ADVERTISEMENT

ನಮ್ಮೂರಿನ ರಾಮನೂ ದಶರಥನ ಮಗನೇ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 12:55 IST
Last Updated 22 ಫೆಬ್ರುವರಿ 2021, 12:55 IST
ಪಡುಬಿದ್ರಿಯಲ್ಲಿ ಸೋಮವಾರ ಕಾಂಗ್ರೆಸ್ ಜನಧ್ವನಿ ಸಮಾವೇಶದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿದರು.
ಪಡುಬಿದ್ರಿಯಲ್ಲಿ ಸೋಮವಾರ ಕಾಂಗ್ರೆಸ್ ಜನಧ್ವನಿ ಸಮಾವೇಶದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿದರು.   

ಪಡುಬಿದ್ರಿ (ಉಡುಪಿ): ಅಯೋಧ್ಯೆಯ ರಾಮನೂ ದಶರಥನ ಮಗನೇ, ನಮ್ಮೂರಿನ ರಾಮನೂ ದಶರಥನ ಮಗನೇ. ಅಯೋಧ್ಯೆಯ ರಾಮಮಂದಿರಕ್ಕೆ ದೇಣಿಗೆ ಕೊಡುವ ಬದಲು, ನಮ್ಮೂರಿನ ರಾಮಮಂದಿರಕ್ಕೆ ಕೊಡುತ್ತೇನೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಪಡುಬಿದ್ರಿಯಲ್ಲಿ ಸೋಮವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಜನಧ್ವನಿ ಸಮಾವೇಶದಲ್ಲಿ ಮಾತನಾಡಿ, 'ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಮಾತ್ರ ದೇಣಿಗೆ ಕೊಡಬೇಕೆ, ನಮ್ಮೂರಿನ ರಾಮಮಂದಿರಕ್ಕೆ ಕೊಟ್ಟರೆ ಆಗುವುದಿಲ್ಲವೇ' ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ನನ್ನ ಹೆಸರಿನಲ್ಲಿಯೇ ‘ರಾಮ’ ಇದ್ದಾನೆ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.

ರಾಮನ ಭಕ್ತರಾಗಿದ್ದ ಮಹಾತ್ಮಾ ಗಾಂಧೀಜಿಯ ಹಿಂದುತ್ವವನ್ನು ಕಾಂಗ್ರೆಸ್‌ ಪಾಲಿಸುತ್ತದೆ. ಆದರೆ, ಬಿಜೆಪಿ ಬಿಜೆಪಿ ಸಾವರ್ಕರ್ ಹಿಂದುತ್ವ ಪಾಲಿಸುತ್ತದೆ. ಗಾಂಧಿ ಕೊಂದ ಗೋಡ್ಸೆಯ ಆರಾಧಕರಾದ ಬಿಜೆಪಿಗರು ನಿಜವಾದ ಹಿಂದುತ್ವವಾದಿಗಳೇ ಎಂದು ಕುಟುಕಿದರು.

ADVERTISEMENT

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಚೆಕ್ ಮೂಲಕ ಲಂಚ ಸ್ವೀಕರಿಸಿದರೆ, ಮಗ ವಿಜಯೇಂದ್ರ ಆರ್‌ಟಿಜಿಎಸ್ ಮೂಲಕ ಲಂಚ ಪಡೆಯುತ್ತಿದ್ದಾರೆ. 'ನಾ ಖಾವೂಂಗ, ನಾ ಖಾನೆದೂಂಗ' ಎಂದರೆ ಇದೆಯೇ ನರೇಂದ್ರ ಮೋದಿ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಅಧಿಕಾರಾವಧಿಯಲ್ಲಿ 7 ಕೆ.ಜಿ ಉಚಿತ ಅಕ್ಕಿ ನೀಡಲಾಯಿತು. ಯಡಿಯೂರಪ್ಪ ಮುಖ್ಯಮಂತ್ರಿಯಾದ ಕೂಡಲೇ 5 ಕೆ.ಜಿಗೆ ಕಡಿತಗೊಳಿಸಲಾಯಿತು. ಈಗ ಸರ್ಕಾರದ ಬಳಿ ದುಡ್ಡಿಲ್ಲ ಎಂದು ಮತ್ತೆ 2 ಕೆ‌.ಜಿ ಕಡಿತಕ್ಕೆ ಮುಂದಾಗಿದ್ದಾರೆ. ಯಡಿಯೂರಪ್ಪ ಡೋಂಗಿ ರೈತನ ಮಗ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉಚಿತವಾಗಿ 10 ಕೆಜಿ ಅಕ್ಕಿ ಕೊಡುವುದಾಗಿ ಸಿದ್ದರಾಮಯ್ಯ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.