ADVERTISEMENT

ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ-ಶೋಭಾ ಕರಂದ್ಲಾಜೆ

ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 10:16 IST
Last Updated 30 ಅಕ್ಟೋಬರ್ 2019, 10:16 IST
ಸಂಸದೆ ಶೋಭಾ ಕರಂದ್ಲಾಜೆ
ಸಂಸದೆ ಶೋಭಾ ಕರಂದ್ಲಾಜೆ   

ಉಡುಪಿ: ಅಧಿಕಾರ ಕಳೆದುಕೊಂಡ ನಂತರ ಸಿದ್ದರಾಮಯ್ಯ ಮಾನಸಿಕ ಸ್ಥಿಮಿತಕಳೆದುಕೊಂಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದರು.

ಉಡುಪಿಯಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಬ್ಲಾಕ್‌ ಮೇಲ್‌ ಮಾಡಿ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಕಾಂಗ್ರೆಸ್‌ ಮೇಲೆ ಅವರಿಗೆ ಹಿಡಿತ ಇಲ್ಲ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ ಬಣ, ಜೆಡಿಎಸ್‌ ವಲಸಿಗರ ಬಣ, ಪರಮೇಶ್ವರ್‌ ಬಣ, ಡಿ.ಕೆ. ಶಿವಕುಮಾರ್‌ ಬಣ ಹೀಗೆ ಕಾಂಗ್ರೆಸ್‌ನಲ್ಲಿ ಹಲವು ಬಣಗಳು ಸೃಷ್ಟಿಯಾಗಿವೆ. ಬಣಗಳನ್ನು ನಿಭಾಯಿಸಲಾಗದೆ ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ADVERTISEMENT

ಸಿದ್ದರಾಮಯ್ಯ ಐದು ವರ್ಷದ ಆಡಳಿತ ಹೇಗಿತ್ತು ಎಂಬುದನ್ನು ರಾಜ್ಯದ ಜನತೆ ನೋಡಿದ್ದಾರೆ. ಜಾತಿ, ಧರ್ಮ ಒಡೆಯುವ ಕೆಲಸ ಮಾಡಿದ್ದರು. ಈಗಲೂ ಜಾತಿಗಳನ್ನು ಒಡೆದು ಅದರ ಲಾಭ ಪಡೆಯವ ಭ್ರಮೆಯಲ್ಲಿದ್ದಾರೆ. ಸಿದ್ದರಾಮಯ್ಯನವರ ಕುತಂತ್ರ, ಷಡ್ಯಂತ್ರ ಜನರಿಗೆ ಅರ್ಥವಾಗಿದೆ. ಈ ಬಾರಿ ಯಾರೂ ಅವರ ಕುತಂತ್ರಕ್ಕೆ ಬಲಿಯಾಗುವುದಿಲ್ಲ ಎಂದು ಕುಟುಕಿದರು.

ಉಪ ಚುನಾವಣೆ ಮೇಲೆ ಡಿ.ಕೆ.ಶಿವಕುಮಾರ್‌ ಪ್ರಭಾವ ಬೀರುವುದಿಲ್ಲ. ಡಿಕೆಶಿ ಸಚಿವರಾಗಿದ್ದಾಗಲೇ ವಿಧಾನಸಭಾ ಚುನಾವಣೆ ನಡೆದು, ಕಾಂಗ್ರೆಸ್‌ಗೆ ಹಿನ್ನಡೆಯಾಗಿತ್ತು. ಕನಕಪುರದಲ್ಲಿ ಡಿಕೆಶಿ ಪ್ರಭಾವ ಇರಬಹುದು. ಕನಕಪುರದಲ್ಲಿ ಗೆಲ್ಲುವುದು ಕಷ್ಟ ಎಂಬುದು ಗೊತ್ತಿದೆ. ಆದರೆ ರಾಜ್ಯದಲ್ಲಿ ಡಿಕೆಶಿ ಪ್ರಭಾವ ಇಲ್ಲ. ರಾಜ್ಯದ ಜನರಿಗೆ ಡಿಕೆಶಿ ಏನು ಎಂಬುದು ಅರ್ಥವಾಗಿದೆ ಎಂದು ಹೇಳಿದರು.

ಮುಂಬರುವ ಉಪ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದ್ದು, ಗೆಲ್ಲಲಿದೆ. ಮೂರೂವರೆ ವರ್ಷಗಳ ಕಾಲ ರಾಜ್ಯದಲ್ಲಿ ಬಿಜೆಪಿಯೇ ಆಡಳಿತ ನಡೆಸುತ್ತದೆ. ಇದರಲ್ಲಿ ಸಂಶಯವಿಲ್ಲ. ಜೆಡಿಎಸ್‌ ನಾಯಕರು ಬಿಜೆಪಿ ಸಂಪರ್ಕದಲ್ಲಿ ಇಲ್ಲ. ಬೇರೆ ಪಕ್ಷದ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಬೇಕಾದರೆ ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇದು ಬಿಜೆಪಿಯ ನಿಲುವು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.