ADVERTISEMENT

ಹಲ್ಲೆ ಪ್ರಕರಣ ಸಿಐಡಿ ತನಿಖೆಗೆ ಒಳಪಡಿಸಿ: ಶಂಕರ ಶಾಂತಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 16:45 IST
Last Updated 22 ಮಾರ್ಚ್ 2021, 16:45 IST
ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ಶಂಕರ ಶಾಂತಿ ಮಾತನಾಡಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ಶಂಕರ ಶಾಂತಿ ಮಾತನಾಡಿದರು.   

ಉಡುಪಿ: ‘ನನ್ನ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಬೇಕು’ ಎಂದು ಸಾಮಾಜಿಕ ಹೋರಾಟಗಾರ ಶಂಕರ ಶಾಂತಿ ಒತ್ತಾಯಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಲ್ಲೆ ಪ್ರಕರಣದ ಆರೋಪಿಗಳ ಪರವಾಗಿ ಇಡೀ ವ್ಯವಸ್ಥೆ ನಿಂತಿದ್ದು, ಕಾನೂನು ಕ್ರಮ ಜರುಗಿಸದಂತೆ ಪೊಲೀಸರ ಮೇಲೆ ರಾಜಕೀಯ ಪ್ರಭಾವ ಬೀರಲಾಗಿದೆ’ ಎಂದು ಆರೋಪಿಸಿದರು.

‘ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ಶಿಕ್ಷೆಯಾಗಲಿ. ಆದರೆ, ಯಾವ ಸಾಮಾಜಿಕ ಹೋರಾಟಗಾರನಿಗೂ ನನಗೆ ಬಂದ ಸ್ಥಿತಿ ಬರಬಾರದು. ಮಾರಣಾಂತಿಕ ಹಲ್ಲೆ ನಡೆಸಿದ ಎಲ್ಲ ಆರೋಪಿಗಳಿಗೆ ಶಿಕ್ಷೆಯಾಗಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಕಾಳಿಕಾಂಬಾ ದೇವಸ್ಥಾನದ ಅಡುಗೆ ಕೋಣೆಯಲ್ಲಿ ಮಾರಣಾಂತಿಕ ಹಲ್ಲೆ ನಡೆದರೂ ದೇವಸ್ಥಾನ ಸಮಿತಿಯವರು ಹಲ್ಲೆಯೇ ನಡೆದಿಲ್ಲ ಎನ್ನುತ್ತಿದ್ದಾರೆ. ಸುಳ್ಳು ದೂರು ದಾಖಲಿಸಲಾಗಿದೆ ಎಂದು ದೂರಲಾಗುತ್ತಿದೆ. ದೇವಸ್ಥಾನದ ಆಡಳಿತ ಮಂಡಳಿಯವರು ಸುಳ್ಳು ಹೇಳಿಲ್ಲವಾದರೆ ಮಾರ್ಚ್ 24ರಂದು ಬೆಳಿಗ್ಗೆ 11ಕ್ಕೆ ಮಾರಿಕಾಂಬಾ ಹಾಗೂ ಕಲ್ಲುಕುಟ್ಟಿಗ ದೈವದ ಸಾನ್ನಿಧ್ಯಕ್ಕೆ ಬಂದು ಪ್ರಮಾಣ ಮಾಡಬೇಕು’ ಎಂದು ಶಂಕರ ಶಾಂತಿ ಸವಾಲು ಹಾಕಿದರು.

‘ನನ್ನ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿರುವ ಶಂಕರ ಪೂಜಾರಿ ಕೂಡ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಬೇಕು. ಕೊಲೆ ಯತ್ನ ಪ್ರಕರಣದ ಪ್ರಮುಖ ಆರೋಪಿಗಳನ್ನು ಶೀಘ್ರ ಬಂಧಿಸಬೇಕು. ನನಗೆ ಹಾಗೂ ಕುಟುಂಬಕ್ಕೆ ಜೀವಭಯವಿದ್ದು, ಸೂಕ್ತ ರಕ್ಷಣೆ ಒದಗಿಸಬೇಕು’ ಎಂದು ಆಗ್ರಹಿಸಿದರು.

ಬಾರ್ಕೂರು ಜೈನಬಸದಿ ಅತಿಕ್ರಮಣ ಪ್ರಕರಣ ತಾರ್ಕಿಕ ಅಂತ್ಯ ತಲುಪಿದೆ. ಬಸದಿ ಜಾಗ ತೆರವಿಗೆ ತಹಶೀಲ್ದಾರ್ ನೋಟಿಸ್‌ ನೀಡಿದ್ದಾರೆ. ಜಿಲ್ಲಾಧಿಕಾರಿ ಕೂಡಲೇ ಮಧ್ಯೆ ಪ್ರವೇಶಿಸಿ ಅತಿಕ್ರಮಣ ತೆರವುಗೊಳಿಸಬೇಕು. ಇಲ್ಲವಾದರೆ, ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಶಂಕರ ಶಾಂತಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ದಸಂಸ ಮುಖಂಡ ಶೇಖರ್ ಹಾವಂಜೆ, ಆರ್‌ಟಿಐ ಕಾರ್ಯಕರ್ತರ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಸದಾಶಿವ ಶೆಟ್ಟಿ ಹೆರೂರು, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಸುಜಯ ಪೂಜಾರಿ, ಮುಖಂಡರಾದ ಪ್ರಮೋದ್ ಉಚ್ಚಿಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.