ADVERTISEMENT

ಹಾರಾಡಿ, ಮಟಪಾಡಿ ಯಕ್ಷಗಾನ ಪ್ರಾತ್ಯಕ್ಷಿಕೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 6:24 IST
Last Updated 26 ಜುಲೈ 2025, 6:24 IST
ಸಾಲಿಗ್ರಾಮ ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಅವರನ್ನು ಗೌರವಿಸಲಾಯಿತು
ಸಾಲಿಗ್ರಾಮ ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಅವರನ್ನು ಗೌರವಿಸಲಾಯಿತು   

ಕೋಟ (ಬ್ರಹ್ಮಾವರ): ಬೆಂಗಳೂರಿನ ನಾಗರಬಾವಿಯ ಶ್ರೀಗಂಧ ಕಾವಲು ವೇಣುಗೋಪಾಲಕೃಷ್ಣ ಸಮುದಾಯ ಭವನದಲ್ಲಿ ರಂಗಸ್ಥಳ ಯಕ್ಷಮಿತ್ರ ಕೂಟದ ರಜತ ಪರ್ವ 2025ರ ಅಂಗವಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದಲ್ಲಿ, ಸುವರ್ಣ ಸಂಭ್ರಮ ಆಚರಿಸುತ್ತಿರುವ ಕೋಟದ ಸಾಲಿಗ್ರಾಮ ಮಕ್ಕಳ ಮೇಳದ ಸರಣಿ ಕಾರ್ಯಕ್ರಮವಾಗಿ ಹಾರಾಡಿ ಮತ್ತು ಮಟಪಾಡಿ ಯಕ್ಷಗಾನ ಶೈಲಿಗಳ ಪ್ರಾತ್ಯಕ್ಷಿಕೆ ನಡೆಯಿತು.

ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆ ನಿರ್ದೇಶನದಲ್ಲಿ ಸುಜಯೀಂದ್ರ ಹಂದೆ ಮತ್ತು ಬಳಗ ಹಾರಾಡಿ ತಿಟ್ಟಿನ ಗತ್ತುಗಾರಿಕೆಯ ಹೆಜ್ಜೆ, ಮಟಪಾಡಿ ಶೈಲಿಯ ಲಾಲಿತ್ಯಪೂರ್ಣ ಕುಣಿತಗಳನ್ನು ಅಭಿನಯಿಸಿ ತೋರಿಸಿದರು. ಹಾರಾಡಿ ರಾಮ ಗಾಣಿಗ, ಕುಷ್ಟ (ಕೃಷ್ಣ) ಗಾಣಿಗ, ಹಾರಾಡಿ ನಾರಾಯಣ ಗಾಣಿಗ, ಮಟಪಾಡಿ ವೀರಭದ್ರ ನಾಯಕ್ ಮೊದಲಾದ ಹಿರಿಯ ಕಲಾವಿದರ ನೆನಪು ಮೂಡಿಸುವಂತೆ ಒಡ್ಡೋಲಗ, ಯುದ್ಧ ಕುಣಿತ, ಹಸ್ತಾಭಿನಯ, ವಿವಿಧ ಪ್ರಸಂಗಗಳ ಪದ್ಯ ಪ್ರಸ್ತುತಿಯೊಂದಿಗೆ ಹಾರಾಡಿ ಮತ್ತು ಮಟಪಾಡಿ ಶೈಲಿಗಳ ನೃತ್ಯ, ನಾಟ್ಯಗಳ ಭಿನ್ನತೆ, ಸಾಮ್ಯತೆ, ವೈಶಿಷ್ಟ್ಯವನ್ನು ಪ್ರದರ್ಶಿಸಲಾಯಿತು.

ಹಿಮ್ಮೇಳದಲ್ಲಿ ಮಕ್ಕಳ ಮೇಳದ ಹಿರಿಯ ಕಲಾವಿದರಾದ ಸ್ಕಂದ ಉರಾಳ, ಸುದೀಪ ಉರಾಳ, ಮುಮ್ಮೇಳದಲ್ಲಿ ನವೀನ್ ಮಣೂರು, ಮನೋಜ್ ಭಟ್, ಪ್ರದೀಪ ಮಧ್ಯಸ್ಥ ಭಾಗವಹಿಸಿದ್ದರು. ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಅವರನ್ನು ಗೌರವಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿದ್ದ ಭಾಗವತ, ಲೇಖಕ ಡಾ.ಸುರೇಂದ್ರ ಪಣಿಯೂರು, ಯಕ್ಷ ವಿಮರ್ಶಕ ಎಸ್.ವಿ. ಉದಯ ಕುಮಾರ ಶೆಟ್ಟಿ ಅವರು ಹಾರಾಡಿ, ಮಟಪಾಡಿ ತಿಟ್ಟು ಕುರಿತ ಪ್ರಬಂಧ ಮಂಡಿಸಿದರು. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ADVERTISEMENT

ಮದ್ದಳೆ ವಾದಕ ಬಿರ್ತಿ ಬಾಲಕೃಷ್ಣ ಗಾಣಿಗ, ಸಹಕಾರ ಸಂಘಗಳ ಉಪ ನಿಬಂಧಕ ಎಂ.ಪಿ. ಮಂಜುನಾಥ, ಕರಾವಳಿಗರ ಒಕ್ಕೂಟದ ಗೌರವಾಧ್ಯಕ್ಷ ಡಾ.ಸುರೇಶ ಜಿ.ಕೆ, ರಂಗಸ್ಥಳದ ಅಧ್ಯಕ್ಷ ಆರ್.ಕೆ.ನಾಗೂರು, ಅಖಿಲ ಕರ್ನಾಟಕ ಗಾಣಿಗರ ಸಂಘದ ಅಧ್ಯಕ್ಷ ರಾಜಶೇಖರ ಗಾಣಿಗ, ರಂಗಸ್ಥಳದ ಪ್ರಧಾನ ಕಾರ್ಯದರ್ಶಿ ಕೆ.ಎಂ.ನಾಗೂರು, ಕೆ.ಎಂ. ಶೇಖರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.