ADVERTISEMENT

ಚಾರದಲ್ಲಿ 11 ಸೆಂಮೀ ಮಳೆ; ಕಡಲು ಪ್ರಕ್ಷುಬ್ಧ

ಹಲವು ಮನೆ, ಕೊಟ್ಟಿಗೆಗಳಿಗೆ ಹಾನಿ: ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 13:58 IST
Last Updated 17 ಜುಲೈ 2021, 13:58 IST

ಉಡುಪಿ: ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಬಿರುಗಾಳಿ ಮಳೆಯಿಂದ ಮರಗಳು ಬಿದ್ದು ಮನೆಗಳು ಕುಸಿದಿವೆ. ದನದ ಕೊಟ್ಟಿಗೆಗಳಿಗೆ ಹಾನಿಯಾಗಿದೆ. ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಕಾರ್ಕಳ ತಾಲ್ಲೂಕಿನ ಕೆರ್ವಾಶೆ ಗ್ರಾಮದಲ್ಲಿ ರತಿ ಪೂಜಾರಿ ಮನೆ, ಹೆಬ್ರಿ ತಾಲ್ಲೂಕಿನ ಕೆರೆಬೆಟ್ಟು ಗ್ರಾಮದ ಸುಮತಿ ಶೆಟ್ಟಿ, ಕಾಪು ತಾಲ್ಲೂಕಿನ ಎಲ್ಲೂರು ಗ್ರಾಮದ ವಿಶ್ವನಾಥ ಮುಖಾರಿ ಮನೆಗೆ ಭಾಗಶಃ ಹಾನಿಯಾಗಿದೆ.

ಕುಂದಾಪುರ ತಾಲ್ಲೂಕಿನ ಕೆರ್ಕುಂಜೆ ಗ್ರಾಮದ ವಾಸುದೇವ ಆಚಾರಿ ಅವರ ಕೊಟ್ಟಿಗೆ ಹಾಗೂ ಬೈಂದೂರು ತಾಲ್ಲೂಕಿನ ಗೋಳಿಹೊಳೆ ಗ್ರಾಮದ ನಾಗು ಮರಾಠಿ ಅವರ ಕೊಟ್ಟಿಗೆ ಹಾಗೂ ಬೈಂದೂರು ತಾಲ್ಲೂಕಿನ ಕೆರ್ಗಾಲು ಗ್ರಾಮದ ಬಚ್ಚಿ ಅವರ ಕೊಟ್ಟಿಗೆ ಮಳೆಯಿಂದ ಹಾನಿಯಾಗಿದೆ.

ADVERTISEMENT

ಹೆಬ್ರಿ ತಾಲ್ಲೂಕಿನ ಚಾರದಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚು 11 ಸೆಂ.ಮೀ ಮಳೆ ಸುರಿದಿದೆ. ಉಡುಪಿಯಲ್ಲಿ 2.3, ಕಾಪುವಿನಲ್ಲಿ 3.3, ಕುಂದಾಪುರದಲ್ಲಿ 4.5, ಬೈಂದೂರಿನಲ್ಲಿ 3.8, ಕಾರ್ಕಳದಲ್ಲಿ 3.7 ಹಾಗೂ ಹೆಬ್ರಿ ತಾಲ್ಲೂಕಿನಲ್ಲಿ 5.1 ಸೆ.ಮೀ ಮಳೆಯಾಗಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಸೌಪರ್ಣಿಕಾ, ಸ್ವರ್ಣಾ, ಸೀತಾ, ವರಾಹಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಮಳೆ ಮತ್ತಷ್ಟು ಬಿರುಸಾದರೆ ನದಿಗಳು ತುಂಬಿ ಹರಿದು ಅನಾಹುತ ಸೃಷ್ಟಿಸುವ ಆತಂಕವಿದೆ.

ಜುಲೈ 22ರವರೆಗೂ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕಡಲು ಪ್ರಕ್ಷುಬ್ಧಗೊಂಡಿದ್ದು, ದೈತ್ಯ ಅಲೆಗಳು ತೀರಕ್ಕೆ ಬಂದು ಅಪ್ಪಳಿಸುತ್ತಿವೆ. ಪರಿಣಾಮ, ಬೈಂದೂರು, ಕಾಪು ಹಾಗೂ ಉಡುಪಿಯ ತೀರಗಳಲ್ಲಿ ಕಡಲ್ಕೊರೆತ ಆತಂಕ ಸೃಷ್ಟಿಯಾಗಿದೆ.

ಕಳೆದ 24 ಗಂಟೆಗಳಲ್ಲಿ ಸುರಿದ ಗಾಳಿ ಮಳೆಗೆ ಉಡುಪಿಯಲ್ಲಿ 6, ಕುಂದಾಪುರದಲ್ಲಿ 5 ಸೇರಿ 13 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, 2 ಟ್ರಾನ್ಸ್‌ಫಾರಂಗಳು ಸುಟ್ಟುಹೋಗಿವೆ. 0.19 ಕಿ.ಮೀ ವ್ಯಾಪ್ತಿಯ ವಿದ್ಯುತ್ ಮಾರ್ಗ ಹಾಳಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.