ಉಡುಪಿ: ಎಲ್ಲೆಂದರಲ್ಲಿ ಕಿತ್ತು ಹೋಗಿರುವ ಡಾಂಬರು, ಬೃಹತ್ ಹೊಂಡಗಳಿಂದ ಆವೃತವಾಗಿರುವ ರಸ್ತೆಗಳು ಮಳೆ ಬಂದರೆ ರಸ್ತೆಯಲ್ಲಿ ತೆವಳಿಕೊಂಡು ಹೋಗುವ ವಾಹನಗಳು...
ಇದು ವ್ಯಾಪ್ತಿಯ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ರಸ್ತೆಗಳ ದುರವಸ್ಥೆ. ಬಹುತೇಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಆರಂಭವಾಗಿ ಹಲವು ವರ್ಷಗಳು ಕಳೆದರೂ ಅವುಗಳು ದಡಮುಟ್ಟದೆ ಮಳೆಗಾಲದಲ್ಲಿನ ವಾಹನ ಸವಾರರ ಬವಣೆಗೆ ಪರಿಹಾರ ಸಿಕ್ಕಿಲ್ಲ.
ರಾಷ್ಟ್ರೀಯ ಹೆದ್ದಾರಿ ದುರವಸ್ಥೆಯಿಂದಾಗಿ ಕೆಳ ಪರ್ಕಳ, ಅಂಬಲಪಾಡಿ, ಕರಾವಳಿ ಬೈಪಾಸ್– ಮಲ್ಪೆ ರಸ್ತೆಗಳಲ್ಲಿ ವಾಹನ ಸಂಚಾರವೇ ದುಸ್ತರವಾಗಿದೆ.
ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಭೂಸ್ವಾಧೀನ ಮಾಡಿಕೊಂಡ ಸ್ಥಳಗಳಲ್ಲಿ ಕಟ್ಟಡ, ಜಾಗದ ಮಾಲಕರಿಗೆ ಪರಿಹಾರ ನೀಡುವಲ್ಲಿ ಸಮಸ್ಯೆಯಾಗಿರುವುದು ಕಾಮಗಾರಿ ವಿಳಂಬವಾಗಲು ಕಾರಣ ಎನ್ನುವುದು ಸಂಬಂಧಪಟ್ಟವರ ಉತ್ತರವಾಗಿದೆ.
ರಾಷ್ಟ್ರೀಯ ಹೆದ್ದಾರಿ 169 ಎ ಯು ಕೆಳಪರ್ಕಳದಲ್ಲಿ ತೀರಾ ಹದಗೆಟ್ಟಿದೆ. ಈ ರಸ್ತೆಯಲ್ಲಿ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣವಾಗಿ ದ್ವಿಚಕ್ರ ವಾಹನ ಸವಾರರಿಗೆ ಸಂಚಾರವೇ ಸವಾಲಾಗಿ ಪರಿಣಮಿಸಿದೆ. ಇದರಿಂದಾಗಿ ದಿನನಿತ್ಯ ಮಣಿಪಾಲದ ಆಸ್ಪತ್ರೆಗೆ, ಕಾಲೇಜುಗಳಿಗೆ ಬರುವವರಿಗೆ ತೊಂದರೆಯಾಗುತ್ತಿದೆ ಎಂದು ಜನರು ದೂರಿದ್ದಾರೆ.
ಕೆಳಪರ್ಕಳದಲ್ಲಿ ಹೊಸ ಸಂಪರ್ಕ ರಸ್ತೆಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಹಳೆಯ ರಸ್ತೆಯಲ್ಲೇ ಸಂಚರಿಸುವ ಅನಿವಾರ್ಯತೆ ವಾಹನ ಸವಾರರಿಗಿದೆ. ಹೊಸ ರಸ್ತೆ ನಿರ್ಮಾಣವಾಗುವವರೆಗೆ ವಾಹನಗಳ ಸುಗಮ ಸಂಚಾರಕ್ಕಾಗಿ ಹಳೆ ರಸ್ತೆಯನ್ನು ದುರಸ್ತಿ ಮಾಡಬೇಕಿತ್ತು. ಆದರೆ ಸಂಬಂಧಪಟ್ಟವರು ಅದಕ್ಕೆ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಮಳೆಗಾಲ ಆರಂಭವಾಗುವ ಮೊದಲೇ ಈ ರಸ್ತೆಯನ್ನು ದುರಸ್ತಿ ಮಾಡಿದ್ದರೆ ಇಂತಹ ಸಮಸ್ಯೆ ಉಂಟಾಗುತ್ತಿರಲಿಲ್ಲ. ಈ ರಸ್ತೆಯಲ್ಲಿ ಹಲವಾರು ಅಪಘಾತಗಳು ನಡೆದಿವೆ ಎಂದೂ ಹೇಳುತ್ತಾರೆ.
ಕರಾವಳಿ ಬೈಪಾಸ್‌ನಿಂದ ಮಲ್ಪೆವರೆಗಿನ ರಾಷ್ಟ್ರೀಯ ಹೆದ್ದಾರಿಯ ಸ್ಥಿತಿ ಹೇಳತೀರದಾಗಿದೆ. ರಸ್ತೆಯಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗಿ ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ. ಜೋರು ಮಳೆ ಬಂದಾಗ ರಸ್ತೆ ಹೊಂಡಗಳಲ್ಲಿ ನೀರು ನಿಂತು ರಸ್ತೆ ಯಾವುದು ಹೊಂಡ ಯಾವುದು ಎಂದು ಗೊತ್ತಾಗದೆ ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಗಿದೆ.
ಈ ರಸ್ತೆಯ ವಿಸ್ತರಣೆಗಾಗಿ ಕಟ್ಟಡಗಳ ನೆಲಸಮ ಕಾರ್ಯಾಚರಣೆ ನಡೆದಿದೆ. ಕೆಲವು ಕಟ್ಟಡಗಳ ಮಾಲೀಕರಿಗೆ ಸೂಕ್ತ ಪರಿಹಾರ ಲಭಿಸಿಲ್ಲ ಎಂಬ ಆರೋಪಗಳೂ ಕೇಳಿ ಬಂದಿದ್ದವು. ಬಿಸಿಲಿನ ವಾತಾವರಣ ಇದ್ದಾಗ ರಸ್ತೆಯ ಹೊಂಡ ಮುಚ್ಚುವ ಕೆಲಸಕ್ಕೆ ಸಂಬಂಧಪಟ್ಟವರು ಮುಂದಾಗದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಬಲಪಾಡಿ ಬೈಪಾಸ್‌ನಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಸರ್ವಿಸ್ ರಸ್ತೆಗಳು ತೀರಾ ಹದಗೆಟ್ಟಿದ್ದು, ವಾಹನ ಚಾಲಕರು ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ. ಕಿರಿದಾದ ಸರ್ವಿಸ್ ರಸ್ತೆಗಳಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗಿ ವಾಹನ ದಟ್ಟಣೆಗೂ ಕಾರಣವಾಗುತ್ತಿದೆ. ಭಾರಿ ಮಳೆ ಬಂದರೆ ಈ ಸರ್ವಿಸ್ ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ತೊಡಕುಂಟಾಗುತ್ತಿದೆ.
ನಗರ ವ್ಯಾಪ್ತಿಯ ರಾಷ್ಟ್ರೀಯ ಹೆದ್ಧಾರಿಗಳ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು. ತಾತ್ಕಾಲಿಕವಾಗಿಯಾದರೂ ಹೊಂಡ ಮುಚ್ಚುವ ಕಾಮಗಾರಿ ನಡೆಸಬೇಕು ಎಂದು ಜನರು ಆಗ್ರಹಿಸಿದ್ದಾರೆ.
‘ತಡೆಯಾಜ್ಞೆಯಿಂದ ವಿಳಂಬ’
ಪರ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಕೆಲವರು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿರುವುದರಿಂದ ಒಂದು ವರ್ಷ ವಿಳಂಬವಾಯಿತು. ಬಳಿಕ 11 ಜನರಿಗೆ ಏಕ ಕಾಲದಲ್ಲಿ ಪರಿಹಾರದ ಹಣ ಪಾವತಿ ಮಾಡಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಮತ್ತೆ ಇಬ್ಬರು ನ್ಯಾಯಾಲಯಕ್ಕೆ ಹೋಗಿದ್ದಾರೆ. ನ್ಯಾಯಾಲಯದಲ್ಲಿ ಇತ್ಯರ್ಥವಾದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು. ಇಂದ್ರಾಳಿ ರೈಲ್ವೆ ಮೇಲ್ಸೇತುವೆಯ ಗರ್ಡರ್ ಮೇಲೆ ಶೀಟ್ ಹೊಡೆಯುವ ಕೆಲಸ ಮುಗಿದಿದೆ. ಶೀಘ್ರ ಕಾಂಕ್ರಿಟ್ ಕೆಲಸ ನಡೆಯಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.