ADVERTISEMENT

ಉಡುಪಿ- ಮಳೆ ಅಬ್ಬರ: ಸಿಡಿಲು ಬಡಿದು ಮಹಿಳೆಗೆ ಗಾಯ

ಹಲವು ಮನೆಗಳಿಗೆ ಭಾಗಶಃ ಹಾನಿ,: ಮೇ 22ರವರೆಗೆ ಭಾರಿ ಮಳೆ ಮುನ್ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಮೇ 2022, 13:53 IST
Last Updated 17 ಮೇ 2022, 13:53 IST
ಭಾರಿ ಮಳೆಗೆ ಕೃಷ್ಣಮಠದ ಪಾರ್ಕಿಂಗ್ ಪ್ರದೇಶ ಜಲಾವೃತಗೊಂಡಿರುವುದು.
ಭಾರಿ ಮಳೆಗೆ ಕೃಷ್ಣಮಠದ ಪಾರ್ಕಿಂಗ್ ಪ್ರದೇಶ ಜಲಾವೃತಗೊಂಡಿರುವುದು.   

ಉಡುಪಿ: ಜಿಲ್ಲೆಯಾದ್ಯಂತ ಸೋಮವಾರ ಸುರಿದು ಮಳೆ ಅವಾಂತರಗಳನ್ನು ಸೃಷ್ಟಿಸಿದೆ. ಗುಡುಗು ಸಿಡಿಲು ಬಿರುಗಾಳಿ ಸಹಿತ ಸುರಿದ ಮಳೆಗೆ ಮರಗಳು ಬಿದ್ದು ಮನೆಗಳಿಗೆ ಹಾನಿಯಾಗಿದೆ. ನೂರಾರು ವಿದ್ಯುತ್ ಕಂಬಗಳು ಬಿದ್ದು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು. ವಿದ್ಯುತ್ ವ್ಯತ್ಯಯ ಉಂಟಾಗಿತ್ತು.

ಕಾಪು ತಾಲ್ಲೂಕಿನ ಕೋಟೆ ಗ್ರಾಮದಲ್ಲಿ ಮನೆಗೆ ಸಿಡಿಲು ಬಡಿದು ಸರೋಜ ಎಂಬುವರ ಕೈ ಸ್ವಾಧೀನ ಇಲ್ಲದಂತಾಗಿದೆ. ಕಾಪು ತಾಲ್ಲೂಕಿನ ಕೋಟೆ ಗ್ರಾಮದ ಸುಬೋದ್ ಕುಮಾರ್ ಅವರ ಮನೆಗೆ ಸಿಡಿಲು ಬಡಿದು ಗೋಡೆ ಹಾಗೂ ವಿದ್ಯುತ್ ಸಂಪರ್ಕ ವ್ಯವಸ್ಥೆಗೆ ಹಾನಿಯಾಗಿದೆ.

ಕುಂದಾಪುರ ತಾಲ್ಲೂಕಿನ ಕಾವ್ರಾಡಿ ಗ್ರಾಮದ ಬಾಬಿ ಕುಲಾಲ್ತಿ, ಕಾವ್ರಾಡಿ ಗ್ರಾಮದ ಸಣ್ಣಮ್ಮ ಮೊಗೇರ್ತಿ ಅವರ ಕೊಟ್ಟಿಗೆಗೆ ಭಾಗಶ: ಹಾನಿಯಾಗಿದೆ.

ADVERTISEMENT

ವಂಡ್ಸೆ ಗ್ರಾಮದ ಮೂಕಾಂಬು, ಕುಳಂಜೆ, 74 ಉಳ್ಳೂರು, ಹೆಸ್ಕತ್ತೂರು, ವಕ್ವಾಡಿ, ಅಸೋಡು, ಕಂದಾವರ ಹಾಗೂ ಕಾರ್ಕಳ ತಾಲ್ಲೂಕಿನ ಪಳ್ಳಿ, ಉಡುಪಿ ತಾಲ್ಲೂಕಿನ ಆತ್ರಾಡಿ, ಬ್ರಹ್ಮಾವರ ತಾಲ್ಲೂಕಿನ ಚೇರ್ಕಾಡಿ, ಅಚ್ಲಾಡಿ ಗ್ರಾಮದಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ.

ಕೆಲವು ಮನೆಗಳ ಮೇಲೆ ಮರಬಿದ್ದು ಕುಸಿದಿದ್ದರೆ, ಕೆಲವು ಮನೆಗಳು ಬಿರುಗಾಳಿ ಮಳೆಗೆ ಭಾಗಶಃ ಹಾನಿಯಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿನೀಡಿ ಮಾಹಿತಿ ಪಡೆದಿದ್ದಾರೆ.

‌ಕೃಷಿ, ತೋಟಗಾರಿಕಾ ಬೆಳೆಗಳಿಗೆ ಹಾನಿ:‌

ಬಿರುಗಾಳಿ ಸಹಿತ ಮಳೆಗೆ ಕುಂದಾಪುರ ತಾಲ್ಲೂಕಿನ ಶಂಕರ ನಾರಾಯಣ ಗ್ರಾಮದ ಗಿರಿಜಮ್ಮ ಶೆಡ್ತಿ, ಆಶಾ, ಅಭಿಷೇಕ್, ಶರಾವತಿ ಅವರ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ.

ಕೊರ್ಗಿ ಗ್ರಾಮದ ಮೀನ ಬಳೆಗಾರ್ತಿ ಹಾಗೂ ಶಂಕರ ಶೆಟ್ಟಿ, ವಡೇರಹೋಬಳಿ ಗ್ರಾಮದ ಸೀತು ಅವರ ಬೆಳೆಗಳೂ ಮಳೆಗೆ ಸಿಕ್ಕು ನಾಶವಾಗಿದೆ.

ಕಳೆದ 24 ಗಂಟೆಗಳಲ್ಲಿ ಉಡುಪಿ ತಾಲ್ಲೂಕಿನಲ್ಲಿ 69.5 ಮಿ.ಮೀ, ಬ್ರಹ್ಮಾವರ 40.5, ಕಾಪು 74.9, ಕುಂದಾಪುರ 21.6, ಬೈಂದೂರು 36.2, ಕಾರ್ಕಳ 62.8, ಹೆಬ್ರಿ 44.2 ಮಿ.ಮೀ ಮಳೆ ಸುರಿದಿದೆ.

ಅಲರ್ಟ್‌:

ಮುಂದಿನ ಮೂರ್ನಾಲ್ಕು ದಿನ ಕರಾವಳಿಯಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ 18, 19, 20ರಂದು 115 ಮಿ.ಮೀಗಿಂತ ಹೆಚ್ಚು ಮಳೆಯಾಗುವ ಸಂಭವವಿದೆ. ಗುಡುಗು ಸಿಡಿಲು ಸಹಿತ ಮಳೆ ಸುರಿಯಲಿದೆ. ಮೇ 21 ಹಾಗೂ 22ರಂದು 65 ಮಿ.ಮೀಗಿಂತ ಹೆಚ್ಚು ಮಳೆ ಸುರಿಯುವ ಸಂಭವವಿದೆ ಎಂದು ಎಚ್ಚರಿಕೆ ನೀಡಿದೆ.

ಸಾರ್ವಜನಿಕರು ಹಾಗೂ ಮೀನುಗಾರರು ಕಡಲಿಗೆ ಇಳಿಯದಂತೆ, ತೀರ ಪ್ರದೇಶದಲ್ಲಿ ವಾಸವಿರುವವರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಪಾರ್ಕಿಂಗ್ ಪ್ರದೇಶಕ್ಕೆ ನೀರು

ಉಡುಪಿಯಲ್ಲಿ ಮಳೆ ಅನಾಹುತ ಸೃಷ್ಟಿಸಿದೆ. ಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ಒಂದು ಅಡಿಯಷ್ಟು ನೀರು ಮಳೆ ನೀರು ನಿಂತಿತ್ತು. ನೀರಿನ ಮಟ್ಟ ಹೆಚ್ಚಾಗುತ್ತಿದ್ದಂತೆ ಪ್ರವಾಸಿಗರು ವಾಹನಗಳನ್ನು ಸುರಕ್ಷಿತ ಸ್ಥಳಗಳಿಗೆ ಕೊಂಡೊಯ್ದು ನಿಲ್ಲಿಸಿದರು. ಭಕ್ತರು ನೀರಿನಲ್ಲಿಯೇ ನಡೆದುಕೊಂಡು ಕೃಷ್ಣಮಠ ಪ್ರವೇಶಿಸಿ ದೇವರ ದರ್ಶನ ಪಡೆದರು. ಮಠದಬೆಟ್ಟು, ಬನ್ನಂಜೆ ಸೇರಿದಂತೆ ಹಲವು ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ್ದು ಸ್ಥಳೀಯರು ಸಮಸ್ಯೆ ಎದುರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.