ಉಡುಪಿ: ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಅರಣ್ಯೀಕರಣಕ್ಕಾಗಿ ನಡೆಸುವ ಬೀಜದುಂಡೆ ಪ್ರಯೋಗವು ಕರಾವಳಿ ಜಿಲ್ಲೆಯಾದ ಉಡುಪಿಯಲ್ಲೂ ನಡೆಯುತ್ತಿದೆ.
ಅರಣ್ಯ ಇಲಾಖೆಯಲ್ಲದೆ ಕೆಲವು ಶಾಲಾ–ಕಾಲೇಜುಗಳಲ್ಲೂ, ಸಂಘ–ಸಂಸ್ಥೆಗಳು ಬೀಜದುಂಡೆ ಅಭಿಯಾನವನ್ನು ಪ್ರತಿ ವರ್ಷ ನಡೆಸುತ್ತವೆ. ಈ ಬಾರಿಯೂ ಬೀಜದುಂಡೆ ಸಿದ್ಧಪಡಿಸುವ ಕಾರ್ಯ ಕೆಲವೆಡೆ ನಡೆದಿವೆ.
ಅರಣ್ಯ ಇಲಾಖೆಯ ಕುಂದಾಪುರ ಪ್ರಾದೇಶಿಕ ವಿಭಾಗವು ಕೂಡ ಮಳೆಗಾಲದಲ್ಲಿ ಬೀಜದುಂಡೆ ಬಿತ್ತಲು ಸಿದ್ಧತೆ ನಡೆಸಿದೆ. ಜೊತೆಗೆ ಆರು ಲಕ್ಷಕ್ಕೂ ಹೆಚ್ಚು ಗಿಡಗಳನ್ನು ಸಿದ್ಧಪಡಿಸಿಕೊಂಡಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಬೋಳು ಗುಡ್ಡೆ ಪ್ರದೇಶಗಳಲ್ಲಿ ಬೀಜದುಂಡೆ ಪ್ರಯೋಗ ಅತ್ಯಂತ ಪರಿಣಾಮಕಾರಿ. ಕರಾವಳಿ ಜಿಲ್ಲೆಗಳಲ್ಲಿ ಬೋಳು ಗುಡ್ಡೆ ಕಡಿಮೆ ಇರುವುದರಿಂದ ಇಲ್ಲಿ ಬೀಜದುಂಡೆ ಪ್ರಯೋಗ ಅಷ್ಟೇನೂ ಪರಿಣಾಮಕಾರಿಯಲ್ಲದಿದ್ದರೂ. ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ, ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಹಕಾರಿಯಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮೂರು ಪಾಲು ಕೆಂಪು ಜೇಡಿ ಮಣ್ಣು, ಅದಕ್ಕೆ ಒಂದು ಪಾಲು ಕೊಟ್ಟಿಗೆ ಗೊಬ್ಬರ ಮತ್ತು ಒಂದು ಪಾಲು ಮರಳು ಸೇರಿಸಿ ಅದರೊಳಗೆ ವಿವಿಧ ತಳಿಯ ಬೀಜಗಳನ್ನಿಟ್ಟು ಉಂಡೆ ಮಾಡಲಾಗುತ್ತದೆ. ಇಂತಹ ಬೀಜದುಂಡೆಯನ್ನು ಗುಡ್ಡ ಪ್ರದೇಶಗಳು ಖಾಲಿ ಪ್ರದೇಶಗಳಲ್ಲಿ ಮಳೆಗಾಲದ ಆರಂಭ ಕಾಲದಲ್ಲಿ ಎಸೆದರೆ ಅದು ಮೊಳಕೆಯೊಡೆದು ಗಿಡವಾಗುತ್ತದೆ ಎಂದು ಹೇಳಿದ್ದಾರೆ.
ನೇರಳೆ, ಮಾವು, ಹಲಸು, ನೆಲ್ಲಿ, ಅಂಟುವಾಳ ಮೊದಲಾದವುಗಳ ಬೀಜವನ್ನು ಬಳಸಿ ಬೀಜದುಂಡೆ ಸಿದ್ಧಪಡಿಸಲಾಗುತ್ತದೆ. ಮಳೆ ಆರಂಭವಾಗುವ ಕೆಲ ದಿನಗಳ ಮೊದಲು ಇದನ್ನು ಸಿದ್ಧಪಡಿಸಿಕೊಳ್ಳಲಾಗುತ್ತದೆ ಎಂದು ವಿವರಿಸಿದ್ದಾರೆ.
ನಗರದ ಎಂಜಿಎಂ ಕಾಲೇಜಿನ ಪರಿಸರ ಕ್ಲಬ್‌ನ ವತಿಯಿಂದಲೂ ಈಚೆಗೆ ವಿದ್ಯಾರ್ಥಿಗಳು ಬೀಜದುಂಡೆ ತಯಾರಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಇಲ್ಲಿನ ವಿದ್ಯಾರ್ಥಿಗಳು ಬೀಜದುಂಡೆ ತಯಾರಿಸಿ ಗುಡ್ಡ ಪ್ರದೇಶದಲ್ಲಿ ಬಿತ್ತುತ್ತಿದ್ದಾರೆ.
‘ಈ ಬಾರಿ ನಾವು ಅರಣ್ಯ ಇಲಾಖೆ, ಮಣಿಪಾಲ್ ಬರ್ಡಿಂಗ್ ಆ್ಯಂಡ್ ಕನ್ಸರ್ವೇಷನ್ ಟ್ರಸ್ಟ್ ಸಹಯೋಗದಲ್ಲಿ ಹಾಗೂ ಪ್ರಾಂಶುಪಾಲ ಲಕ್ಷ್ಮಿನಾರಾಯಣ ಕಾರಂತ ಅವರ ಮಾರ್ಗದರ್ಶನದಲ್ಲಿ ಬೀಜದುಂಡೆ ಬಿತ್ತುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಹೊನ್ನೆ ಮರದ ಬೀಜಗಳನ್ನು ಶಿವಮೊಗ್ಗದಿಂದ ತರಿಸಿದ್ದೇವೆ. ಹಲಸು, ನೆಲ್ಲಿ ಮೊದಲಾದವುಗಳ ಬೀಜಗಳನ್ನು ವಿದ್ಯಾರ್ಥಿಗಳೇ ತಂದಿದ್ದರು. ಈ ಹಿಂದೆ ಮಣಿಪಾಲದ ಪ್ರಗತಿ ನಗರ, ಹಿರಿಯಡ್ಕ ಪ್ರದೇಶಗಳಲ್ಲಿ ಅರಣ್ಯ ಇಲಾಖೆಯವರು ಸೂಚಿಸಿದ ಪ್ರದೇಶಗಳಲ್ಲಿ ಬೀಜದುಂಡೆ ಬಿತ್ತಿದ್ದೇವೆ’ ಎಂದು ಎಂಜಿಎಂ ಕಾಲೇಜಿನ ಪರಿಸರ ಕ್ಲಬ್ ಸಂಯೋಜಕಿ ಮನಿತಾ ಟಿ.ಕೆ. ತಿಳಿಸಿದರು.
‘ವಿದ್ಯಾರ್ಥಿಗಳಿಗೆ ರಜೆ ಇರುವಾಗ ಬೀಜದುಂಡೆ ಸಿದ್ಧಪಡಿಸಿ ಇಟ್ಟುಕೊಂಡಿದ್ದೇವೆ. ಮಳೆ ಬಂದ ಕೂಡಲೇ ಅದನ್ನು ಬಿತ್ತಲಾಗುವುದು’ ಎಂದು ತಿಳಿಸಿದರು.
ಮೂರು ಲಕ್ಷ ಬೀಜದುಂಡೆ ಬಿತ್ತನೆಗೆ ಕ್ರಮ
ಪ್ರತಿ ತಾಲ್ಲೂಕುಗಳಲ್ಲೂ ಮಳೆಗಾಲದಲ್ಲಿ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಅಂದಾಜು 3 ಲಕ್ಷ ಬೀಜದುಂಡೆ ಬಿತ್ತನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕುಂದಾಪುರ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ.ತಿಳಿಸಿದರು. ಪ್ರತಿವರ್ಷವೂ ಮೇ ತಿಂಗಳಲ್ಲಿ ಅರಣ್ಯ ಇಲಾಖೆ ವತಿಯಿಂದ ಬೀಜದುಂಡೆ ಸಿದ್ಧಪಡಿಸಿ ಒಣಗಿಸಿಡಲಾಗುತ್ತದೆ. ಜೂನ್ ತಿಂಗಳಲ್ಲಿ ಅವುಗಳನ್ನು ಬಿತ್ತನೆ ಮಾಡಲಾಗುತ್ತದೆ ಎಂದು ಹೇಳಿದರು. ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ನೆಡಲು ಹಲಸು ಮಾವು ಹೆಬ್ಬಲಸು ರೇಂಜ ನೇರಳೆ ದೂಪ ಬೆತ್ತ ಆಲ ಗಾಳಿ ನಂದಿ ಅಂಟುವಾಳ ಮಹಾಗನಿ ದಾಲ್ಚಿನ್ನಿ ಮೊದಲಾದ ಗಿಡಗಳನ್ನೂ ಸಿದ್ಧವಾಗಿಟ್ಟುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.