ಉಡುಪಿ: ‘ಎಕೆಎಂಎಸ್ ಬಸ್ ಮಾಲೀಕ ಸೈಫುದ್ದೀನ್ ಕೊಲೆ ಪ್ರಕರಣದಲ್ಲಿ ಆರೋಪಿಗಳು ಮಹಿಳೆಯನ್ನು ಬಳಸಿ ಹತ್ಯೆಗೆ ಸಂಚು ರೂಪಿಸಿದ್ದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಆರೋಪಿ ಫೈಸಲ್ ಖಾನ್ ತನ್ನ ಪತ್ನಿ ರಿಧಾ ಶಭನಾ ಮಲ್ಪೆಯ ಕೊಡವೂರಿನ ಮನೆಯಲ್ಲಿದ್ದಾಳೆ ಎಂದು ಸೈಫುದ್ದೀನ್‌ಗೆ ತಿಳಿಸಿ ಆತನನ್ನು ಅಲ್ಲಿಗೆ ಕರೆದೊಕೊಂಡು ಹೋಗಿದ್ದಾನೆ. ಅಲ್ಲಿದ್ದ ಇತರ ಇಬ್ಬರು ಆರೋಪಿಗಳೊಂದಿಗೆ ಸೇರಿ ಕೊಲೆ ಮಾಡಿದ್ದಾನೆ’ ಎಂದು ವಿವರಿಸಿದ್ದಾರೆ.
‘ಪ್ರಕರಣದ ಮೂವರು ಆರೋಪಿಗಳಿಗೆ ಸೈಫುದ್ದೀನ್ ಜೊತೆ ವೈಯಕ್ತಿಕ ದ್ವೇಷವಿದ್ದರೂ ಇದು ಹಣಕಾಸಿನ ವಿಷಯಕ್ಕೆ ನಡೆದ ಕೊಲೆ ಎಂಬುದು ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದು ಬಂದಿದೆ. ಬೇರೆ ಯಾರೋ ಈ ಮೂವರಿಂದ ಕೊಲೆ ಮಾಡಿಸಿರುವ ಸಾಧ್ಯತೆ ಇದ್ದು ಈ ಕುರಿತು ತನಿಖೆ ನಡೆಯುತ್ತಿದೆ’ ಎಂದು ಹೇಳಿದ್ದಾರೆ.
‘ನನ್ನ ಹೆಂಡತಿಗೆ ಸೈಫುದ್ದೀನ್ ಕಿರುಕುಳ ನೀಡುತ್ತಿದ್ದ ಎಂದು ಆರಂಭದಲ್ಲಿ ಆರೋಪಿ ಫೈಸಲ್ ಖಾನ್ ತಿಳಿಸಿದ್ದ. ಆ ಕುರಿತು ತನಿಖೆ ನಡೆಸಿದಾಗ ಫೈಸಲ್ ಹೆಂಡತಿ ರಿಧಾ ಹಾಗೂ ಸೈಫುದ್ದೀನ್ ನಡುವೆ ಒಂದು ವರ್ಷದಿಂದ ಫೋನ್ ಸಂಭಾಷಣೆ ನಡೆಯುತ್ತಿದ್ದು, ಈ ಇಬ್ಬರ ನಡುವೆ ಸಲುಗೆ ಇದ್ದುದಾಗಿಯೂ ತಿಳಿದು ಬಂದಿದೆ’ ಎಂದಿದ್ದಾರೆ.
ಫೈಸಲ್ ಖಾನ್ ಹೆಂಡತಿ ರಿಧಾ ಶಭನಾನನ್ನೂ ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
‘ಮನೆ ಜಪ್ತಿಗೆ ಕ್ರಮ’
ಕಾರ್ಕಳದ ಅಜೆಕಾರು ಪೊಲೀಸ್ ಠಾಣೆ ವ್ಯಾಪ್ತಿಯ ಶಿರ್ಲಾಲು ಗ್ರಾಮದ ಜಯಶ್ರೀ ಎಂಬುವರ ಮನೆಯ ದನದ ಕೊಟ್ಟಿಗೆಗೆ ತಲವಾರುಗಳೊಂದಿಗೆ ನುಗ್ಗಿ ದನ ಕಳವು ಮಾಡಿದ ಪ್ರಕರಣದಲ್ಲಿ ದನಗಳನ್ನು ಹತ್ಯೆ ಮಾಡಿದ್ದ ಮೂಡುಬಿದ್ರೆಯ ಮನೆಯೊಂದನ್ನು ಜಪ್ತಿ ಮಾಡುವ ಪ್ರಕ್ರಿಯೆ ನಡೆದಿದೆ ಎಂದು ಹರಿರಾಮ್ ಶಂಕರ್ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕಾರ್ಕಳ ನಲ್ಲೂರು ಗ್ರಾಮದ ಮೊಹಮ್ಮದ್ ಯೂನಿಸ್ (31) ಮೂಡುಬಿದಿರೆಯ ಕಲ್ಲಬೆಟ್ಟು ಗ್ರಾಮದ ಮೊಹಮ್ಮದ್ ನಾಸೀರ್ (28) ಪುತ್ತಿಗೆ ಗ್ರಾಮದ ಮೊಹಮ್ಮದ್ ಇಕ್ಬಾಲ್ (29) ಎಂಬುವವರನ್ನು ಬಂಧಿಸಿದ್ದು ಅವರ ವಿರುದ್ಧ ಉಡುಪಿ ದಕ್ಷಿಣ ಕನ್ನಡ ಚಿಕ್ಕಮಗಳೂರು ಜಿಲ್ಲೆಗಳಲ್ಲೂ ವಿವಿಧ ಪ್ರಕರಣಗಳು ದಾಖಲಾಗಿದ್ದವು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.