ADVERTISEMENT

‘ರಂಗಹಬ್ಬ’ ನಾಟಕೋತ್ಸವ 25ರಿಂದ

ಸುಮನಸಾ ಕೊಡವೂರು ರಂಗಸಂಸ್ಥೆಯಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2019, 16:15 IST
Last Updated 22 ಫೆಬ್ರುವರಿ 2019, 16:15 IST
‘ರಂಗ ಹಬ್ಬ’ ನಾಟಕೋತ್ಸವ ಆಯೋಜನೆ ಸಂಬಂಧ ಸುಮನಸಾ ಕೊಡವರೂ ಸಂಸ್ಥೆಯ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದರು.
‘ರಂಗ ಹಬ್ಬ’ ನಾಟಕೋತ್ಸವ ಆಯೋಜನೆ ಸಂಬಂಧ ಸುಮನಸಾ ಕೊಡವರೂ ಸಂಸ್ಥೆಯ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದರು.   

ಉಡುಪಿ: ಸುಮನಸಾ ಕೊಡವೂರು ಸಂಸ್ಥೆಯಿಂದ ಫೆ.25ರಿಂದ ಮಾರ್ಚ್‌ 3ರವರೆಗೂ ‘ರಂಗಹಬ್ಬ’ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 25ರಂದು ಸಂಜೆ 6ಕ್ಕೆ ಉಡುಪಿಯ ಅಜ್ಜರಕಾಡು ಭುಜಂಗಪಾರ್ಕ್‌ ಬಯಲು ರಂಗಮಂದಿರದಲ್ಲಿ ನಾಟಕೋತ್ಸವಕ್ಕೆ ಚಾಲನೆ ಸಿಗಲಿದೆ. ಶ್ಯಾಮಿಲಿ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಜಿ.ಶಂಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವೆ ಜಯಮಲಾ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ರಘುಪತಿ ಭಟ್‌ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

2002ರಲ್ಲಿ ಸ್ಥಾಪ‍ನೆಯಾದ ಸುಮನಸಾ ಕೊಡವೂರು ರಂಗಸಂಸ್ಥೆ ಇದುವರೆಗೂ 600ಕ್ಕೂ ಹೆಚ್ಚು ನಾಟಕಗಳನ್ನು ಪ್ರದರ್ಶಿಸಿದೆ. ಯಕ್ಷಗಾನ, ಸಾಹಿತ್ಯ, ಜನಪರ, ಶೈಕ್ಷಣಿಕ ಚಟುವಟಿಕೆಗಳನ್ನು ಆಯೋಜಿಸುತ್ತಾ ಬಂದಿದೆ. 18 ಬಾರಿ ರಾಜ್ಯಮಟ್ಟದ ನಾಟಕ ಸ್ಪರ್ಧೆ ಹಾಗೂ 3 ಬಾರಿ ರಾಷ್ಟ್ರೀಯ ಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದಿದೆ ಎಂದರು.

ADVERTISEMENT

ಪ್ರತಿವರ್ಷದಂತೆ ಈ ಬಾರಿಯೂ ರಂಗಹಬ್ಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕನ್ನಡ ಮತ್ತು ಸಂಸ್ಕತಿ ಇಲಾಖೆ, ನಗರಸಭೆ, ಸಂಸ್ಕೃತಿ ನಿರ್ದೇಶನಾಲಯ, ಪೇಜಾವರ ಮಠದ ಸಹಯೋಗವಿದೆ ಎಂದು ತಿಳಿಸಿದರು.

25ರಂದು ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯಿಂದ ಜಯತೀರ್ಥ ಜೋಶಿ ನಿರ್ದೇಶನದ ‘ಗುಲಾಮನ ಸ್ವಾತಂತ್ರ್ಯಯಾತ್ರೆ’ ನಾಟಕ ಪ್ರದರ್ಶನವಾಗಲಿದೆ. 26ರಂದು ಕೃಷ್ಣಮೂರ್ತಿ ಕವತ್ತಾರು ನಿರ್ದೇಶನದ ಸುಮನಸಾ ಕೊಡವೂರು ಸಂಸ್ಥೆಯ ‘ಅವ್ವ’, 27ರಂದು ಶೈಲೇಶ್ ಕುಮಾರ್ ನಿರ್ದೇಶನದ ಸೈಡ್‌ವಿಂಗ್ ಬೆಂಗಳೂರು ಸಂಸ್ಥೆಯ ನಾಯೀಕತೆ ನಾಟಕ ಪ್ರದರ್ಶನವಾಗಲಿದೆ ಎಂದು ಮಾಹಿತಿ ನೀಡಿದರು.

28ರಂದು ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ ನಿರ್ದೇಶನದ ಸುಮನಸಾ ಕೊಡವೂರು ತಂಡದ ‘ಪಂಚವಟಿ’ ನಾಟಕ, 1ರಂದು ಡಾ.ಸಾಸ್ವೆಹಳ್ಳಿ ಗಿರೀಶ್ ನಿರ್ದೇಶನದ ಶಿವಮೊಗ್ಗದ ಹೊಂಗಿರಣ ಸಂಸ್ಥೆಯ ‘ವೀರ ಉತ್ತರ ಕುಮಾರ’, 2ರಂದು ಸಿ.ನಂಜುಡೇಗೌಡ ನಿರ್ದೇಶನದ ಬೆಂಗಳೂರಿನ ದೃಶ್ಯಕಾವ್ಯ ತಂಡದ ‘ಮಾಯಾಬೇಟೆ’, 3ರಂದು ಚಂದ್ರಕಾಂತ್ ಕುಂದರ್ ನಿರ್ದೇಶನದ ಸುಮನಸಾ ಕೊಡವೂರು ತಂಡದ ತುಳು ನಾಟಕ ‘ಕನಕನಕನ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.

ಯಕ್ಷಗಾನ ಕಲೆಯ ಬೆಳವಣಿಗೆಗೆ ಶ್ರಮಿಸಿದ ಯು.ದುಗ್ಗಪ್ಪ ಅವರ ಸ್ಮರಣಾರ್ಥ ಕೊಡಮಾಡುವ ‘ಯಕ್ಷಸುಮ’ ಪ್ರಶಸ್ತಿಯನ್ನು ಈ ಬಾರಿ ಯಕ್ಷಗಾನ ಗುರು ಜಯಂತ್ ಕುಮಾರ್ ತೋನ್ಸೆ ಅವರಿಗೆ ಪ್ರದಾನ ಮಾಡಲಾಗುವುದು. ನಾಟಕೋತ್ಸವದಲ್ಲಿ ಪ್ರತಿದಿನ ರಂಗ ಸಾಧಕರೊಬ್ಬರನ್ನು ಸನ್ಮಾನಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸುಮನಸಾದ ಗೌರವಾಧ್ಯಕ್ಷ ಎಂ.ಎಸ್‌.ಭಟ್‌, ಕಾರ್ಯದರ್ಶಿ ಅಕ್ಷತ್ ಅಮೀನ್‌, ಕೋಶಾಧಿಕಾರಿ ಚಂದ್ರಕಾಂತ್ ಕುಂದರ್, ಉಪಾಧ್ಯಕ್ಷ ಗಣೇಶ್ ರಾವ್ ಎಲ್ಲೂರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.