ADVERTISEMENT

ಆದ್ಯತಾ ಪ್ರವಾಸಿ ತಾಣಗಳ ಜಿಲ್ಲೆಯಲ್ಲಿ ಉಡುಪಿ

ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಮೀನುಗಾರಿಕಾ ಸಚಿವ ಎಸ್‌.ಅಂಗಾರ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 12:32 IST
Last Updated 26 ಜನವರಿ 2021, 12:32 IST
ಉಡುಪಿಯಲ್ಲಿ ಜಿಲ್ಲಾ ಗಣರಾಜ್ಯೋತ್ಸವದ ಅಂಗವಾಗಿ ಮಂಗಳವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಆಂಗಾರ ಧ್ವಜಾರೋಹಣ ನೆರವವೇರಿಸಿ ಗೌರವ ವಂದನೆ ಸ್ವೀಕರಿಸಿದರು.
ಉಡುಪಿಯಲ್ಲಿ ಜಿಲ್ಲಾ ಗಣರಾಜ್ಯೋತ್ಸವದ ಅಂಗವಾಗಿ ಮಂಗಳವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಆಂಗಾರ ಧ್ವಜಾರೋಹಣ ನೆರವವೇರಿಸಿ ಗೌರವ ವಂದನೆ ಸ್ವೀಕರಿಸಿದರು.   

ಉಡುಪಿ: ರಾಜ್ಯ ಸರ್ಕಾರದ ಪ್ರವಾಸೋದ್ಯಮ ನೀತಿಯಲ್ಲಿ ಉಡುಪಿ ಜಿಲ್ಲೆ ಆದ್ಯತಾ ಪ್ರವಾಸಿ ತಾಣಗಳ ಜಿಲ್ಲೆಯ ಸ್ಥಾನ ಪಡೆದಿದ್ದು, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಆಂಗಾರ ತಿಳಿಸಿದರು.‌

ಮಂಗಳವಾರ ಜಿಲ್ಲಾ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವವೇರಿಸಿ ಮಾತನಾಡಿದ ಸಚಿವರು, ಜಿಲ್ಲೆಯ ಸಮಗ್ರ ಪ್ರವಾಸಿ ತಾಣಗಳ ಅಭಿವೃದ್ಧಿಗೆ ವಿಷನ್ 2021-31 ಸಿದ್ಧಪಡಿಸಲಾಗುತ್ತಿದ್ದು, ಪ್ರವಾಸೋದ್ಯಮ ನಿರ್ದೇಶನಾಲಯಕ್ಕೆ ಸಲ್ಲಿಸಲಾಗುವುದು. ಮುಂದಿನ 10 ವರ್ಷಗಳಲ್ಲಿ ಜಿಲ್ಲೆಯಲ್ಲಿ ಅಗತ್ಯವಾಗಿ ಕೈಗೊಳ್ಳಬೇಕಾದ ಪ್ರವಾಸೋದ್ಯಮ ಯೋಜನೆಗಳ ವಿವರಗಳು ವಿಷನ್‌ ಪ್ಲಾನ್‌ನಲ್ಲಿರಲಿವೆ ಎಂದರು.‌‌

ಜಿಲ್ಲಾ ಪ್ರವಾಸೋದ್ಯಮ ಇಲಾಖೆಯು ಜಿಲ್ಲೆಯ 104 ಪ್ರವಾಸಿ ತಾಣಗಳನ್ನು ಗುರುತಿಸಿದ್ದು, ಎಲ್ಲ ತಾಣಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಕಾಪು ತಾಲ್ಲೂಕಿನ ಪಡುಬಿದ್ರಿ ಎಂಡ್ ಪಾಯಿಂಟ್ ಬೀಚ್‌ ಅಂತರರಾಷ್ಟ್ರೀಯ ಬ್ಲೂಫ್ಲಾಗ್ ಮಾನ್ಯತೆ ಸಿಕ್ಕಿದ್ದು, ಕುಂದಾಪುರ ತಾಲ್ಲೂಕಿನ ತ್ರಾಸಿ, ಬೈಂದೂರಿನ ಮರವಂತೆ ಬೀಚ್‌ಗಳ ಅಭಿವೃದ್ಧಿಗೆ ₹ 5 ಕೋಟಿ ಮಂಜೂರಾಗಿದೆ ಎಂದರು.‌

ADVERTISEMENT

ಕಾರ್ಕಳ ತಾಲ್ಲೂಕಿನ ಉಮಿಕಲ್ ಕುಂಜದಲ್ಲಿ ಪರಶುರಾಮ ಥೀಂ ಪಾರ್ಕ್ ಸ್ಥಾಪನೆಗೆ ₹ 2 ಕೋಟಿ, ಉಡುಪಿಯ ಅಜ್ಜರಕಾಡು ಭುಜಂಗ ಉದ್ಯಾನದ ಅಭಿವೃದ್ಧಿಗೆ ₹ 1 ಕೋಟಿ ಮಂಜೂರಾಗಿದೆ ಎಂದು ಸಚಿವ ಎಸ್‌.ಅಂಗಾರ ಹೇಳಿದರು.

ಪೊಲೀಸ್ ಇಲಾಖೆ, ಎನ್‌ಸಿಸಿ, ಗೃಹರಕ್ಷಕ ದಳ, ಅಗ್ನಿಶಾಮಕ ದಳಗಳ ಪಥಸಂಚಲನ ಆಕರ್ಷಕವಾಗಿತ್ತು. ಉಡುಪಿ ಶಾಸಕ ಕೆ.ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸಂಧ್ಯಾ ಕಾಮತ್, ನಗರಸಭಾ ಅಧ್ಯಕ್ಷೆ ಸಮಿತ್ರಾ ನಾಯಕ್, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್, ಎಸ್‌ಪಿ ಎನ್‌.ವಿಷ್ಣುವರ್ಧನ್, ಕರಾವಳಿ ಕಾವಲು ಎಸ್‌ಪಿ ಚೇತನ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಇದ್ದರು.‌

ಅಲ್ಲಲ್ಲಿ ಗಣ ರಾಜ್ಯೋತ್ಸವ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ವಾರ್ತಾಧಿಕಾರಿ ಬಿ.ಮಂಜುನಾಥ್ ಧ್ವಜಾರೋಹಣ ನೆರವೇರಿಸಿದರೆ, ಆರೋಗ್ಯ ಮತ್ತು ಕುಟುಂಬ ಇಲಾಖೆಯಲ್ಲಿ ಡಿಎಚ್‌ಒ ಡಾ.ಸುದೀರ್ ಚಂದ್ರ ಸೂಡಾ, ಸರ್ಕಾರಿ ನೌಕರರ ವಸತಿ ಗೃಹದ ಆವರಣದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಗದೀಶ್ ಭಟ್ ಧ್ವಜಾರೋಹಣ ನೆರವೇರಿಸಿದರು.

ಜಿಲ್ಲಾ ಸರಕಾರಿ ನೌಕರರ ಸಂಘದ ಆವರಣದಲ್ಲಿ ಅಧ್ಯಕ್ಷ ಸುಬ್ರಹಣ್ಯ ಶೇರಿಗಾರ್ ಧ್ವಜಾರೋಹಣ ನೆರವೇರಿಸಿದರು. ಉಡುಪಿ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಅಧ್ಯಕ್ಷ ದಿನಕರ ಬಾಬು ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಸಿಇಒ ಡಾ. ನವೀನ್ ಭಟ್, ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್, ಮುಖ್ಯ ಲೆಕ್ಕಾಧಿಕಾರಿ ಕೆ.ಜಿ. ಭಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.