾಲು ಸರ್ಕಾರಿ ಪದವಿ ಪೂರ್ವ ಕಾಲೇಜು, ವಿಯಾರು ಮೊರಾರ್ಜಿ ಕಾಲೇಜು, ಬ್ರಹ್ಮಾವರದ ನಿರ್ಮಲಾ ಹಾಗೂ ಆರೂರು ಮೊರಾರ್ಜಿ ಕಾಲೇಜು, ಕಾರ್ಕಳದ ಕ್ರೈಸ್ಟ್‌ ಕಿಂಗ್ ಕಾಲೇಜು, ಉಡುಪಿಯ ಮಹೇಶ್‌ ಹಾಗೂ ವಿದ್ಯೋದಯ ಮೂಳೂರಿನ ಆಲ್‌ಇಹ್ಲಾನ್ ಕಾಲೇಜುಗಳುಶೇ 100 ಫಲಿತಾಂಶ ದಾಖಲಿಸಿವೆ.

ಬಾಲಕಿಯರೇ ಮೇಲುಗೈ:

ಈ ವರ್ಷವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಪರೀಕ್ಷೆ ಬರೆದ 7,720 ಬಾಲಕಿಯರಲ್ಲಿ 6,973 ವಿದ್ಯಾರ್ಥಿನಿಯರು ಪಾಸ್‌ ಆಗಿದ್ದು ಶೇ 90.32 ಫಲಿತಾಂಶ ಪಡೆದಿದ್ದಾರೆ. ಪರೀಕ್ಷೆಗೆ ಹಾಜರಾದ 7,353 ಬಾಲಕರಲ್ಲಿ 5988 ಮಂದಿ ಉತ್ತೀರ್ಣರಾಗಿದ್ದು ಶೇ 81.44 ಫಲಿತಾಂಶ ಪಡೆದಿದ್ದಾರೆ.

ಹಳ್ಳಿ ಮಕ್ಕಳು ಮುಂದು:

ಗ್ರಾಮೀಣ ಭಾಗಗಳಿಂದ ಪರೀಕ್ಷೆಗೆ ಹಾಜರಾದ 7,105 ವಿದ್ಯಾರ್ಥಿಗಳಲ್ಲಿ 6,464 (ಶೇ 90.98) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ನಗರಗಳಿಂದ ಪರೀಕ್ಷೆ ಬರೆದ 6,670 ವಿದ್ಯಾರ್ಥಿಗಳಲ್ಲಿ 6,031 (90.42) ಮಂದಿ ಪಾಸ್ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.