ADVERTISEMENT

ಅಖಂಡ ಭಾರತಕ್ಕೆ ಪಟೇಲರ ಕೊಡುಗೆ ಅನನ್ಯ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಸರ್ದಾರ್ ವಲ್ಲಭಭಾಯ್‌ ಪಠೇಲರ 150 ನೇ ಜನ್ಮ ದಿನಾಚರಣೆ: ಏಕತಾ ನಡಿಗೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 4:42 IST
Last Updated 12 ನವೆಂಬರ್ 2025, 4:42 IST
ಕಾರ್ಯಕ್ರಮದಲ್ಲಿ ಐಕ್ಯತೆ ಹಾಗೂ ಸಮಗ್ರತೆಯ ಪ್ರತಿಜ್ಞಾ ವಿಧಿ ಬೋಧಿಸಲಾಯಿತು
ಕಾರ್ಯಕ್ರಮದಲ್ಲಿ ಐಕ್ಯತೆ ಹಾಗೂ ಸಮಗ್ರತೆಯ ಪ್ರತಿಜ್ಞಾ ವಿಧಿ ಬೋಧಿಸಲಾಯಿತು   

ಉಡುಪಿ: ಸ್ವಾತಂತ್ರ್ಯಾನಂತರ ರಾಜಪ್ರಭುತ್ವಗಳಲ್ಲಿ ಹರಿದು ಹಂಚಿಹೋಗಿದ್ದ ರಾಜ್ಯಗಳನ್ನು ತಮ್ಮ ಧೀಮಂತ ಮತ್ತು ನಿರ್ಭೀತ ವ್ಯಕ್ತಿತ್ವದಿಂದ ಒಗ್ಗೂಡಿಸಿ ಭಾರತದ ಉಕ್ಕಿನ ಮನುಷ್ಯ ಎಂದು ಹೆಸರು ಪಡೆದವರು ಸರ್ದಾರ್ ವಲ್ಲಭಭಾಯ್‌ ಪಟೇಲರು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಜಿಲ್ಲಾಡಳಿತ ಮತ್ತು ಮೈ ಭಾರತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮತ್ತು ಎನ್.ಎಸ್.ಎಸ್., ಎನ್.ಸಿಸಿ, ರೇಂಜ್ ರೋವರ್ಸ್ ಸಂಯುಕ್ತ ಆಶ್ರಯದಲ್ಲಿ ಸರ್ದಾರ್ ವಲ್ಲಭಭಾಯ್‌ ಪಟೇಲರ 150 ನೇ ಜನ್ಮ ದಿನೋತ್ಸವದ ಪ್ರಯುಕ್ತ ನಡೆದ ಏಕತಾ ನಡಿಗೆ ಕಾರ್ಯಕ್ರಮದ ಅಂಗವಾಗಿ ಅಜ್ಜರಕಾಡು ಹುತಾತ್ಮರ ಸ್ಮಾರಕದಲ್ಲಿ ಮಂಗಳವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಶ್ಮೀರವೂ ಸೇರಿದಂತೆ ದೇಶದ ಪ್ರತಿ ಗಲ್ಲಿಗಳಲ್ಲಿಯೂ ಭಾರತದ ತ್ರಿವರ್ಣ ಧ್ವಜ ಹಾರಾಡಬೇಕೆಂಬುದು  ಪಟೇಲರ ಕನಸಾಗಿತ್ತು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪಟೇಲರು ಕಂಡ ಕನಸನ್ನು ನನಸಾಗಿಸಿದೆ ಎಂದು ಹೇಳಿದರು.

ADVERTISEMENT

ಜಾತಿ, ವರ್ಗ, ಭಾಷೆಯ ಭೇದ ಮರೆತು ದೇಶದ ಏಕತೆ, ಸಮಗ್ರತೆ ಮತ್ತು ಅಭಿವೃದ್ದಿಗೆ ಮಾರ್ಗದರ್ಶನ ತೋರಿದ  ಪಟೇಲರ ನೆನಪಿಗಾಗಿ ಪ್ರತಿವರ್ಷವೂ ಏಕತೆಗಾಗಿ ಓಟ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ , ಗುರ್ಮೆ ಸುರೇಶ್ ಶೆಟ್ಟಿ, ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯಾಧ್ಯಕ್ಷ ಬಸ್ರೂರು ರಾಜೀವ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೆಶಕ ರೋಷನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಆಯೋಜಿಸಲಾದ ಜಿಲ್ಲಾ ಮಟ್ಟದ ಆತ್ಮನಿರ್ಭರ ಭಾರತ ಹಾಗೂ ಏಕತಾ ನಡಿಗೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರು ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಚಾಲನೆ ನೀಡಿದರು.

ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಅಜ್ಜರಕಾಡಿನಲ್ಲಿ ಸಮಾರೋಪಗೊಂಡಿತು.

ಗೃಹ ಸಚಿವರಾಗಿ ಸರ್ದಾರ್ ವಲ್ಲಭಭಾಯ್‌ ಪಟೇಲರು ದೇಶವನ್ನು ಒಗ್ಗೂಡಿಸಲು ದಿಟ್ಟ ನಿರ್ಧಾರವನ್ನು ತೆಗೆದುಕೊಂಡ ಫಲವಾಗಿ ಇಂದು ಭಾರತವು ಅಖಂಡವಾಗಿದೆ ಮತ್ತು ಅದು ಇಂದಿಗೂ ಪ್ರಸ್ತುತವಾಗಿದೆ
ಕೋಟ ಶ್ರೀನಿವಾಸ ಪೂಜಾರಿ, ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.