ಹೆಬ್ರಿ: ತಾಲ್ಲೂಕಿನ ಪ್ರಮುಖ ರಸ್ತೆಗಳಲ್ಲಿ ಹೊಂಡ– ಗುಂಡಿಗಳು ತುಂಬಿದ್ದು, ಶೀಘ್ರ ದುರಸ್ತಿಗೊಳಿಸಲು ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಕುಚ್ಚೂರು ಶ್ರೀಕಾಂತ್ ಪೂಜಾರಿ ನೇತೃತ್ವದಲ್ಲಿ ಸಾರ್ವಜನಿಕರಿಂದ ಶುಕ್ರವಾರ ಮೂರುರಸ್ತೆ ಸರ್ಕಲಿನಲ್ಲಿ ಪ್ರತಿಭಟನೆ ನಡೆಯಿತು.
ಶ್ರೀಕಾಂತ್ ಪೂಜಾರಿ ಕುಚ್ಚೂರು ಮಾತನಾಡಿ, ಹೆಬ್ರಿಯ ಎಲ್ಲಾ ಪ್ರಮುಖ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಹೊಂಡ ಗುಂಡಿಗಳಿಂದ ಕೂಡಿವೆ. ಹೊಂಡ ಮುಚ್ಚಲು ಹಾಕಿರುವ ಜಲ್ಲಿಪುಡಿಯ ದೂಳಿನಿಂದಾಗಿ ವಾಹನ ಚಾಲಕರಿಗೆ, ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ವಾಹನ ಸವಾರರು ಹೊಂಡ ಗುಂಡಿಗಳಿಗೆ ಬಿದ್ದು ಎದ್ದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಡೆ ಹೊಂಡಗಳಿಗೆ ಜಲ್ಲಿಕಲ್ಲು ಹಾಕಿದ್ದು, ಜಲ್ಲಿ ಕಲ್ಲುಗಳು ಜಾರುವುದರಿಂದ ದ್ವಿಚಕ್ರ ವಾಹನ ಸವಾರರು ಸಂಚರಿಸಲು, ಸಾರ್ವಜನಿಕರು, ವಿದ್ಯಾರ್ಥಿಗಳು ನಡೆದುಕೊಂಡು ಹೋಗಲು ಭಯ ಪಡಬೇಕಾಗುತ್ತದೆ ಎಂದು ಹೇಳಿದರು.
ತಹಶೀಲ್ದಾರ್ ಪ್ರಸಾದ್ ಎಸ್.ಎ. ಮನವಿ ಸ್ವೀಕರಿಸಿ ಮಾತನಾಡಿ, ಸಂಬಂಧಪಟ್ಟ ಅಧಿಕಾರಗಳ ಗಮನಕ್ಕೆ ತಂದು ವಾರದೊಳಗೆ ರಸ್ತೆ ಸರಿಪಡಿಸುವ ಭರವಸೆ ನೀಡಿದರು.
ಹೋರಾಟಗಾರ ಕೆರೆಬೆಟ್ಟು ಸಂಜೀವ ಶೆಟ್ಟಿ, ಸುರೇಂದ್ರ ಚಾರ, ಸುಧಾಕರ್ ಸಾಲಿಯಾನ್, ಹೆರಿಯಣ್ಣ, ಆಟೊರಿಕ್ಷಾ ಚಾಲಕರು, ಮಾಲೀಕರು, ಸಾರ್ವಜನಿಕರು ಭಾಗವಹಿಸಿದ್ದರು.
ರಸ್ತೆಯ ಗುಂಡಿಗಳನ್ನು ಮುಚ್ಚಲು ಟೆಂಡರ್ ಕರೆಯಲಾಗಿದೆ. ದೀಪಾವಳಿ ಹೊತ್ತಿಗೆ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯಲಿದೆ. ಸಾರ್ವಜನಿಕರು ಸಹಕಾರ ನೀಡಬೇಕು-ಕಿರಣ್, ಕಾರ್ಯಪಾಲಕ ಎಂಜಿನಿಯರ್ ಪಿಡಬ್ಲ್ಯುಡಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.