ADVERTISEMENT

ಉಡುಪಿ: ರಥ ಮೆರವಣಿಗೆಗೆ ನಿಶಾನೆ ತೋರಿದ ಶಾಸಕ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 6:01 IST
Last Updated 5 ನವೆಂಬರ್ 2025, 6:01 IST
ಕುಂದಾಪುರ ಸಮೀಪದ ಕುಂಭಾಸಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಿಂದ ಮಂಗಳವಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೊರಟ ಬೆಳ್ಳಿ ರಥಕ್ಕೆ ಶಾಸಕ ಎ.ಕಿರಣ್‌ಕುಮಾರ ಕೊಡ್ಗಿ ಅವರು ಭಗವಾಧ್ವಜದ ನಿಶಾನೆ ತೋರಿದರು 
ಕುಂದಾಪುರ ಸಮೀಪದ ಕುಂಭಾಸಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಿಂದ ಮಂಗಳವಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೊರಟ ಬೆಳ್ಳಿ ರಥಕ್ಕೆ ಶಾಸಕ ಎ.ಕಿರಣ್‌ಕುಮಾರ ಕೊಡ್ಗಿ ಅವರು ಭಗವಾಧ್ವಜದ ನಿಶಾನೆ ತೋರಿದರು    

ಕುಂದಾಪುರ: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ಸಂಸ್ಥೆಯ ಡಾ.ಕೆ.ವಿ.ರೇಣುಕಾಪ್ರಸಾದ್ ಮತ್ತು ಅವರ ಕುಟುಂಬಿಕರು ಸಂಕಲ್ಪಿಸಿದಂತೆ ನೀಡಲಾಗುತ್ತಿರುವ ಬೆಳ್ಳಿ ರಥವನ್ನು ಕುಂಭಾಸಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಿಂದ ಕುಕ್ಕೆಗೆ ಬೀಳ್ಕೊಡುವ ಧಾರ್ಮಿಕ ಪ್ರಕ್ರಿಯೆ ಮಂಗಳವಾರ ನಡೆಯಿತು.

ಜಕಣಾಚಾರಿ ಪ್ರಶಸ್ತಿ ಪುರಸ್ಕೃತರಾದ ಕೋಟೇಶ್ವರದ ಖ್ಯಾತ ರಥಶಿಲ್ಪಿ ಬಿ.ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ಇವರ ಪುತ್ರ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಅವರ ಮಾರ್ಗದರ್ಶನದಲ್ಲಿ ನಿರ್ಮಾಣವಾದ ರಥಕ್ಕೆ ಪುರೋಹಿತ್ ವೇದಮೂರ್ತಿ ರೋಹಿತಾಕ್ಷ ಆಚಾರ್ಯ ಇವರ ತಂಡದವರು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿ, ರಥವನ್ನು ಸೇವಾಕರ್ತರಾದ ಡಾ.ಕೆ.ವಿ.ರೇಣುಕಾ ಪ್ರಸಾದ್ ಮತ್ತು ಅವರ ಕುಟುಂಬಿಕರಿಗೆ ಹಸ್ತಾಂತರ ಮಾಡಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು, ಕುಂಭಾಸಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ ರಥಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶುಭ ಹಾರೈಸಿದರು. ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ದೇವಳದ ಪ್ರಧಾನ ತಂತ್ರಿಗಳಾದ ಪ್ರಸನ್ನಕುಮಾರ್ ಐತಾಳ್ ಅವರು ರಥಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಶಾಸಕ ಕಿರಣ್ ಕುಮಾರ್ ಕೊಡ್ಗಿ ಹಾಗೂ ಮುಖಂಡ ವಿನಯಕುಮಾರ್ ಸೊರಕೆ ಭಗವಧ್ವಜವನ್ನು ರಥಕ್ಕೆ ತೋರಿಸುವುದರ ಮೂಲಕ ರಥದ ಪುರಮೆರವಣಿಗೆಗೆ ಚಾಲನೆ ನೀಡಿದರು.

ADVERTISEMENT

ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು ರಥಕ್ಕೆ ಇಡುಗಾಯಿ ಒಡೆಯುವುದರ ಮೂಲಕ ರಥ ಯಾತ್ರೆಗೆ ಚಾಲನೆ ನೀಡಿದರು. ಬಾಂಡ್ಯ ಎಜುಕೇಷನ್ ಟ್ರಸ್ಟ್ ಆಡಳಿತ ಟ್ರಸ್ಟಿ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ಕೋಟೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಗಿಣಿ ದೇವಾಡಿಗ, ಗೋಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಶೆಟ್ಟಿ, ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಪೂಜಾರಿ, ಕೋಟಿಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ.ಸುಧಾಕಾರ್ ನಂಬಿಯಾರ್, ಉಷಾ ಬಂಗೇರ ಮಾರ್ಕೋಡು, ಗಾಯಿತ್ರಿ ಆಚಾರ್ಯ, ಗುತ್ತಿಗೆದಾರ ಸುಧೀರ್ ಕುಮಾರ್ ಶೆಟ್ಟಿ ಮಾರ್ಕೋಡು, ಶಿಲ್ಪಿ ಗಣಪತಿ ಆಚಾರ್ಯ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮೋಹನ್ ರಾಮ್ ಸುಳ್ಯ, ಭರತ್ ಮಡೊಂಡಿ, ಜಯರಾಮ ಸುಳ್ಯ, ಜಾರ್ಖಿ ಮಾಧವ ಗೌಡ, ದೇವಳದ ಇಂಜಿನಿಯರ್ ಉದಯ ಕುಮಾರ್, ಸುಳ್ಯ ಗೌಡ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ್, ದಿನೇಶ್ ಮಡಪ್ಪಾಡಿ, ಸಂತೋಷ್ ಶಾಖೆ, ಎನ್.ಯು.ರಾಮಚಂದ್ರ, ಸಂತೋಷ್ ಕುತ್ತಮಟ್ಟೆ, ಯಶೋಧರ ರಾಮಚಂದ್ರ, ದಿನೇಶ್ ಮರತ್ತಿಲ್ಲ, ಭವಾನಿ ಶಂಕರ್ ಇದ್ದರು.

ರಥ ಸಾಗುವ ವೇಳೆ ಅಲ್ಲಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು. ಅಕರ್ಷಕವಾದ ತೆರೆದ ಜೀಪಿನಲ್ಲಿ ಇರಿಸಲಾದ ಶ್ರೀಕ್ಷೇತ್ರ ಸುಬ್ರಹ್ಮಣ್ಯದ ದೇವರ ಭಾವಚಿತ್ರ, ಭಜನೆ, ನಾಮ ಸಂಕೀರ್ತನೆಗಳು ಮೆರವಣಿಗೆಯ ವೈಭವವನ್ನು ಹೆಚ್ಚಿಸಿದ್ದವು. ಕೋಟೇಶ್ವರದಿಂದ ಕುಂಭಾಸಿ, ಉಡುಪಿ, ಸುರತ್ಕಲ್, ಮಂಗಳೂರು, ಬಿ.ಸಿ.ರೋಡ್, ಕಬಕ, ಪುತ್ತೂರು, ಕನಕಮಂಜಲು, ಜಾಲ್ಸೂರು, ಅಡ್ಕಾರ್, ಪೈಚಾರು ಮೂಲಕ ಶ್ರೀಕ್ಷೇತ್ರಕ್ಕೆ ಬೆಳ್ಳಿರಥದ ಯಾತ್ರೆ ಸಾಗಿತ್ತು. ನ. 10ರಂದು ಸೇವಾಕರ್ತರಿಂದ ಶ್ರೀದೇವರಿಗೆ ರಥವು ಸಮರ್ಪಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.