ADVERTISEMENT

1ರಿಂದ ಶಾಲಾರಂಭ: ಸಿಂಗಾರಗೊಂಡಿವೆ ಶಾಲೆಗಳು

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಅರ್ಧ ದಿನ ಶಾಲೆ, 6 ರಿಂದ 9ನೇ ತರಗತಿಯವರಿಗೆ ವಿದ್ಯಾಗಮ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 14:56 IST
Last Updated 31 ಡಿಸೆಂಬರ್ 2020, 14:56 IST
ಉಡುಪಿಯ ಬೋರ್ಡ್‌ ಹೈಸ್ಕೂಲ್‌ ಶಾಲೆಯನ್ನು ಬಲೂನ್ ಹಾಗೂ ಬಣ್ಣದ ಪೇಪರ್‌ಗಳಿಂದ ಸಿಂಗರಿಸಿರುವ ದೃಶ್ಯ.
ಉಡುಪಿಯ ಬೋರ್ಡ್‌ ಹೈಸ್ಕೂಲ್‌ ಶಾಲೆಯನ್ನು ಬಲೂನ್ ಹಾಗೂ ಬಣ್ಣದ ಪೇಪರ್‌ಗಳಿಂದ ಸಿಂಗರಿಸಿರುವ ದೃಶ್ಯ.   

ಉಡುಪಿ: ಜ.1ರಿಂದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ–2 ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭವಾಗುತ್ತಿದ್ದು, ಮಕ್ಕಳ ಸ್ವಾಗತಕ್ಕೆ ಶಾಲೆಗಳು ತಳಿರು ತೋರಣಗಳಿಂದ ಅಲಂಕೃತಗೊಂಡು ಸಿದ್ಧಗೊಂಡಿವೆ.

ಉಡುಪಿಯ ಬೋರ್ಡ್‌ ಹೈಸ್ಕೂಲ್‌ ಶಾಲೆಯನ್ನು ಬಲೂನ್ ಹಾಗೂ ಬಣ್ಣದ ಪೇಪರ್‌ಗಳಿಂದ ಸಿಂಗರಿಸಲಾಗಿದೆ. ಅಲ್ಲಲ್ಲಿ ಸ್ವಾಗತ ಫಲಕಗಳನ್ನು ಹಾಕಲಾಗಿದೆ. ಸರ್ಕಾರದ ನಿರ್ದೇಶನದಂತೆ ಶಾಲೆಯನ್ನು ಸಂಪೂರ್ಣ ಶುಚಿಗೊಳಿಸಲಾಗಿದ್ದು, ಸುರಕ್ಷತೆಗೆ ಒತ್ತು ನೀಡಲಾಗಿದೆ. ಈಗಾಗಲೇ ಪಾಲಕರು ಹಾಗೂ ಪೋಷಕರಿಂದ ಅನುಮತಿ ಪತ್ರ ಪಡೆಯಲಾಗಿದೆ. ಶಾಲೆಯ 108 ವಿದ್ಯಾರ್ಥಿಗಳ ಪೈಕಿ 60 ಮಕ್ಕಳ ಪೋಷಕರು ಅನುಪತಿ ಪತ್ರ ನೀಡಿದ್ದಾರೆ ಎಂದು ಬೋರ್ಡ್ ಹೈಸ್ಕೂಲ್ ಸಿಬ್ಬಂದಿ ತಿಳಿಸಿದರು.

ಪಾಲಕರ ಸಭೆ ಕರೆದು ವಿದ್ಯಾರ್ಥಿಗಳ ಸುರಕ್ಷತೆಗೆ ತೆಗೆದುಕೊಂಡಿರುವ ಕ್ರಮಗಳು ಹಾಗೂ ಪೋಷಕರು ಪಾಲಿಸಬೇಕಾದ ಕರ್ತವ್ಯಗಳ ಕುರಿತು ತಿಳಿಸಲಾಗಿದೆ. ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ನಿಗದಿತ ವೇಳಾಪಟ್ಟಿಯ ಪುಸ್ತಕ ಮಾತ್ರ ತರಬೇಕು, 10ನೇ ತರಗತಿಗೆ ಬೆಳಿಗ್ಗಿನಿಂದ ಮಧ್ಯಾಹ್ನದವರೆಗೆ ತರಗತಿ ನಡೆಯುತ್ತದೆ. ವಾರದಲ್ಲಿ ಮೂರು ದಿನ 9ನೇ ತರಗತಿಗೆ ಹಾಗೂ ವಾರದಲ್ಲಿ 2 ದಿನ 8ನೇ ತರಗತಿಗೆ ವಿದ್ಯಾಗಮ ನಡೆಯುತ್ತದೆ ಎಂದು ತಿಳಿಸಿದರು.

ADVERTISEMENT

10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಕಡ್ಡಾಯ ಇರುವುದರಿಂದ ಪಠ್ಯಕ್ರಮ ಬೋಧಿಸಲಾಗುತ್ತದೆ. ನೆಗಡಿ, ಶೀತ, ಜ್ವರದ ಲಕ್ಷಣಗಳು ಕಂಡುಬಂದರೆ ಐಸೊಲೇಷನ್‌ನಲ್ಲಿ ಪ್ರತ್ಯೇಕಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.