ADVERTISEMENT

ಸಮಾಜ ಪ್ರೀತಿಕೊಟ್ಟರೆ ಬೀದಿಗೆ ಬರುವುದಿಲ್ಲ

ತಪ್ಪು ನಮ್ಮದಲ್ಲ; ಸಮಾಜದ್ದು: ಲೈಂಗಿಕ ಅಲ್ಪಸಂಖ್ಯಾತೆ ಕಾಜಲ್‌ ಬ್ರಹ್ಮಾವರ

ಬಾಲಚಂದ್ರ ಎಚ್.
Published 16 ಅಕ್ಟೋಬರ್ 2018, 20:00 IST
Last Updated 16 ಅಕ್ಟೋಬರ್ 2018, 20:00 IST
ಕಾಜಲ್ ಬ್ರಹ್ಮಾವರ
ಕಾಜಲ್ ಬ್ರಹ್ಮಾವರ   

ಉಡುಪಿ: ಪುರುಷರು ಮಹಿಳೆಯರಷ್ಟೇ ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಬೇಕಾ? ಲೈಂಗಿಕ ಅಲ್ಪಸಂಖ್ಯಾತರು ಆಗಬಾರದೇಕೆ? ನಮಗೂ ಅವಕಾಶ ಕೊಡಿ. 5 ವರ್ಷ ಬೇಡ, ಕೇವಲ 6 ತಿಂಗಳು ಕೊಡಿ..

ಹೀಗೆ, ತೃತೀಯ ಲಿಂಗಿಗಳು ಸಮಾಜದಲ್ಲಿ ಕಡೆಗಣನೆಗೆ ಒಳಗಾಗಿರುವ ಬಗೆಯನ್ನು ವಿಡಿಯೋವೊಂದರಲ್ಲಿ ಅಭಿವ್ಯಕ್ತಗೊಳಿಸಿದ್ದಾರೆ ಕಾಜಲ್‌ ಬ್ರಹ್ಮಾವರ. ರೇಡಿಯೋ ಜಾಕಿ, ರಂಗ ಕಲಾವಿದೆ, ಸಿನಿಮಾ ನಟಿಯಾಗಿ ಗುರುತಿಸಿಕೊಂಡಿರುವ ಕಾಜಲ್‌ ಬಹುಮುಖ ಪ್ರತಿಭೆ. ತೃತೀಯ ಲಿಂಗಿಯಾಗಿಯಾಗಿರುವ ಕಾಜಲ್‌ ತಮ್ಮ ಸಮುದಾಯದ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ.

ಈಚೆಗೆ ‘ರೀಚ್‌ ಫಾರ್ ಬೆಟರ್‌’ ಎಂಬ ಸಂಸ್ಥೆ ಕಾಜಲ್ ಬದುಕು ಆಧರಿಸಿ 2 ನಿಮಿಷದ ಸಾಕ್ಷ್ಯಚಿತ್ರ ತಯಾರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಫೇಸ್‌ಬುಕ್‌ನಲ್ಲಿ 55 ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಕಾಜಲ್‌ ವಿಡಿಯೋ ವೀಕ್ಷಣೆ ಮಾಡಿದ್ದಾರೆ. 77 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಒತ್ತಿದ್ದಾರೆ. 17 ಸಾವಿರ ಷೇರ್‌ಗಳಾಗಿವೆ.

ADVERTISEMENT

ಲೈಂಗಿಕ ಅಲ್ಪಸಂಖ್ಯಾತರ ಭಾವನೆ, ತುಡಿತಗಳನ್ನು ವಿಡಿಯೋದಲ್ಲಿ ಹಿಡಿದಿಡಲಾಗಿದೆ. ನಾವೂ ಮನುಷ್ಯರು, ನಮನ್ನೂ ಎಲ್ಲರಂತೆ ನೋಡಿ ಎಂಬ ಲೈಂಗಿಕ ಅಲ್ಪಸಂಖ್ಯಾತರ ಕೂಗಿಗೆ ಕಾಜಲ್‌ ಗಟ್ಟಿದನಿಯಾಗಿದ್ದಾರೆ.

ಗಂಡು ಹೆಣ್ಣಾಗಿ ಬದಲಾಗುವ ಕಾಲಘಟ್ಟದಲ್ಲಿ ಅನುಭವಿಸುವ ಯಾತನೆ, ತೃತೀಯ ಲಿಂಗಿಗಳನ್ನು ಸಮಾಜ ನೋಡುವ ನೋಟ, ಪೋಷಕರು ಅನುಭವಿಸುವ ಯಾತನೆ ಇವೆಲ್ಲವನ್ನೂ ಕಾಜಲ್‌ ತೆರೆದಿಟ್ಟಿದ್ದಾರೆ.‌ ಜತೆಗೆ, ಸಮಾಜಕ್ಕೆ ಹೆದರಿ ಭಾವನೆಗಳನ್ನು ಅದುಮಿಟ್ಟುಕೊಳ್ಳಬೇಡಿ, ಆಸೆ ಆಕಾಂಕ್ಷೆಗಳನ್ನು ಬಲಿಕೊಡಬೇಡಿ. ಧೈರ್ಯವಾಗಿ ಮುಖ್ಯವಾಹಿನಿಗೆ ಬನ್ನಿ ಎಂಬ ಸಂದೇಶ ನೀಡಿದ್ದಾರೆ.

ಹರೆಯದಲ್ಲಿ ಎದುರಾಗುವ ಸವಾಲುಗಳು, ವೃತ್ತಿಜೀವನದ ಸಂಕಷ್ಟಗಳು, ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾರೆ. ಸಮಸ್ಯೆಗಳಿಗೆ ಹೆದರದೆ ಬದುಕು ಕೊಟ್ಟಿಕೊಂಡ ಬಗೆಯನ್ನು ತಿಳಿಸಿದ್ದಾರೆ.

ವಿಡಿಯೋ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಕಾಜಲ್‌ ಬ್ರಹ್ಮಾವರ ‘ಬೆಟರ್ ಇಂಡಿಯಾ ಸಂಸ್ಥೆ ವಿವಿಧ ಕ್ಷೇತ್ರಗಳಲ್ಲಿ ಸಾಧಕರನ್ನು ಗುರುತಿಸಿ ಬೆಳಕಿಗೆ ತರುವ ಕೆಲಸ ಮಾಡುತ್ತಿದೆ. ಈಚೆಗೆ ಸಂಸ್ಥೆಯಿಂದ ಪ್ರಶಸ್ತಿ ದೊರೆತಿತ್ತು. ನಂತರ ನನ್ನ ಬದುಕನ್ನು ಆಧರಿಸಿ ಚಿಕ್ಕ ಸಾಕ್ಷ್ಯಚಿತ್ರ ನಿರ್ಮಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗೆ ಪ್ರಶಂಸೆ ಸಿಕ್ಕಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಸಮಾಜವು ಲೈಂಗಿಕ ಅಲ್ಪಸಂಖ್ಯಾತರನ್ನು ನೋಡುವ ನೋಟ ಬದಲಾಗಬೇಕು. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಸರಿಯಲ್ಲ. ನಾವೂ ಮನುಷ್ಯರು, ಸಂವಿಧಾನಬದ್ಧ ಎಲ್ಲ ಹಕ್ಕುಗಳು ನಮಗೂ ಸಿಗಬೇಕು. ಎಲ್ಲ ಕ್ಷೇತ್ರಗಳಲ್ಲಿ ಅವಕಾಶ ದೊರೆಯಬೇಕು ಎಂದು ಕಾಜಲ್‌ ಒತ್ತಾಯಿಸಿದರು.

ನಾಲ್ಕನೇ ತರಗತಿಯಲ್ಲಿ ಓದುವಾಗ ದೇಹದಲ್ಲಿ ಬದಲಾವಣೆಗಳು ಕಂಡುಬಂದವು. ಹುಡುಗಿಯಂತೆ ಅಲಂಕಾರ ಮಾಡಿಕೊಳ್ಳಬೇಕು, ಸೀರೆ ಉಡಬೇಕು, ಅಕ್ಕನ ಬಟ್ಟೆ ಧರಿಸಬೇಕು. ಕಣ್ರೆಪ್ಪೆಗೆ ಕಾಜಲ್‌ ಹಾಕಬೇಕು ಎನಿಸಿತು. ಲಿಪ್‌ಸ್ಟಿಕ್‌ ಸಿಗದಿದ್ದಾಗ ಕುಂಕುಮಕ್ಕೆ ನೀರು ಬೆರೆಸಿಕೊಂಡು ತುಟಿಗೆ ಹಚ್ಚಿಕೊಂಡು ಸಂಭ್ರಮಿಸಿದೆ. ನನ್ನೊಳಗಿನ ಬದಲಾವಣೆ ಕಂಡು ಶಾಲೆಯಲ್ಲಿ ಸಹಪಾಠಿಗಳು ರೇಗಿಸಿದರು, ಗೇಲಿ ಮಾಡಿದರು. ಆದರೆ, ನನಗೆ ನನ್ನ ತನವೇ ಮುಖ್ಯವಾಯಿತು ಎಂದು ‌ಕಾಜಲ್‌ ಬಾಲ್ಯದಲ್ಲಿ ಅನುಭವಿಸಿದ ನೋವನ್ನು ತೆರೆದಿಟ್ಟರು.

ಸಮಾಜ ಪ್ರೀತಿಕೊಟ್ಟರೆ ಯಾರೂ ರಸ್ತೆಗೆ ಬಂದು ಭಿಕ್ಷೆ ಬೇಡುವುದಿಲ್ಲ; ಲೈಂಗಿಕ ವೃತ್ತಿ ಮಾಡುವುದಿಲ್ಲ. ತಪ್ಪು ನಮ್ಮದಲ್ಲ, ಸಮಾಜದ್ದು ಎಂದು ಮಾತು ಮುಗಿಸಿದರು ಕಾಜಲ್‌.

ವಿಡಿಯೋ ವೀಕ್ಷಿಸಲು ಈ ಲಿಂಕ್ ಬಳಸಬಹುದು. https://youtu.be/TSEUVPc77lM

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.