ಪಡುಬಿದ್ರಿ: ಬೆಳಪುವಿನಲ್ಲಿ ನಿರ್ಮಾಣ ಹಂತದಲ್ಲಿರುವ ಮಂಗಳೂರು ವಿಶ್ವವಿದ್ಯಾಲಯದ ಅತ್ಯಾಧುನಿಕ ಸಂಶೋಧನಾ ಕೇಂದ್ರದ ಅನುದಾನ ಪರಿವರ್ತಿಸಿ, ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
10 ವರ್ಷಗಳ ಹಿಂದೆ ರಾಜ್ಯ ಸರ್ಕಾರದಿಂದ ಮಂಜೂರುಗೊಂಡ ಮಂಗಳೂರು ವಿವಿಯ ವಿಜ್ಞಾನ ಸಂಶೋಧನಾ ಕೇಂದ್ರ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಟ್ಟಡ ಕಾಮಗಾರಿ ಅರ್ಧದಲ್ಲಿ ಸ್ಥಗಿತಗೊಂಡಿದೆ.
ಬೆಳಪು ಗ್ರಾಮ ಪಂಚಾಯಿತಿ ಈ ಹಿಂದೆ ಕೊಜೆಂಟ್ರಿಕ್ ಯೋಜನೆಯ ಪುನರ್ ವಸತಿ ಕಾಲೊನಿಗೆ ಭೂಂಇ ನೀಡಿತ್ತು. ಯೋಜನೆ ಹಿಂದೆ ಸರಿದ ಬಳಿಕ ಕೊಜೆಂಟ್ರಿಕ್ಸ್ ಅಧೀನದಲ್ಲಿದ್ದ ಭೂಮಿಯನ್ನು ಕಾನೂನು ಹೋರಾಟದ ಮೂಲಕ ವಾಪಸ್ ಪಡೆದು, 24.26 ಎಕರೆ ಭೂಮಿಯನ್ನು ಈ ಕೇಂದ್ರಕ್ಕೆ ಮೀಸಲಿಡಲಾಗಿತ್ತು.
2013ರಲ್ಲಿ ಮಂಜೂರಾಗಿದ್ದ ಯೋಜನೆಗೆ 2014ರ ಮೇ 4ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಪುವಿನಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು. ಕರ್ನಾಟಕ ಗೃಹ ಮಂಡಳಿಯ ಉಸ್ತುವಾರಿಯಲ್ಲಿ ದೇವಿಪ್ರಸಾದ್ ಕನ್‌ಕ್ಷನ್ಸ್ ಪ್ರೈ. ಲಿ. ಕಂಪನಿಗೆ ಕಾಮಗಾರಿಯ ಗುತ್ತಿಗೆ ವಹಿಸಿ ಕೊಡಲಾಗಿತ್ತು.
ಮೊದಲ ಹಂತದಲ್ಲಿ ₹ 40 ಕೋಟಿ ಅನುದಾನ ಹಾಗೂ ಬಳಿಕ ₹9 ಕೋಟಿ ಬಿಡುಗಡೆಯಾಗಿದ್ದು, ₹9 ಕೋಟಿ ಅನುದಾನದ ಕಾಮಗಾರಿ ನಡೆದಿಲ್ಲ ಎನ್ನುತ್ತಾರೆ ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ.
‘ಕಟ್ಟಡ ಪಾಳು ಬಿದ್ದಿದ್ದು, ಅನೈತಿಕ ಚಟುವಟಿಕೆಗೆ ತಾಣವಾಗಿದೆ. ಕಬ್ಬಿಣದ ಸಲಕರಣೆಗಳು ತುಕ್ಕು ಹಿಡಿಯುತ್ತಿವೆ. ಕಾವಲುಗಾರ ಸಹ ಇಲ್ಲ’ ಎನ್ನುತ್ತಾರೆ ಗ್ರಾಮಸ್ಥರು.
‘10 ವರ್ಷ ಕಳೆದರೂ ಕಟ್ಟಡ ಪೂರ್ಣಗೊಂಡಿಲ್ಲ. ಹಣ ದುರುಪಯೋಗ ಆಗಿದೆ. ಈ ಬಗ್ಗೆ ತನಿಖೆ ನಡೆಸಿ, ಕಾಮಗಾರಿ ಪ್ರಾರಂಭಿಸದಿದ್ದರೆ, ವಿವಿ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ದೇವಿಪ್ರಸಾದ್ ಶೆಟ್ಟಿ ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ಕಟ್ಟಡದಲ್ಲಿ ಏನೆಲ್ಲ ಇವೆ
ಸಂಶೋಧನಾ ಕೇಂದ್ರವು ಆಡಳಿತ ಸೌಧ ಅತಿಥಿಗೃಹ ಅಧಿಕಾರಿಗಳ ವಸತಿ ಗೃಹ ಬೋಧಕೇತರ ಸಿಬ್ಬಂದಿ ವಸತಿಗೃಹ ವಿಜ್ಞಾನ ಸಂಕೀರ್ಣ ಕಟ್ಟಡ ಸಂಶೋಧನಾ ಕೇಂದ್ರ ಕಟ್ಟಡ ನಿರ್ದೇಶಕರ ಕೊಠಡಿ ಉಪಾಹಾರ ಗೃಹ ಅಟೆಂಡರ್ ಬ್ಲಾಕ್ ಒಳಗೊಂಡಿದೆ.
ಸಂಶೋಧನಾ ಕೇಂದ್ರಕ್ಕೆ ಮಂಜೂರು ಆಗಿದ್ದ ಹಣ ಬೇರೆಡೆ ಬಳಕೆಯಾಗಿರುವ ಬಗ್ಗೆ ತನಿಖೆ ನಡೆಸಲು ಆಂತರಿಕ ತನಿಖಾ ಸಮಿತಿ ರಚಿಸಲಾಗಿದ್ದು ಸಮಿತಿ ವರದಿ ಆಧರಿಸಿ ಮುಂದಿನ ಕ್ರಮ ವಹಿಸಲಾಗುವುದು.-ಪ್ರೊ.ಪಿ.ಎಲ್. ಧರ್ಮ ವಿವಿ ಕುಲಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.