ADVERTISEMENT

ಉಡುಪಿ| ಅದಮಾರು ಕಿರಿಯ ಯತಿಗಳ ಪುರಪ್ರವೇಶ ಜನವರಿ 8ಕ್ಕೆ

ಅದ್ಧೂರಿ ಮೆರವಣಿಗೆ ಆಯೋಜನೆ ನಿರ್ಧಾರ: ಪರ್ಯಾಯಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 9:56 IST
Last Updated 11 ಡಿಸೆಂಬರ್ 2019, 9:56 IST
ಮುಂದಿನ ಅದಮಾರು ಮಠದ ಪರ್ಯಾಯ ಮಹೋತ್ಸವದ ಸಿದ್ಧತೆಗಳ ಕುರಿತು ಕೃಷ್ಣ ಸೇವಾ ಬಳಗದ ಅಧ್ಯಕ್ಷ ಎಂ.ಬಿ.ಪುರಾಣಿಕ್ ಮಾತನಾಡಿದರು.
ಮುಂದಿನ ಅದಮಾರು ಮಠದ ಪರ್ಯಾಯ ಮಹೋತ್ಸವದ ಸಿದ್ಧತೆಗಳ ಕುರಿತು ಕೃಷ್ಣ ಸೇವಾ ಬಳಗದ ಅಧ್ಯಕ್ಷ ಎಂ.ಬಿ.ಪುರಾಣಿಕ್ ಮಾತನಾಡಿದರು.   

ಉಡುಪಿ: ಮುಂದಿನ ಪರ್ಯಾಯ ಮಹೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿದ್ದು, ಜ.8ರಂದುಅದಮಾರು ಮಠದ ಕಿರಿಯ ಯತಿ ಈಶಪ್ರಿಯ ಶ್ರೀಗಳು ಪ್ರವೇಶ ಮಾಡಲಿದ್ದಾರೆ. ಅಂದು ಮಧ್ಯಾಹ್ನ 2ಕ್ಕೆ ಜೋಡುಕಟ್ಟೆಯಿಂದ ರಥಬೀದಿಯವರೆಗೂ ಅದ್ಧೂರಿ ಮೆರವಣಿಗೆಯಲ್ಲಿ ಶ್ರೀಗಳನ್ನು ಕರೆತರಲಾಗುವುದು ಎಂದು ಕೃಷ್ಣ ಸೇವಾ ಬಳಗದ ಅಧ್ಯಕ್ಷ ಎಂ.ಬಿ.ಪುರಾಣಿಕ್ ತಿಳಿಸಿದರು.

ಸೋಮವಾರ ಅದಮಾರು ಮಠದ ವಸತಿಗೃಹದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಿರಿಯ ಯತಿಗಳು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿನೀಡಿ 8ರಂದು ಉಡುಪಿಗೆ ಆಗಮಿಸಲಿದ್ದಾರೆ. ಈ ಸಂದರ್ಭ ಪರ್ಯಾಯ ಮೆರವಣಿಗೆ ಸಾಗುವ ರಸ್ತೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಬೇಕು. ಕುಣಿತ, ಭಜನೆ ಆಯೋಜನೆಗೆ ಅವಕಾಶವಿದ್ದು, ಆಸಕ್ತರು ಹೆಸರು ನೋಂದಾಯಿಸಬಹುದು ಎಂದರು.‌

2020–22ನೇ ಸಾಲಿನ ಪರ್ಯಾಯವನ್ನು ಪಾರಂಪರಿಕ ಸ್ವರೂಪದ ಜತೆಗೆ ವಿಶಿಷ್ಟ ಚಿಂತನೆಗಳೊಂದಿಗೆ ಪ್ರಸ್ತುತ ಕಾಲಘಟ್ಟಕ್ಕೆ ಹೊಂದಿಕೆಯಾಗುವಂತೆ ನೆರವೇರಿಸಲು ಶ್ರೀಗಳು ಉದ್ದೇಶಿಸಿದ್ದಾರೆ. ಸಮಾಜದಲ್ಲಿ ಸ್ವಚ್ಛ ಪರಿಸರದ ಜಾಗೃತಿ ಮೂಡಿಸಲು ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ ಎಂದರು.

ADVERTISEMENT

ಪರ್ಯಾಯ ಮಹೋತ್ಸವಕ್ಕೆ ಶುಭ ಕೋರುವ ಭಕ್ತರು, ಅಭಿಮಾನಿಗಳು ಪ್ಲಾಸ್ಟಿಕ್‌ ಬ್ಯಾನರ್ ಬದಲಾಗಿ ಬಟ್ಟೆಯ ಬ್ಯಾನರ್‌ಗಳನ್ನು ಬಳಸಬೇಕು. ಕಾರ್ಯಕ್ರಮಗಳಲ್ಲೂ ಪ್ಲಾಸ್ಟಿಕ್‌ ಬದಲಾಗಿ ಇತರ ಉತ್ಪನ್ನಗಳನ್ನು ಬಳಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಪರ್ಯಾಯ ಮಹೋತ್ಸವದ ಸಂದರ್ಭ ಆಯೋಜಿಸುವ ಕಾರ್ಯಕ್ರಮಗಳು ಧಾರ್ಮಿಕ ಹಾಗೂ ಭಾರತೀಯ ಸಂಸ್ಕೃತಿಯ ಚೌಕಟ್ಟಿನ ಮಿತಿಯಲ್ಲಿರಬೇಕು. ಸ್ಥಳೀಯ ಪ್ರತಿಭೆಗಳಿಗೆ ವೇದಿಕೆಯಾಗಬೇಕು ಎಂದು ಬಳಗದ ಸಂಚಾಲಕರಾದ ಹರಿನಾರಾಯಣ ಅಸ್ರಣ್ಣ ಹೇಳಿದರು.

ಈ ಬಾರಿ ಒಂದೇ ಬಾರಿ ಹೊರೆ ಕಾಣಿಕೆಯನ್ನು ಸ್ವೀಕರಿಸುವ ಬದಲು ಪ್ರತಿ 15ದಿನಗಳಿಗೊಮ್ಮೆ ಹೊರೆಕಾಣಿಕೆ ಸ್ವೀಕರಿಸಲು ನಿರ್ಧರಿಸಲಾಗಿದೆ. ಇದರಿಂದ ಆಹಾರ ಪದಾರ್ಥಗಳು ಹಾಳಾಗುವುದಿಲ್ಲ. ಭಕ್ತರ ಅನ್ನಪ್ರಸಾದಕ್ಕೆ ವಿನಿಯೋಗವಾಗಲಿದೆ. ಹೊರೆಕಾಣಿಕೆ ಸಲ್ಲಿಸುವ ಭಕ್ತರು, ಸಂಘ ಸಂಸ್ಥೆಗಳು, ದೇವಸ್ಥಾನ, ಮಠಗಳು ಮೊದಲೇ ಹೊರೆಕಾಣಿಕೆ ಸಲ್ಲಿಕೆ ದಿನಾಂಕವನ್ನು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಹೊರೆ ಕಾಣಿಕೆ ಸಲ್ಲಿಸುವಾಗ ಬರುವ ಭಕ್ತರು ಸ್ವಾಮೀಜಿ ಅವರನ್ನು ಭೇಟಿಮಾಡಿ ಸಂವಾದ ನಡೆಸಬಹುದು. ಜತೆಗೆ, ಎಂದಿನಂತೆ ರಾಜಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.‌

ಈ ಸಂದರ್ಭ ಬಳಗದ ಸಂತೋಷ್ ಕುಮಾರ್‌, ಯಶಪಾಲ್ ಸುವರ್ಣ, ರಾಘವೇಂದ್ರ ರಾವ್‌, ಗೋವಿಂದರಾಜ ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.