ADVERTISEMENT

ಇದು ರಸ್ತೆಯೋ?, ಕೆಸರುಗದ್ದೆಯೋ?

ಬೋಗಿಮರದಿಂದ ಹಿಲಿಯಾಣ ಬ್ರಹ್ಮಬೈದರ್ಕಳ ಗರೋಡಿ ರಸ್ತೆ ಸಂಚಾರವೇ ದುಸ್ತರ

ಸಂದೇಶ್ ಶೆಟ್ಟಿ ಆರ್ಡಿ
Published 30 ಜುಲೈ 2018, 16:30 IST
Last Updated 30 ಜುಲೈ 2018, 16:30 IST
   

ಸಿದ್ದಾಪುರ: ನಡೆದುಕೊಂಡು ಹೋಗುವಾಗ ಮೊಣಕಾಲಿನವರೆಗೆ ಕೆಸರುಮಯವಾಗುವ, ವಾಹನ ಸಂಚಾರವೇ ದುಸ್ತರವಾಗಿರುವ ಈ ರಸ್ತೆಯಲ್ಲಿ ಸಾಗಿದರೆ ಕೆಸರುಗದ್ದೆಯ ಅನುಭವವಾದರೆ ಅಚ್ಚರಿಯಿಲ್ಲ. ಹಿಲಿಯಾಣ ಬೋಗಿಮರದಿಂದ ಬ್ರಹ್ಮಬೈದರ್ಕಳ ಗರೋಡಿಗೆ ತೆರಳುವ ರಸ್ತೆಯಲ್ಲಿ ಸಂಚರಿಸುವ ಜನರ ಗೋಳು ಮಾತ್ರ ಕೇಳುವವರಿಲ್ಲ!

ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ಡಾಂಬರೀಕರಣ ಅಥವಾ ಕಾಂಕ್ರೀಟಿಕರಣಗೊಂಡಿವೆ. ಆದರೆ, ಪೇಟೆ ಹಾಗೂ ಕುಂದಾಪುರ ಶಾಸಕರು, ವಿಧಾನ ಪರಿಷತ್ ಸದಸ್ಯರ ಮನೆಗಳಿಗೆ ಸಮೀಪವಿರುವ ಹಿಲಿಯಾಣದ ಈ ರಸ್ತೆಯಲ್ಲಿ ಸಂಚಾರವೇ ದುಸ್ತರವಾಗಿದೆ. ಜನಪ್ರತಿನಿಧಿಗಳು ಚುನಾವಣೆ ಬಂದಾಗ ರಸ್ತೆ ನಿರ್ಮಿಸುವ ಆಶ್ವಾಸನೆ ನೀಡಿದರೂ ಈ ರಸ್ತೆ ಮಾತ್ರ ಡಾಂಬರೀಕರಣಗೊಂಡಿಲ್ಲ. ಹಣೆಮರನಕೋಡ್ಲು ಸಮೀಪ ಪರಿಶಿಷ್ಟ ಜಾತಿ, ಪಂಗಡದ ಮನೆಗಳಿರುವ ಕಾರಣ ಕೆಲವೇ ಮೀಟರ್ ರಸ್ತೆ ಕಾಂಕ್ರೀಟಿಕರಣಗೊಂಡಿರುವುದು ಹೊರತುಪಡಿಸಿ ಉಳಿದ ಕಡೆ ರಸ್ತೆ ಮಣ್ಣಿನಿಂದ ಆವೃತವಾಗಿದೆ.

ಆವರ್ಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಲಿಯಾಣ ಗ್ರಾಮದ ಬಂಡ್ಸಾಲೆ ಹಾಗೂ ಆಮ್ರಕಲ್ಲು ನಡುವಿನಲ್ಲಿರುವ ಬೋಗಿಮರ ಬಸ್ ನಿಲ್ದಾಣದಿಂದ ಹಿಲಿಯಾಣ ಬ್ರಹ್ಮಬೈದರ್ಕಳ ಗರೋಡಿಗೆ ತೆರಳುವ ಮಾರ್ಗದಲ್ಲಿ ಹೋಗುವುದೇ ಗೋಳು. ನಾಗೇರ‍್ತಿ ದೇವಸ್ಥಾನ, ಹೈಕಾಡಿ, ಹಾಲಾಡಿ, ಕುಂದಾಪುರಕ್ಕೂ ಹಾಗೂ ಗೋಳಿಯಂಗಡಿಗೂ ತೆರಳಲು ಇದು ಹತ್ತಿರದ ಮಾರ್ಗ. ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟು ಕೆಸರುಗದ್ದೆಯಾಗುವುದಲ್ಲದೆ, ನಡೆದುಕೊಂಡು ಹೋಗುವಾಗ ಮೊಣಕಾಲಿನವರೆಗೆ ಕೆಸರು ಹಾರುತ್ತದೆ. ದ್ವಿಚಕ್ರ ಸವಾರರು ಕೆಸರಿನಲ್ಲಿ ಸಂಚರಿಸಲು ಸಾಧ್ಯವಾಗದೆ ಜಾರಿಬಿದ್ದಿರುವ ಉದಾಹರಣೆಗಳು ಸಾಕಷ್ಟಿವೆ.

ADVERTISEMENT

ಹಿಲಿಯಾಣ ದಕ್ಕೇರುಬೆಟ್ಟು, ಚೆದ್ರಾಳಕೋಡ್ಲು, ನಿರಂಚಿನ ಕೋಡ್ಲು, ಏಜು, ಹಣೆಮರನಕೋಡ್ಲು, ಹೊರೊಳ್ಮಕ್ಕಿ, ಹೆಬ್ಬಾಗಿಲು ಮನೆ, ಹಿಲಿಯಾಣ ಬೆಟ್ರಾಳಿ, ನಾಗೇರ‍್ತಿ, ಬ್ರಹ್ಮಬೈದರ್ಕಳ ಗರೋಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ 200ಕ್ಕೂ ಅಧಿಕ ಮನೆಗಳಿವೆ. ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಹಿಲಿಯಾಣ, ಆವರ್ಸೆ, ಗೋಳಿಯಂಗಡಿ, ಹಾಲಾಡಿ, ಬಿದ್ಕಲ್‌ಕಟ್ಟೆ, ಶಂಕರನಾರಾಯಣ, ಮಂದಾರ್ತಿ, ಬಾರ್ಕೂರು, ಬ್ರಹ್ಮಾವರ, ಉಡುಪಿ ಕಾಲೇಜುಗಳಿಗೆ ತೆರಳುತ್ತಿದ್ದಾರೆ. ಕೆಸರುಗದ್ದೆಯಂತಿರುವ ರಸ್ತೆಯಲ್ಲಿ ಕಾಲು ಹುದುಗಿಹೋಗುವ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಪ್ರತಿನಿತ್ಯ ಸಂಚರಿಸುತ್ತಿದ್ದಾರೆ.

ಮಳೆಗಾಲದಲ್ಲಿ ಪ್ರಯಾಸದಾಯಕವಾಗಿ ದ್ವಿಚಕ್ರ ಸವಾರರು ಸಂಚರಿಸುತ್ತಿದ್ದಾರೆ. ಬಾಡಿಗೆ ವಾಹನಗಳು ಈ ರಸ್ತೆಯಲ್ಲಿ ಬರುವುದಕ್ಕೆ ಕೇಳುವುದಿಲ್ಲವಾದ್ದರಿಂದ ಮನೆಬಳಕೆಗೆ ಅಗತ್ಯದ ವಸ್ತು ಕೊಂಡೊಯ್ಯಲು ಸಾಹಸ ಮಾಡಬೇಕಿದೆ. ಗರ್ಭಿಣಿಯರು, ವೃದ್ಧರನ್ನು ಆಸ್ಪತ್ರೆಗೆ ಕೊಂಡೊಯ್ಯಲು ವಾಹನಗಳು ಬಾರದೆ ಸಾಕಷ್ಟು ತೊಂದರೆ ಅನುಭವಿಸಿದ ಘಟನೆ ದಿನನಿತ್ಯ ನಡೆಯುತ್ತಿದೆ. ಹಗಲಿನಲ್ಲಿ ಕೆಲವು ವಾಹನ ಚಾಲಕರು ಸಾಹಸ ಮಾಡಿ ಸಂಚಾರ ಮಾಡಿದರೆ, ರಾತ್ರಿ ಸಮಯದಲ್ಲಿ ಯಾವುದೇ ಬಾಡಿಗೆ ವಾಹನಗಳು ಬರುವ ಸ್ಥಿತಿಯಲ್ಲಿಲ್ಲ. ಕೆಸರು ಹೊಂಡದಲ್ಲಿ ವಾಹನದ ಚಕ್ರ ಸಿಲುಕಿಕೊಂಡರೆ ಬಿಡಿಸಿಕೊಂಡು ಹೋಗುವುದೇ ಕಷ್ಟ ಎನ್ನುವ ನೆಲೆಯಲ್ಲಿ ಯಾರು ಕೂಡ ಈ ರಸ್ತೆಯಲ್ಲಿ ಸಂಚರಿಸಲು ಮನಸು ಮಾಡುತ್ತಿಲ್ಲ ಎನ್ನುವುದು ದಕ್ಕೇರುಬೆಟ್ಟು ನಿವಾಸಿ ಕರುಣಾಕರ ಶೆಟ್ಟಿ ಅವರ ಅಳಲು. ‌

ರಸ್ತೆ ದುರವಸ್ತೆ ಕುರಿತು ಆವರ್ಸೆ ಗ್ರಾಮ ಪಂಚಾಯಿತಿ ಗಮನಕ್ಕೆ ತಂದಾಗ ಮೂರ‍್ನಾಲ್ಕು ವರ್ಷಗಳ ಹಿಂದೆ ಜೆಲ್ಲಿ ಹಾಕಿ ತಾತ್ಕಾಲಿಕ ರಸ್ತೆ ಸರಿಪಡಿಸಿದ್ದರು. ಈಚೆಗೆ ಹದಗೆಟ್ಟಿರುವ ರಸ್ತೆ ದುರಸ್ತಿಗೆ ಮನವಿ ಮಾಡಿದಾಗ ರಸ್ತೆ ಅಭಿವೃದ್ಧಿಗೊಳಿಸಲು ನಮ್ಮಲ್ಲಿ ಸಾಕಷ್ಟು ಅನುದಾನವಿಲ್ಲ. ಅನುದಾನದ ಕೊರತೆಯಿಂದ ಯಾವುದೇ ರಸ್ತೆ ರಿಪೇರಿ ಮಾಡುತ್ತಿಲ್ಲ ಎನ್ನುವುದನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದರು. ಚುನಾವಣೆ ಸಮಯದಲ್ಲಿ ಜನಪ್ರತಿನಿಧಿಗಳು ರಸ್ತೆ ಸರಿಪಡಿಸುವ ಭರವಸೆ ನೀಡಿದ್ದಾರೆಯೇ ಹೊರತು ಇದುವರೆಗೆ ರಸ್ತೆ ದುರಸ್ತಿ ಕಂಡಿಲ್ಲ ಎನ್ನುವುದು ರಸ್ತೆಗಾಗಿ ಹೋರಾಟ ನಡೆಸುತ್ತಿರುವ ಕೋಟಿ ಚೆನ್ನಯ್ಯ ಫ್ರೆಂಡ್ಸ್‌ನ ಸದಸ್ಯರು ನೋವಿನಿಂದ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.