ADVERTISEMENT

ಉಡುಪಿ | ಶಿರೂರು ಪರ್ಯಾಯ: ಧಾನ್ಯ ಮುಹೂರ್ತ

ರಥಬೀದಿಯಲ್ಲಿ ಅಕ್ಕಿಯ ಮುಡಿಯನ್ನು ತಲೆಯಲ್ಲಿ ಹೊತ್ತು ಮೆರವಣಿಗೆ ನಡೆಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 6:13 IST
Last Updated 15 ಡಿಸೆಂಬರ್ 2025, 6:13 IST
ಧಾನ್ಯ ಮುಹೂರ್ತದ ಅಂಗವಾಗಿ ಶ್ರೀ ಕೃಷ್ಣದೇವರ ದರ್ಶನ ಪಡೆಯಲಾಯಿತು
ಧಾನ್ಯ ಮುಹೂರ್ತದ ಅಂಗವಾಗಿ ಶ್ರೀ ಕೃಷ್ಣದೇವರ ದರ್ಶನ ಪಡೆಯಲಾಯಿತು   

ಉಡುಪಿ: ಶಿರೂರು ಮಠಾಧೀಶ ವೇದವರ್ಧನ ತೀರ್ಥ ಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಸಾಂಪ್ರದಾಯಿಕ ಧಾನ್ಯ ಮುಹೂರ್ತವು ಭಾನುವಾರ ಶ್ರೀಕೃಷ್ಣ ಮಠದಲ್ಲಿ ನೆರವೇರಿತು.

ಧಾನ್ಯ ಮುಹೂರ್ತದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶ್ರೀ ಕೃಷ್ಣದೇವರು, ಅನಂತೇಶ್ವರ, ಚಂದ್ರಮೌಳೇಶ್ವರ ದೇವರ ದರ್ಶನದ ಬಳಿಕ, ನೂರಾರು ಭಕ್ತರು ತಲೆಯಲ್ಲಿ ಅಕ್ಕಿಯ ಮುಡಿಯನ್ನು ಹೊತ್ತು ಮೆರವಣಿಗೆ ನಡೆಸಿದರು.

ಧಾನ್ಯವನ್ನು ಸಂಗ್ರಹಿಸುವ ಪ್ರತಿರೂಪದಂತೆ ಅಕ್ಕಿ ಮುಡಿಯ ಮೆರವಣಿಗೆ ರಥಬೀದಿಯಲ್ಲಿ ಜರುಗಿತು. ಬಳಿಕ ವಾದ್ಯ ಮೇಳಗಳೊಂದಿಗೆ ಮೆರವಣಿಗೆಯು ಕೃಷ್ಣಮಠ ಪ್ರವೇಶಿಸಿತು. ಕೃಷ್ಣಮಠದ ಆಡಳಿತ ಕಚೇರಿ ಇರುವ ಬಡಗು ಮಾಳಿಗೆಯಲ್ಲಿ, ಅಕ್ಕಿಯ ಮುಡಿಗಳನ್ನಿಟ್ಟು ಪೂಜಿಸುವ ಮೂಲಕ ಧಾನ್ಯ ಮುಹೂರ್ತ ನೆರವೇರಿತು.

ADVERTISEMENT

ಕಟ್ಟಿಗೆಗಳನ್ನು ಸಾಂಪ್ರದಾಯಿಕವಾಗಿ ಜೋಡಿಸಿ ರಥ ನಿರ್ಮಿಸುವುದು ಉಡುಪಿಯ ಸಂಪ್ರದಾಯವಾಗಿದ್ದು, ಈ ರೀತಿ ನಿರ್ಮಿಸಲಾದ ಕಟ್ಟಿಗೆ ರಥಕ್ಕೆ ಶಿಖರ ಪ್ರತಿಷ್ಠೆಯನ್ನೂ ನಡೆಸಲಾಯಿತು.

ಶಾಸಕ ಯಶ್‌ಪಾಲ್ ಸುವರ್ಣ, ಮಠದ ದಿವಾನ ಉದಯ ಸರಳತ್ತಾಯ, ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ, ಎಂ.ಬಿ. ಪುರಾಣಿಕ್, ಪ್ರದೀಪ್ ಕುಮಾರ್ ಕಲ್ಕೂರ, ಇಂದ್ರಾಳಿ ಜಯಕರ್ ಶೆಟ್ಟಿ, ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಪರ್ಯಾಯ ಸಮಿತಿಯ ಮಟ್ಟಾರ್ ರತ್ನಾಕರ್ ಹೆಗ್ಡೆ, ಸುಪ್ರಸಾದ್ ಶೆಟ್ಟಿ, ಮೋಹನ್ ಭಟ್, ನಂದನ್ ಜೈನ್, ಮಧುಕರ್ ಮುದ್ರಾಡಿ, ವಿಷ್ಣು ಪ್ರಸಾದ್ ಪಾಡಿಗಾರ್ ಇದ್ದರು.

ಕಟ್ಟಿಗೆ ರಥಕ್ಕೆ ಶಿಖರ ಪ್ರತಿಷ್ಠೆ ನಡೆಸಲಾಯಿತು

ಕಟ್ಟಿಗೆ ರಥಕ್ಕೆ ಶಿಖರ ಪ್ರತಿಷ್ಠೆ ಧಾನ್ಯ ಮುಹೂರ್ತದಲ್ಲಿ ನೂರಾರು ಭಕ್ತರು ಭಾಗಿ

- ನಾಲ್ಕನೇ ಮುಹೂರ್ತ ಧಾನ್ಯ ಮುಹೂರ್ತವು ಪರ್ಯಾಯ ಪೂರ್ವದ ನಾಲ್ಕನೇ ಮುಹೂರ್ತವಾಗಿದೆ. ಈ ಮೊದಲು ಬಾಳೆ ಮುಹೂರ್ತ ಅಕ್ಕಿ ಮುಹೂರ್ತ ಕಟ್ಟಿಗೆ ಮುಹೂರ್ತಗಳು ನಡೆದಿದ್ದವು. ಎಲ್ಲಾ ಮುಹೂರ್ತಗಳ ಉದ್ದೇಶ ಎರಡು ವರ್ಷಗಳ ಕಾಲ ಭಕ್ತರ ಉಟೋಪಚಾರಕ್ಕೆ ಸಿದ್ಧತೆ ನಡೆಸುವುದಾಗಿದೆ. ‘ಉಡುಪಿಯ ಕೃಷ್ಣದೇವರನ್ನು ಅನ್ನ ಬ್ರಹ್ಮ ಎಂದು ಕರೆಯುತ್ತಾರೆ. ಇಲ್ಲಿ ಕೃಷ್ಣದೇವರಿಗೆ ಪ್ರತಿದಿನ ಶೋಢಶೋಪಚಾರ ಪೂಜೆಯೊಂದಿಗೆ ಹತ್ತಾರು ಬಗೆಯ ಖಾದ್ಯಗಳ ನೈವೇದ್ಯ ನಡೆದರೆ ಮತ್ತೊಂದೆಡೆ ಭಕ್ತರಿಗೆ ದೇವರ ನೈವೇದ್ಯ ಅನ್ನಪ್ರಸಾದದ ರೂಪದಲ್ಲಿ ವಿತರಣೆಯಾಗುತ್ತದೆ’ ಎಂದು ಮಠದ ದಿವಾನ ಉದಯ ಸರಳತ್ತಾಯ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.