ADVERTISEMENT

ಶಿರೂರು ಮಠ: ಉತ್ತರಾಧಿಕಾರಿಯಾಗಿ ಯೋಗ್ಯ ವಟುವಿನ ನೇಮಕ-ವಿಶ್ವವಲ್ಲಭ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 15:23 IST
Last Updated 7 ಏಪ್ರಿಲ್ 2019, 15:23 IST
ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೋದೆ ಮಠದ ವಿಶ್ವವಲ್ಲಭ ಸ್ವಾಮೀಜಿ ಮಾತನಾಡಿದರು.ಪ್ರಜಾವಾಣಿ ಚಿತ್ರ
ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೋದೆ ಮಠದ ವಿಶ್ವವಲ್ಲಭ ಸ್ವಾಮೀಜಿ ಮಾತನಾಡಿದರು.ಪ್ರಜಾವಾಣಿ ಚಿತ್ರ   

ಉಡುಪಿ: 800 ವರ್ಷಗಳಷ್ಟು ಇತಿಹಾಸ ಇರುವ ಶಿರೂರು ಮಠಕ್ಕೆ ಯೋಗ್ಯ ವ್ಯಕ್ತಿಯನ್ನು ಉತ್ತರಾಧಿಕಾರಿಯನ್ನಾಗಿ ಮಾಡಲಾಗುವುದು. ತರಾತುರಿಯಲ್ಲಿ ಯಾರನ್ನು ಆ ಸ್ಥಾನಕ್ಕೆ ತಂದು ಕೂರಿಸಲು ಆಗಲ್ಲ ಎಂದು ಸೋದೆ ಮಠದ ವಿಶ್ವವಲ್ಲಭ ಸ್ವಾಮೀಜಿ ಹೇಳಿದರು.

ಉಡುಪಿ ಶಿರೂರು ಮಠದಲ್ಲಿ ಭಾನುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಶಿರೂರು ಮಠಕ್ಕೆ ಯೋಗ್ಯ ಶಿಷ್ಯನನ್ನು ನೋಡಲಾಗಿದೆ. ಅವರಿಗೆ ಸನ್ಯಾಸ ಸ್ವೀಕರಿಸುವ ಎಲ್ಲ ಅರ್ಹತೆಗಳಿವೆ. ಆದರೂ ಏಕಾಏಕಿ ತೀರ್ಮಾನಿಸಲು ಆಗುವುದಿಲ್ಲ. ಅವರ ಹೆಸರು ಬಹಿರಂಗ ಪಡಿಸಲೂ ಸಾಧ್ಯವಿಲ್ಲ. ಅವರು ಸೋದೆ ಮಠದ ಗುರುಕುಲದಲ್ಲಿ ಅಧ್ಯಯನ ಮಾಡುತ್ತಿದ್ದು, ಮೂರು ವರ್ಷ ಅವರ ಚಟುವಟಿಕೆಗಳನ್ನು ಗಮನಿಸುತ್ತೇವೆ. ಸನ್ಯಾಸ ಸ್ವೀಕರಿಸಲು ಯೋಗ್ಯರೆಂದು ಮನಗಂಡ ಮೇಲೆ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡುತ್ತೇವೆ’ ಎಂದರು.

ಗಡಿಬಿಡಿಯಾಗಿ ನೇಮಿಸಿದ ಇಬ್ಬರು ಶಿಷ್ಯರು ಯೋಗ್ಯರಾಗಿರಲಿಲ್ಲ ಎಂಬುದನ್ನು ಶಿರೂರು ಮಠದ ಹಿಂದಿನ ಯತಿಗಳಾದ ವಿಶ್ವಕರ್ಮ ಶ್ರೀಪಾದರೇ ಅಭಿಪ್ರಾಯಪಟ್ಟಿದ್ದರು. ಹಾಗಾಗಿ, ಯೋಚಿಸಿ ನಿರ್ಧಾರ ಕೈಗೊಳ್ಳಬೇಕಾಗಿದೆ. ಶಿರೂರು ಮಠಕ್ಕೆ ಉತ್ತರಾಧಿಕಾರಿಯಾಗಿ ಬರುವವರು ಮಠದ ನಿರ್ವಹಣೆ ಜತೆಗೆ ಧರ್ಮಪ್ರಚಾರ ಮಾಡಬೇಕು. ಬದಲಾಗಿ ಕೋರ್ಟ್‌, ಕಚೇರಿ ಎಂದು ಅಲೆಯಬಾರದು. ಹಾಗಾಗಿ, ಉತ್ತರಾಧಿಕಾರಿ ನೇಮಕ ವಿಳಂಬವಾಗುತ್ತಿದೆ. ಉತ್ತರಾಧಿಕಾರಿ ಸ್ಥಾನವನ್ನು ಪೂರ್ವಾಶ್ರಮದವರಿಗೆ ಕೊಡುತ್ತಾರಂತೆ, ಮೂಲ ಮಠಕ್ಕೆ ನೀಡುತ್ತಾರಂತೆ ಎಂಬ ವದಂತಿಗಳು ಹರಿದಾಡುತ್ತಿವೆ. ಇದರಿಂದ ತುಂಬಾ ಬೇಸರ ಆಗಿದೆ ಎಂದು ಶ್ರೀಗಳು ವಿಷಾದ ವ್ಯಕ್ತಪಡಿಸಿದರು.

ADVERTISEMENT

ಶಿರೂರು ಮಠಕ್ಕೆ ಉತ್ತರಾಧಿಕಾರಿ ನೇಮಕ ಕುರಿತು ಪೂರ್ವತಯಾರಿ ಇರಲಿಲ್ಲ. ಇಂತಹ ಪರಿಸ್ಥಿತಿ ಉದ್ಭವಿಸಬಹುದು ಎಂಬುವುದನ್ನೂ ಯೋಚಿಸಿರಲಿಲ್ಲ. ಏಕಾಏಕಿ ಸೃಷ್ಟಿಯಾದ ಪರಿಸ್ಥಿತಿಯಲ್ಲಿ ಉತ್ತರಾಧಿಕಾರಿ ನೇಮಕ ಕಷ್ಟದ ವಿಚಾರ. ಮಠದಲ್ಲಿ ಎಲ್ಲ ವ್ಯವಸ್ಥೆಗಳು ಸರಿ ಇದ್ದಿದ್ದರೆ ಓರ್ವ ವ್ಯಕ್ತಿಯನ್ನು ಧೈರ್ಯದಿಂದ ಕೂರಿಸಬಹುದು. ಆದರೆ ಮಠದಲ್ಲಿ ಈಗ ಸಮಸ್ಯೆಗಳ ಕಂದಕ ನಿರ್ಮಾಣ ಆಗಿದೆ. ಅದು ಯಾರಿಂದ ಆಯಿತು?. ಹೇಗಾಯಿತು ಎಂಬ ಚರ್ಚೆ ಈಗ ಅಪ್ರಸ್ತುತ ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ಎಷ್ಟೇ ಬುದ್ಧಿವಂತ, ಯೋಗ್ಯನಾಗಿರುವ ವ್ಯಕ್ತಿಯನ್ನು ಪೀಠಕ್ಕೆ ತಂದು ಕೂರಿಸಿದರೂ ಸಹ ಅವರಿಗೆ ಈ ಸಮಸ್ಯೆಯ ಹೊರೆಯನ್ನು ನಿಭಾಯಿಸಲು ಸಾಧ್ಯವಿಲ್ಲ. ಹಾಗಾಗಿ ಪರಿಸ್ಥಿತಿ ಸರಿಯಾಗುವವರೆಗೆ ಮಠಕ್ಕೆ ಸಂನ್ಯಾಸಿಯಾಗಿ ಬರಲು ಯಾರು ಒಪ್ಪುವುದಿಲ್ಲ. ಆಧ್ಯಾತ್ಮಿಕದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಬರುತ್ತಾರೆಯೇ ಹೊರತು, ಕೋರ್ಟ್‌, ಕಚೇರಿ, ಇನ್ನಿತರ ವಿವಾದಗಳನ್ನು ಯಾರು ತಲೆ ಮೇಲೆ ಹೊತ್ತುಕೊಳ್ಳಲು ಬಯಸುವುದಿಲ್ಲ ಎಂದು ಹೇಳಿದರು.

ಕನಕ ಮಹಲ್‌ ವಿವಾದ ಇತ್ಯರ್ಥ ಬಗೆಹರಿಯಬೇಕೆನ್ನುವರಷ್ಟರಲ್ಲಿಯೇ, ಲಕ್ಷ್ಮೀವರತೀರ್ಥರ ಬ್ಯಾಂಕ್‌ ಖಾತೆಯಲ್ಲಿ ಕೋಟಿಗಟ್ಟಲೇ ಹಣ ವರ್ಗಾವಣೆ ಆಗಿದೆ ಎಂಬ ಕಾರಣಕ್ಕಾಗಿ ಆದಾಯ ತೆರಿಗೆ ಇಲಾಖೆ ದ್ವಂದ್ವ ಸೋದೆ ಮಠಕ್ಕೆ 17.34 ಕೋಟಿ ದಂಡ ಹಾಕಿದೆ. ಶಿರೂರು ಮೂಲ ಮಠ ಬೀಳುವ ಪರಿಸ್ಥಿತಿಯಲ್ಲಿತ್ತು. ಅದಕ್ಕೆ 25 ಲಕ್ಷ ಖರ್ಚು ಜೀರ್ಣೋದ್ಧಾರ ಮಾಡಿದ್ದೇವೆ. ಈಗ ಮಠದ ಆದಾಯ ಮೂಲ ಕಡಿಮೆ ಇದೆ. ಬ್ಯಾಂಕ್‌ನಲ್ಲಿ ಮಠದ ಖಾತೆಯಲ್ಲಿ 10 ಲಕ್ಷ ರೂಪಾಯಿ ಮಾತ್ರ ಠೇವಣಿ ಇತ್ತು. ಆದರೆ ಅದನ್ನು ಕರ್ಪೋರೇಶನ್‌ ಬ್ಯಾಂಕ್‌ ಮುಟ್ಟುಗೋಲು ಹಾಕಿಕೊಂಡಿದೆ. ಸದ್ಯ ಮಠದಲ್ಲಿ ಆರ್ಥಿಕ ಸಂಪತ್ತು ಎನ್ನುವುದು ಯಾವುದೂ ಇಲ್ಲ. ಮಠಕ್ಕೆ ಸೇರಿದ ಮಣಿಪಾಲದ ವಾಣಿಜ್ಯ ಕಟ್ಟಡಗಳಿಂದ ಸ್ವಲ್ಪ ಬಾಡಿಗೆ ಬರುತ್ತಿದ್ದು, ಇದರಿಂದ ಮಠದ ನಿರ್ವಹಣೆ ಆಗುತ್ತಿದೆ ಎಂದು ಸ್ವಾಮೀಜಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.