ADVERTISEMENT

ಉಡುಪಿ: ಮಳೆಯ ಆರ್ಭಟ; ಮನೆಗಳಿಗೆ ಹಾನಿ

ಇಂದಿನಿಂದ ಎರಡು ದಿನ ರೆಡ್ ಅಲರ್ಟ್‌

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 16:54 IST
Last Updated 14 ಜೂನ್ 2021, 16:54 IST
ಉಡುಪಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸೋಮವಾರ ಸುರಿಯುತ್ತಿರುವ ಮಳೆಯಲ್ಲಿ ಹೋಗುತ್ತಿರುವ ಸಾರ್ವಜನಿಕರು.
ಉಡುಪಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸೋಮವಾರ ಸುರಿಯುತ್ತಿರುವ ಮಳೆಯಲ್ಲಿ ಹೋಗುತ್ತಿರುವ ಸಾರ್ವಜನಿಕರು.   

ಉಡುಪಿ: ಜಿಲ್ಲೆಯಾದ್ಯಂತ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಅವಾಂತರ ಸೃಷ್ಟಿಸಿದೆ. ಕುಂದಾಪುರ, ಬ್ರಹ್ಮಾವರ, ಹೆಬ್ರಿ, ಕಾಪು, ಬೈಂದೂರು, ಕಾರ್ಕಳ ಹಾಗೂ ಉಡುಪಿ ತಾಲ್ಲೂಕುಗಳಲ್ಲಿ ಸೋಮವಾರವೂ ಬಿರುಸಿನ ಮಳೆ ಸುರಿಯಿತು.

ಗಾಳಿ ಮಳೆಗೆ ಜಿಲ್ಲೆಯಾದ್ಯಂತ ಹಲವು ಮನೆಗಳು ಕುಸಿದುಬಿದ್ದಿವೆ. ತೋಟಗಾರಿಕಾ ಬೆಳೆ ನಾಶವಾಗಿದೆ. ಮರಗಳು ಬುಡಮೇಲಾಗಿದ್ದು, ವಿದ್ಯುತ್ ಕಂಬಗಳು ಧರೆಗುರುಳಿವೆ. ತಗ್ಗು ಪ್ರದೇಶಗಳು ಜಲಾವೃತವಾಗಿವೆ.‌ ಸೋಮವಾರ ದಿನವಿಡೀ ಮಳೆ ಸುರಿಯಿತು. ದಟ್ಟವಾದ ಮೋಡ ಕವಿದು ಸೂರ್ಯನ ದರ್ಶನವಾಗಲಿಲ್ಲ. ಗಾಳಿಯ ಅಬ್ಬರ ಜೋರಾಗಿತ್ತು.

ರೆಡ್ ಅಲರ್ಟ್‌:

ADVERTISEMENT

ಕರಾವಳಿಯ ಜಿಲ್ಲೆಗಳಲ್ಲಿ ಜೂನ್ 19ರವರೆಗೂ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜೂನ್ 15 ಹಾಗೂ 16ರಂದು ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಎರಡೂ ದಿನ 11.5 ಸೆಂ.ಮೀನಿಂದ 20ಸೆಂ.ಮೀವರೆಗೂ ಮಳೆ ಬೀಳುವ ಸಾಧ್ಯತೆಗಳಿವೆ. ಜೂನ್ 17 ಹಾಗೂ 18ರಂದು ಆರೆಂಜ್ ಅಲರ್ಟ್ ಹಾಗೂ 19ರಂದು ಯಲ್ಲೊ ಅಲರ್ಟ್‌ ಮುನ್ಸೂಚನೆ ನೀಡಲಾಗಿದೆ.

‌ಸೋಮವಾರ ಸುರಿದ ಮಳೆಗೆ 88 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ₹ 7.9 ಲಕ್ಷ ಹಾನಿಯಾಗಿದೆ. 2.1 ಕಿ.ಮೀ ವಿದ್ಯುತ್ ಮಾರ್ಗಕ್ಕೆ ಹಾನಿಯಾಗಿದೆ. ಜೂನ್ 1ರಿಂದ 14ರವರೆಗೆ ಜಿಲ್ಲೆಯಲ್ಲಿ ಸುರಿದ ಮಳೆಗೆ ಇದುವರೆಗೂ 335 ವಿದ್ಯುತ್ ಕಂಬಗಳು ಬಿದ್ದಿವೆ. 39 ಟ್ರಾನ್ಸ್‌ಫರಂಗಳು ಸುಟ್ಟುಹೋಗಿವೆ. 9 ಕಿ.ಮೀ ವಿದ್ಯುತ್ ಮಾರ್ಗ ಹಾಳಾಗಿದೆ. ₹ 78.64 ಲಕ್ಷ ನಷ್ಟ ಸಂಭವಿಸಿದೆ.‌

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೃಷಿ ಭೂಮಿ ಜಲಾವೃತಗೊಂಡಿದೆ. ಬಾಳೆ ಸೇರಿದಂತೆ ಹಲವು ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.