ADVERTISEMENT

ದ್ವೇಷ ಮರೆಸಿ ಪ್ರೀತಿ ಹಂಚಲು ಸದ್ಭಾವನಾ ದಿನ ಅ1, 2ರಂದು

ಉಡುಪಿ, ಕಾರ್ಕಳ, ಕುಂದಾಪುರ, ಕಾಪು, ಬ್ರಹ್ಮಾವರದಲ್ಲಿ ಪಾದಯಾತ್ರೆ, ಸಾರ್ವಜನಿಕ ಸಭೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 12:40 IST
Last Updated 30 ಸೆಪ್ಟೆಂಬರ್ 2022, 12:40 IST
ಅ.2ರಂದು ಉಡುಪಿಯಲ್ಲಿ ಸದ್ಭಾವನಾ ದಿನ ಆಚರಿಸಲಾಗುತ್ತಿದೆ ಎಂದು ಮುಖಂಡ ಪ್ರಶಾಂತ್ ಜತ್ತನ್ನ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅ.2ರಂದು ಉಡುಪಿಯಲ್ಲಿ ಸದ್ಭಾವನಾ ದಿನ ಆಚರಿಸಲಾಗುತ್ತಿದೆ ಎಂದು ಮುಖಂಡ ಪ್ರಶಾಂತ್ ಜತ್ತನ್ನ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.   

ಉಡುಪಿ: ದ್ವೇಷದ ಮನಸ್ಸುಗಳನ್ನು ಪ್ರೀತಿಯೆಡೆಗೆ ನಡೆಸುವ ಉದ್ದೇಶದಿಂದ ಅ.2ರಂದು ಉಡುಪಿಯಲ್ಲಿ ಸದ್ಭಾವನಾ ದಿನ ಆಚರಿಸಲಾಗುತ್ತಿದೆ ಎಂದು ಮುಖಂಡ ಪ್ರಶಾಂತ್ ಜತ್ತನ್ನ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸಬ್‌ ಕೋ ಸನ್ನತಿ ದೇ ಭಗವಾನ್’ ಆಶಯದಡಿ ಸಹಬಾಳ್ವೆ ಸಂಘಟನೆಯಿಂದ ರಾಜ್ಯದಾದ್ಯಂತ ಸದ್ಭಾವನಾ ದಿನ ಆಚರಿಸಲಾಗುತ್ತಿದೆ. ಉಡುಪಿಯಲ್ಲಿ ಬೆಳಿಗ್ಗೆ 10 ಗಂಟೆಗೆ ನಗರದ ಬನ್ನಂಜೆ ನಾರಾಯಣ ಗುರು ಸಭಾಭವನದಿಂದ ಸದ್ಭಾವನಾ ಪಾದಯಾತ್ರೆಗೆ ಚಾಲನೆ ಸಿಗಲಿದ್ದು ಜಮ್ಮಾ ಮಸೀದಿ, ಮದರ್ ಆಫ್ ಸಾರೋಸ್ ಚರ್ಚ್‌ ಮೂಲಕ ಅಜ್ಜರಕಾಡಿನ ಗಾಂಧಿ ಉದ್ಯಾನವನದಲ್ಲಿ ಸಮಾಪನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಸಮುದಾಯಗಳನ್ನು ಎತ್ತಿಕಟ್ಟುವ ಕಾರ್ಯ ನಡೆಯುತ್ತಿದ್ದು, ಜನರ ಮಧ್ಯೆ ಅನುಮಾನದ ವಿಷಬೀಜ ಬಿತ್ತಲಾಗುತ್ತಿದೆ. ಎಲ್ಲೆಡೆ ಹಿಂಸೆ ಹೆಚ್ಚಾಗುತ್ತಿದೆ. ದ್ವೇಷವು ನಾಶಕ್ಕೆ ಕಾರಣವಾದರೆ, ಶಾಂತಿ ಪ್ರೀತಿ ಮಾತ್ರ ಸಮಾಜವನ್ನು ಪೊರೆಯುತ್ತದೆ ಎಂಬ ವಿವೇಕವನ್ನು ಜನರಲ್ಲಿ ಎಚ್ಚರಿಸಲು ಸದ್ಭಾವನಾ ದಿನ ಆಚರಿಸಲಾಗುತ್ತಿದೆ.

ADVERTISEMENT

ಕಾಪು ಬಸ್ ನಿಲ್ದಾಣದಲ್ಲಿ ಅ.1ರಂದು ಸಂಜೆ 4ಕ್ಕೆ ಸದ್ಭಾವನಾ ಪಾದಯಾತ್ರೆ ಹಾಗೂ ಸಾರ್ವಜನಿಕ ಸಭೆ ನಡೆಯಲಿದೆ. ಅ.2ರಂದು ಬೆಳಿಗ್ಗೆ 10ಕ್ಕೆ ಕಾರ್ಕಳದ ಗಾಂಧಿ ಮೈದಾನದಲ್ಲಿ, ಬ್ರಹ್ಮಾವರ ಬಸ್‌ ನಿಲ್ದಾಣದ ಬಳಿ, ಸಂಜೆ 6.30ಕ್ಕೆ ಕುಂದಾಪುರದ ಶಾಸ್ತ್ರಿ ವೃತ್ತದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಇಬ್ರಾಹಿಂ ಕೋಟ, ಸುಂದರ್ ಮಾಸ್ತರ್, ಯಾಸಿನ್ ಮಲ್ಪೆ, ಮೇರಿ ಡಿಸೋಜಾ, ಅಜೀಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.