ADVERTISEMENT

ದರ ಕುಸಿತಕ್ಕೆ ಬಾಡಿದ ಶಂಕರಪುರ ಮಲ್ಲಿಗೆ

ವರ್ಷದ ಕನಿಷ್ಠ ದರಕ್ಕೆ ಇಳಿಕೆ: ಬೆಳೆಗಾರರ ಮೊಗದಲ್ಲಿಲ್ಲ ಸಂತಸ

ಬಾಲಚಂದ್ರ ಎಚ್.
Published 19 ಜೂನ್ 2019, 19:45 IST
Last Updated 19 ಜೂನ್ 2019, 19:45 IST
ಶಂಕರಪುರ ಮಲ್ಲಿಗೆ
ಶಂಕರಪುರ ಮಲ್ಲಿಗೆ   

ಉಡುಪಿ: ಕರಾವಳಿಯ ಪ್ರಸಿದ್ಧ ಶಂಕರಪುರ ಮಲ್ಲಿಗೆಯ ದರ ಪಾತಾಳಕ್ಕೆ ಕುಸಿದಿದೆ. ಜನವರಿಯಲ್ಲಿ ಗರಿಷ್ಠ ₹ 1,250 ಇದ್ದ ದರ ಈಗ ₹ 100ರ ಗಡಿ ತಲುಪಿದೆ. ಮಲ್ಲಿಗೆ ಬೆಳೆದ ಬೆಳೆಗಾರನ ಮುಖ ಬಾಡಿದ್ದರೆ, ಗ್ರಾಹಕರ ಮುಖ ಅರಳಿದೆ.

ಬುಧವಾರದ ಮಾರುಕಟ್ಟೆಯಲ್ಲಿ ಶಂಕರಪುರ ಮಲ್ಲಿಗೆಯ ದರ ಅಟ್ಟೆಗೆ (4 ಚಂಡೆ) ₹ 110 ದಾಖಲಾಯಿತು. ಮಂಗಳವಾರದ ದರ ಅಟ್ಟೆಗೆ ₹ 90 ಇತ್ತು. ಇದು ಈ ವರ್ಷದ ಕನಿಷ್ಠ ದರ.

ದರ ಕುಸಿತಕ್ಕೆ ಕಾರಣ:

ADVERTISEMENT

ಬೇಡಿಕೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಶಂಕರಪುರ ಮಲ್ಲಿಗೆ ಮಾರುಕಟ್ಟೆಗೆ ಪೂರೈಕೆಯಾಗುತ್ತಿರುವುದು ದರ ಕುಸಿತಕ್ಕೆ ಪ್ರಮುಖ ಕಾರಣ. ಜತೆಗೆ, ಹಬ್ಬ, ಜಾತ್ರೆಗಳು ಇಲ್ಲವಾಗಿರುವುದರಿಂದ ಮಲ್ಲಿಗೆಗೆ ಬೇಡಿಕೆ ಕುಸಿದಿದೆ ಎನ್ನುತ್ತಾರೆ ಸರ್ವೀಸ್‌ ಬಸ್‌ ನಿಲ್ದಾಣದ ಬಳಿಯ ಆದಿಶಕ್ತಿ ಫ್ಲವರ್ ಶಾಪ್‌ನ ಅಶ್ರಫ್‌.

ಬಂಪರ್ ಇಳುವರಿ:

ಶಂಕರಪುರ ಮಲ್ಲಿಗೆಯ ದರ ಮಾರುಕಟ್ಟೆಯ ಬೇಡಿಕೆ ಹಾಗೂ ಹವಾಮಾನದ ಮೇಲೆ ನಿರ್ಧಾರವಾಗುತ್ತದೆ. ಪ್ರಸ್ತುತ ಬಿಸಿಲು ಹಾಗೂ ಮಳೆ ಒಟ್ಟಾಗಿ ಬೀಳುತ್ತಿದ್ದು, ಗಿಡಗಳಲ್ಲಿ ಇಳುವರಿ ಹೆಚ್ಚಾಗಿ ಮಾರುಕಟ್ಟೆಗೆ ಪೂರೈಕೆ ಜಾಸ್ತಿಯಾಗಿದೆ. ಪರಿಣಾಮ ಬೆಲೆ ಕುಸಿದಿದೆ ಎನ್ನುತ್ತಾರೆ ಶಿರ್ವದ ಮಲ್ಲಿಗೆ ಬೆಳೆಗಾರ ರಾಘವೇಂದ್ರ ನಾಯಕ್‌.

ಕೃಷಿ ಕ್ಷೇತ್ರ ವಿಸ್ತರಣೆ:

ಶಂಕರಪುರ, ಶಿರ್ವ, ಬೆಳ್ಮಣ್ಣು ಭಾಗಕ್ಕೆ ಸೀಮಿತವಾಗಿದ್ದ ಶಂಕರಪುರ ಮಲ್ಲಿಗೆಯ ಕೃಷಿ ಕ್ಷೇತ್ರ ವಿಸ್ತಾರವಾಗುತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿ ಹೆಬ್ರಿ, ಕಾರ್ಕಳದವರೆಗೂ ಮಲ್ಲಿಗೆ ಕೃಷಿ ಮಾಡಲಾಗುತ್ತಿದೆ. ಇದು ಕೂಡ ಬೆಲೆ ಇಳಿಕೆಗೆ ಕಾರಣ ಎನ್ನುತ್ತಾರೆ ರೈತರು.

ರಫ್ತು ಇಳಿಮುಖ:

ಕರಾವಳಿಯ ಸಾವಿರಾರು ಮಂದಿ ಉದ್ಯೋಗ ನಿಮಿತ್ತ ಮುಂಬೈ, ದುಬೈನಲ್ಲಿ ನೆಲೆಸಿದ್ದಾರೆ. ಅವರೆಲ್ಲ ನೆಲದ ಸಂಸ್ಕೃತಿ ಮರೆತಿಲ್ಲ. ಹಾಗಾಗಿ,ಉಡುಪಿ ಮಲ್ಲಿಗೆಯ ಮಾರುಕಟ್ಟೆ ರಾಜ್ಯದ ಗಡಿದಾಟಿ ವಿದೇಶಗಳಿಗೂ ವ್ಯಾಪಿಸಿದೆ. ಇಲ್ಲಿಂದ ಮುಂಬೈ ಹಾಗೂ ದುಬೈಗೆ ನೂರಾರು ಅಟ್ಟೆ ಶಂಕರಪುರ ಮಲ್ಲಿಗೆ ರಫ್ತಾಗುತ್ತದೆ. ಈಗ ಶುಭ ಸಮಾರಂಭಗಳಿಲ್ಲದ ಕಾರಣ ರಫ್ತು ಕುಸಿದಿದ್ದು, ಬೆಲೆಯೂ ಇಳಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿ ಅಶ್ರಫ್‌.

ಬೆಲೆ ಏರಿಕೆ ನಿರೀಕ್ಷೆ:

ಕರಾವಳಿಯಲ್ಲಿ ಮುಂಗಾರು ಚುರುಕಾಗಿ ಎಡೆಬಿಡದೆ ಮಳೆ ಸುರಿದರೆ ಹೂ ಇಳುವರಿ ಕುಸಿದು, ಬೆಲೆ ಏರಿಕೆಯಾಗಲಿದೆ. ದೇವಸ್ಥಾನಗಳಲ್ಲಿ ರಥೋತ್ಸವ, ಜಾತ್ರೆ, ಶುಭ ಸಮಾರಂಭಗಳು ಹೆಚ್ಚಾದರೆ ದರ ಗಗನಕ್ಕೇರಲಿದೆ ಎಂದು ಅಶ್ರಫ್‌ ಮಾಹಿತಿ ನೀಡಿದರು.

ಮಳೆ ಬಿದ್ದರೆ ದರ ಕುಸಿತ

ನವೆಂಬರ್‌ನಿಂದ ಮಾರ್ಚ್‌ವರೆಗೂ ಶಂಕರಪುರ ಮಲ್ಲಿಗೆಗೆ ಡಿಮ್ಯಾಂಡ್ ಹೆಚ್ಚು. ಈ ಅವಧಿಯಲ್ಲಿ ಕನಿಷ್ಠ ₹ 400 ರಿಂದ ಗರಿಷ್ಠ ₹ 1,250 ರವರೆಗೂ ದರ ಸಿಗುತ್ತದೆ. ಆದರೆ, ಹೂ ಇಳುವರಿ ಕಡಿಮೆ ಇರುತ್ತದೆ. ಬೆಳೆಗಾರನಿಗೆ ಕನಿಷ್ಠ ಅಟ್ಟಿಗೆ ₹ 250 ದರ ಸಿಕ್ಕರೆ ಲಾಭ ನೋಡಬಹುದು. ಕೊಯ್ಯಲು, ಕಟ್ಟಲು ಒಂದು ಅಟ್ಟಿಗೆ ₹ 20 ಕೊಡಬೇಕು. ಮಾರುಕಟ್ಟೆ ದರ 400ಕ್ಕಿಂತ ಕಡಿಮೆ ಇದ್ದರೆ ಏಜೆಂಟರ ಕಮೀಷನ್‌ ₹ 10, 400ಕ್ಕಿಂತ ಹೆಚ್ಚಾದರೆ 20, 800ಕ್ಕಿಂತ ಹೆಚ್ಚಾದರೆ ₹ 50 ಕಮಿಷನ್ ಕೊಡಬೇಕು ಎನ್ನುತ್ತಾರೆ ಪ್ರಗತಿಪರ ಕೃಷಿಕ ರಾಘವೇಂದ್ರ ನಾಯಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.