ADVERTISEMENT

ಹಿರಿಯ ನಾಗರಿಕರಿಗೆ ಆತ್ಮಸ್ಥೈರ್ಯ ನೀಡಿ: ಸಂಸದ ಕೋಟ ಪ್ರತಿಪಾದನೆ

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸದ ಕೋಟ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 6:05 IST
Last Updated 5 ಅಕ್ಟೋಬರ್ 2025, 6:05 IST
ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು
ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು   

ಉಡುಪಿ: ಹಿರಿಯ ನಾಗರಿಕರು ಸಮಾಜದ ಮಾರ್ಗದರ್ಶಕರು. ಅವರನ್ನು ಗೌರವಿಸುವ ಜೊತೆಗೆ ಅವರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಬನ್ನಂಜೆಯ ಶ್ರೀನಾರಾಯಣಗುರು ಸಭಾ ಭವನದಲ್ಲಿ ಶನಿವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವೃದ್ಧಾಪ್ಯದಲ್ಲಿ ಏಕಾಂಗಿತನ, ಅಭದ್ರತೆ, ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಅದನ್ನು ಅರಿತು ಹಿರಿಯರ ಬದುಕಿಗೆ ಆಸರೆ ಮತ್ತು ಚೈತನ್ಯ ನೀಡುವ ನಿಟ್ಟಿನಲ್ಲಿ ಸಮಾಜವೂ ಮುಂದಾಗಬೇಕು ಎಂದು ಹೇಳಿದರು.

ADVERTISEMENT

ಅವಿಭಕ್ತ ಕುಟುಂಬಗಳಿದ್ದ ಕಾಲದಲ್ಲಿ ಹಿರಿಯರು ಮಕ್ಕಳು, ಮೊಮ್ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿದ್ದರು. ಆಧುನಿಕ ಕಾಲದಲ್ಲಿ ಯುವಕರು ಉದ್ಯೋಗ ನಿಮಿತ್ತ ಪರವೂರು, ಪರದೇಶಗಳಿಗೆ ತೆರಳುತ್ತಿದ್ದು, ಮನೆಯಲ್ಲಿರುವ ಹಿರಿಯರು ಒಂದೋ ಏಕಾಂಗಿ ಜೀವನ ನಡೆಸುತ್ತಿರುತ್ತಾರೆ ಅಥವಾ ವೃದ್ಧಾಶ್ರಮ ಸೇರಿರುತ್ತಾರೆ ಎಂದರು.

ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಪ್ರದೇಶದಲ್ಲಿರುವ ಹಿರಿಯರು ಹೆಚ್ಚು ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. ಸಮಾಜದ ಕೊಂಡಿಯಾಗಿ ಕಿರಿಯರಿಗೆ ಮಾರ್ಗದರ್ಶನ ನೀಡುತ್ತಿದ್ದ ಹಿರಿಯರು ಅನುಭವಿಸುವ ಸಮಸ್ಯೆಗಳನ್ನು ಪರಿಹರಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ಹಿರಿಯ ನಾಗರಿಕರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಟ್ಟದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಯೋಜನೆಗಳನ್ನು ಅವರಿಗೆ ತಲುಪಿಸುವ ಕಾರ್ಯದಲ್ಲಿ ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳು ಕೈಜೋಡಿಸಬೇಕು ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ಯುವ ಜನತೆಗಿಂತ ಹೆಚ್ಚು ಜ್ಞಾನ ಮತ್ತು ಅನುಭವ ಹಿರಿಯರಲ್ಲಿರುತ್ತದೆ. ಅವರ ಅನುಭವಗಳಿಂದ ಸಮಾಜವನ್ನು ಮುನ್ನಡೆಸಲು ಸಾಧ್ಯ ಎಂದರು.

ಡಾ. ವಿರೂಪಾಕ್ಷ ದೇವರ ಮನೆ ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ಯಾಮಲ ಸಿ.ಕೆ  ಸ್ವಾಗತಿಸಿದರು. ರೆಡ್ ಕ್ರಾಸ್ ಕಾರ್ಯದರ್ಶಿ ಗಣನಾಥ್ ಶೆಟ್ಟಿ ಎಕ್ಕಾರು ನಿರೂಪಿಸಿದರು.

ಕೋವಿಡ್ ಬಳಿಕ ಸ್ಥಗಿತವಾಗಿರುವ ಹಿರಿಯರಿಗಾಗಿಯೇ ಮೀಸಲಾಗಿದ್ದ ರೈಲ್ವೆ ಟಿಕೆಟ್ ದರದಲ್ಲಿನ ರಿಯಾಯತಿಯನ್ನು ಮರಳಿ ಜಾರಿಗೆ ತರಲು ಪ್ರಯತ್ನಿಸಲಾಗುವುದು
ಕೋಟ ಶ್ರೀನಿವಾಸ ಪೂಜಾರಿ ಸಂಸದ
ಹಿರಿಯರು ನಮ್ಮಿಂದ ಬಯಸುವುದು ಪ್ರೀತಿ ಮತ್ತು ಗೌರವ ಮಾತ್ರ. ಮನೆಯ ಸದಸ್ಯರು ಹಿರಿಯರ ಬಗ್ಗೆ ಕಾಳಜಿ ವಹಿಸಬೇಕು ದಿನಕರ
ಹೇರೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.