ADVERTISEMENT

ಶಿಷ್ಯಸ್ವೀಕಾರ ಭಗವಂತನ ಸಂಕಲ್ಪ

ಮೇ 16ರಂದು ಪುತ್ತಿಗೆ ಮೂಲಮಠದಲ್ಲಿ ಗುರುವಂದನಾ ಕಾರ್ಯಕ್ರಮ: ಸುಗುಣೇಂದ್ರ ಶ್ರೀ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 13:25 IST
Last Updated 22 ಏಪ್ರಿಲ್ 2019, 13:25 IST
ಪುತ್ತಿಗೆ ಮಠದ ಹಿರಿಯ ಶ್ರೀಗಳಾದ ಸುಗುಣೇಂದ್ರ ತೀರ್ಥರು, ಕಿರಿಯ ಶ್ರೀಗಳಾದ ಸುಶ್ರೀಂದ್ರ ತೀರ್ಥರಿಗೆ ಮಣಿ ಮಂಜರಿ ಶ್ಲೋಕ ಹೇಳಿಕೊಟ್ಟರು.ಪ್ರಜಾವಾಣಿ ಚಿತ್ರ
ಪುತ್ತಿಗೆ ಮಠದ ಹಿರಿಯ ಶ್ರೀಗಳಾದ ಸುಗುಣೇಂದ್ರ ತೀರ್ಥರು, ಕಿರಿಯ ಶ್ರೀಗಳಾದ ಸುಶ್ರೀಂದ್ರ ತೀರ್ಥರಿಗೆ ಮಣಿ ಮಂಜರಿ ಶ್ಲೋಕ ಹೇಳಿಕೊಟ್ಟರು.ಪ್ರಜಾವಾಣಿ ಚಿತ್ರ   

ಉಡುಪಿ: ಒಳ್ಳೆಯ ಯತಿಗಳಲ್ಲೇ ಇಂದ್ರನಾಗಬೇಕು, ಸುಯತೀಂದ್ರನಾಗಬೇಕು ಎಂಬ ಅಭಿಲಾಷೆಯಿಂದ ಮಧ್ವಾಚಾರ್ಯರ ಸಂಸ್ಥಾನದ ಪುತ್ತಿಗೆ ಮಠಕ್ಕೆ ಸುಶ್ರೀಂದ್ರ ತೀರ್ಥರನ್ನು ಉತ್ತರಾಧಿಕಾರಿಯನ್ನಾಗಿ ಮಾಡಲಾಗಿದೆ ಎಂದು ಪುತ್ತಿಗೆ ಮಠದ ಹಿರಿಯ ಯತಿಗಳಾದ ಸುಗುಣೇಂದ್ರ ತೀರ್ಥರು ತಿಳಿಸಿದರು.

ಹಿರಿಯಡಕದಲ್ಲಿರುವ ಪುತ್ತಿಗೆ ಮೂಲಮಠದಲ್ಲಿ ಸೋಮವಾರ ಶಿಷ್ಯಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ‘ಪುತ್ತಿಗೆ ಮಠಕ್ಕೆ ಶಿಷ್ಯಸ್ವೀಕಾರ ನಿರ್ಧಾರ ಹಲವರಲ್ಲಿ ಆಶ್ಚರ್ಯ, ಕುತೂಹಲ, ಸಂಶಯಗಳನ್ನು ಮೂಡಿಸಿದೆ. ಇದು ವೈಯಕ್ತಿಕ ನಿರ್ಧಾರವಲ್ಲ; ಭಗವಂತನ ಸಂಕಲ್ಪ. ಶಿಷ್ಯ ಸ್ವೀಕಾರ ಕಾರ್ಯಕ್ರಮ ತರಾತುರಿಯಲ್ಲಿ ನಡೆದಿದ್ದರೂ, 8 ತಿಂಗಳ ಹಿಂದಿನಿಂದಲೇ ತಯಾರಿ ನಡೆದಿತ್ತು’ ಎಂದರು.‌

ಏ.22ರ ಮುಹೂರ್ತವನ್ನು ಬಿಟ್ಟರೆ ಒಂದೂವರೆ ವರ್ಷ ಶಿಷ್ಯ ಸ್ವೀಕಾರ ಮಾಡುವಂತಿರಲಿಲ್ಲ. ಇಬ್ಬರಿಗೂ ಕೂಡಿಬರುವ ಶುಭ ಮಹೂರ್ತ ಇದಾಗಿದ್ದರಿಂದ ಅವಸರದಲ್ಲಿ ಕಾರ್ಯಕ್ರಮವನ್ನು ನಿಗಧಿಮಾಡಬೇಕಾಯಿತು ಎಂದು ಪುತ್ತಿಗೆ ಶ್ರೀಗಳು ಸಮಜಾಯಿಷಿ ನೀಡಿದರು.

ADVERTISEMENT

ಏಕಾಏಕಿ ಕಾರ್ಯಕ್ರಮ ಆಯೋಜಿಸಿದ್ದರಿಂದ ಭಾಗವಹಿಸಲು ಸಾಧ್ಯವಾಗದೆ, ಮಠದ ಶಿಷ್ಯರು, ಭಕ್ತರು ಅಸಮಾಧಾನಗೊಂಡಿದ್ದಾರೆ. ಅದಕ್ಕಾಗಿ, ಮೇ 16ರಂದು ಪುತ್ತಿಗೆ ಮಠದಲ್ಲಿ ಗುರುವಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಅಂದು ನರಸಿಂಹ ಉತ್ಸವವೂ ನಡೆಯಲಿದ್ದು ಎಲ್ಲರೂ ಭಾಗವಹಿಸಬೇಕು ಎಂದರು.

ಸಾಹಸವೇ ನನ್ನ ಕೆಲಸ:

‘ವಿಶ್ವಮಟ್ಟದಲ್ಲಿ ಧರ್ಮ ಪ್ರಚಾರ ಮಾಡುವ ಸಾಹಸವನ್ನು ಈಗಾಗಲೇ ಮಾಡುತ್ತಿದ್ದೇನೆ. ನಾನು ಮಾಡುತ್ತಿರುವುದು ಸಾಹಸವೇ ಹೊರತು ದುಸ್ಸಾಹಸವಲ್ಲ. ಉಪೇಂದ್ರ ತೀರ್ಥರ ಸಂಕಲ್ಪದಂತೆ ವಿಶ್ವದಾದ್ಯಂತ 11 ಕಡೆಗಳಲ್ಲಿ ಪುತ್ತಿಗೆ ಮಠದ ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ’ ಎಂದರು.

‘ವಿಶ್ವದಾದ್ಯಂತ ಧರ್ಮ ಪ್ರಸಾರ ಮಾಡಬೇಕು, ಮಠದ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಬೇಕು ಹಾಗೂ ಲೌಕಿಕ ಸಾಧನೆ ಮಾಡಬೇಕು ಎಂಬ ಸಂಕಲ್ಪ ಮಾಡಿದ್ದೇನೆ. ಈ ಕೆಲಸ ಒಬ್ಬರಿಂದ ಸಾಧ್ಯವಿಲ್ಲ. ಅದಕ್ಕಾಗಿ ಶಿಷ್ಯನನ್ನು ಸ್ವೀಕರಿಸಿದ್ದೇನೆ. ಮುಂದೆ, ಸುಶ್ರೀಂದ್ರ ತೀರ್ಥರ ಜತೆಗೂಡಿ ವಿಶ್ವಮಟ್ಟದಲ್ಲಿ ಧರ್ಮ ಪ್ರಸಾರ ಕಾರ್ಯ ಮಾಡಲಾಗುವುದು’ ಎಂದರು.

ಪುತ್ತಿಗೆ ಮೂಲಮಠದಲ್ಲಿ ವೇದ ಅಧ್ಯಯನಕ್ಕೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ವೇದ ಪಾಠಗಳನ್ನು ಹೇಳಿಕೊಡಲು ವಿದ್ವಾಂಸರನ್ನು ನೇಮಕ ಮಾಡಲಾಗುವುದು. ಆಧ್ಯಾತ್ಮದತ್ತ ಒಲವಿರುವ ಎಲ್ಲರೂ ಇಲ್ಲಿ ಶಿಕ್ಷಣ ಪಡೆಯಬಹುದು ಎಂದರು.

ಹೆರ್ಗ ವೇದವ್ಯಾಸ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಬಿ.ಗೋಪಾಲಾಚಾರ್, ಕೊಡಂಚ ಅವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.