ADVERTISEMENT

ಪಿಡಿಒಯಿಂದ ರಾಷ್ಟ್ರಪತಿವರೆಗೂ ಆರ್‌ಎಸ್‌ಎಸ್‌ನವರು ಇದ್ದಾರೆ: ಸಚಿವ ಸುನಿಲ್ ಕುಮಾರ್

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 10:46 IST
Last Updated 6 ಅಕ್ಟೋಬರ್ 2021, 10:46 IST
ಮಣಿಪಾಲ ಬಳಿಯ ಸ್ವರ್ಣಾ ನದಿಗೆ ಬಾಗಿನ ಅರ್ಪಿಸಿದ ಸಚಿವ ವಿ.ಸುನಿಲ್ ಕುಮಾರ್
ಮಣಿಪಾಲ ಬಳಿಯ ಸ್ವರ್ಣಾ ನದಿಗೆ ಬಾಗಿನ ಅರ್ಪಿಸಿದ ಸಚಿವ ವಿ.ಸುನಿಲ್ ಕುಮಾರ್   

ಉಡುಪಿ: ಐಎಎಸ್, ಐಪಿಎಸ್ ಅಧಿಕಾರಿಗಳು ಮಾತ್ರವಲ್ಲ, ಪಿಡಿಒಗಳಿಂದ ಹಿಡಿದು ರಾಷ್ಟ್ರಪತಿಯವರೆಗೂ ಆರ್‌ಎಸ್‌ಎಸ್‌ನವರು ಇದ್ದಾರೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಬುಧವಾರ ಮಣಿಪಾಲದ ಸಿದ್ಧಿ ವಿನಾಯಕ ದೇವಾಸ್ಥಾನದ ಬಳಿ ಸ್ವರ್ಣಾ ನದಿಗೆ ಬಾಗಿನ ಅರ್ಪಿಸಿ ಮಾತನಾಡಿದ ಸಚಿವರು, ಆರ್‌ಎಸ್‌ಎಸ್‌ ಹಿನ್ನೆಲೆಯ ನಾಲ್ಕು ಸಾವಿರ ಐಎಎಸ್‌, ಐಪಿಎಸ್ ಅಧಿಕಾರಿಗಳು ಇದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈಚೆಗೆ ಹೇಳಿದ್ದಾರೆ. ಅವರಿಗೆ ಮಾಹಿತಿ ಕೊರತೆ ಇದ್ದು, ನಾಲ್ಕು ಸಾವಿರಕ್ಕೂ ಹೆಚ್ಚು ಅಧಿಕಾರಿಗಳಿದ್ದಾರೆ. ಅವರೆಲ್ಲರೂ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ತಿರುಗೇಟು ನೀಡಿದರು.

'ಅಪ್ಪ ಮಕ್ಕಳು' ಬೇರೆ ಬೇರೆ ಸಂದರ್ಭಗಳಲ್ಲಿ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡಿದ್ದಾರೆ. ಖುಷಿ ಬಂದಂತೆ ಬಳಕೆ ಮಾಡಿಕೊಳ್ಳುವ ಸಂಸ್ಥೆ ಆರ್‌ಎಸ್‌ಎಸ್ ಅಲ್ಲ. ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರಕಟ್ಟುತ್ತಿರುವ ದೇಶದ ಏಕೈಕ ಸಂಸ್ಥೆ ಆರ್‌ಎಸ್‌ಎಸ್‌ ಎಂದು ಸಚಿವರು ಹೇಳಿದರು.

ADVERTISEMENT

ದತ್ತಪೀಠ ವಿಚಾರದಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗದಂತೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ. ನ್ಯಾಯಾಲಯದ ತೀರ್ಪಿನ ಅನುಷ್ಠಾನ ಕುರಿತು ಕಾನೂನು, ಕಂದಾಯ ಹಾಗೂ ಮುಜರಾಯಿ ಸಚಿವರನ್ನೊಳಗೊಂಡ ಸಮಿತಿ ರಚನೆ ಮಾಡಲಾಗುವುದು ಎಂದರು.

ನವರಾತ್ರಿ ಉತ್ಸವವನ್ನು ಭಕ್ತಿ ಪ್ರದಾನವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಜಂಬೂಸವಾರಿಯಲ್ಲಿ 500 ಮಂದಿ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದರು.

ರಾಜ್ಯದಲ್ಲಿ ಐದು ರಂಗಾಯಣಗಳಿದ್ದು, ಯಕ್ಷಗಾನ, ನಾಟಕ ಹಾಗೂ ನೃತ್ಯವನ್ನೊಳಗೊಂಡ 6ನೇ ಯಕ್ಷ ರಂಗಾಯಣ ಕಾರ್ಕಳದಲ್ಲಿ ಸ್ಥಾಪಿಸಲಾಗುವುದು. ಕೋಟಿ ಚೆನ್ನಯ್ಯ ಥೀಂ ಪಾರ್ಕ್‌ನ ಆವರಣದಲ್ಲಿ 2 ಎಕರೆಯಲ್ಲಿ ರಂಗಾಯಣ ಸ್ಥಾಪನೆಯಾಗಲಿದ್ದು, ಯಕ್ಷಗಾನ, ನಾಟಕ, ಸಂಗೀತ ಹಾಗೂ ನೃತ್ಯ ತರಬೇತಿ ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.