ADVERTISEMENT

ಹಿಂದೂ ಮುಖಂಡರನ್ನು ದಮನಿಸುವ ಕಾರ್ಯ ಕೈಬಿಡಿ: ಶಾಸಕ ಗುರುರಾಜ್ ಗಂಟಿಹೊಳೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 14:37 IST
Last Updated 3 ಜೂನ್ 2025, 14:37 IST
ಗುರುರಾಜ್ ಗಂಟಿಹೊಳೆ
ಗುರುರಾಜ್ ಗಂಟಿಹೊಳೆ   

ಬೈಂದೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರದ ಆಡಳಿತ ವೈಫಲ್ಯದಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.‌ ಇದರಿಂದಾಗಿ ಹಿಂದೂ ಸಮಾಜದ ಮುಖಂಡರನ್ನು ಅನವಶ್ಯಕವಾಗಿ ಗುರಿಯಾಗಿ‌ಸಿ ಕಿರುಕುಳು ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಹಿಂದೂ ಕಾರ್ಯಕರ್ತರನ್ನು ಸುಳ್ಳು ಕೇಸ್ ದಾಖಲಿಸಿ ದಮನಿಸಲು ಹೊರಟಿದೆ. ಈ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಬೇಕು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಹಿಂದೂ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರ ಮೇಲೆ ಎಫ್‌‌ಐಆರ್ ದಾಖಲಿಸಿ, ಅರುಣ್ ಕುಮಾರ್ ಪುತ್ತಿಲ ಸೇರಿ 20ಕ್ಕೂ ಅಧಿಕ ಹಿಂದೂ ಸಂಘಟನೆ ಮುಖಂಡರನ್ನು ಗಡೀಪಾರು ಮಾಡಲು ನೋಟಿಸ್ ಜಾರಿ ಮಾಡಿದ್ದು, ಹಿಂದೂ ಕಾರ್ಯಕರ್ತರ ಮನೆಗೆ ರಾತೋರಾತ್ರಿ ಪೊಲೀಸರು ತೆರಳಿ ಅವರ ಮನೋಸ್ಥೈರ್ಯ ಕುಗ್ಗಿಸಲು ಮುಂದಾಗಿರುವುದು ಖಂಡನೀಯ ಎಂದು ಹೇಳಿದ್ದಾರೆ.

ಮಂಗಳೂರಿನಲ್ಲಿ ನಡೆದ ಸರಣಿ ಕೊಲೆಗಳು ರಾಜ್ಯ ಸರ್ಕಾರದ ದುರಾಡಳಿತವನ್ನು ಸೂಚಿಸುತ್ತದೆ. ಸರ್ಕಾರದ ವಿರುದ್ಧ ಕಾಂಗ್ರೆಸ್‌ನ ಮುಸಲ್ಮಾನ ಮತದಾರರು ಆಕ್ರೋಶಗೊಂಡಿದ್ದಾರೆ ಎಂಬ ಕಾರಣಕ್ಕಾಗಿ ಹಿಂದೂ ಮುಖಂಡರ ಮೇಲೆ ಕಾರಣವಿಲ್ಲದೆ ಪ್ರಕರಣ ದಾಖಲಿಸುತ್ತಿರುವುದು ಖಂಡನೀಯ. ಎಸ್‌ಡಿಪಿಐ, ಕಾಂಗ್ರೆಸ್‌ ನಾಯಕರು ಒತ್ತಡ ಹೇರಿದ್ದರಿಂದ ಎರಡು– ಮೂರು ವಾರಗಳ ಹಿಂದಿನ ಭಾಷಣಗಳನ್ನು ಉಲ್ಲೇಖಿಸಿ ಎಫ್‌ಐಆರ್‌ ದಾಖಲಿಸುತ್ತಿರುವುದು ಕಾಂಗ್ರೆಸ್‌ನ ಓಲೈಕೆ ರಾಜಕೀಯಕ್ಕೆ ಹಿಡಿದ ಕೈಗನ್ನಡಿ ಎಂದು ಅವರು ಆರೋಪಿಸಿದ್ದಾರೆ.

ADVERTISEMENT

ಕಾಂಗ್ರೆಸ್‌ನ ಅಜೆಂಡಾಗಳನ್ನು ಪೊಲೀಸ್‌ ಇಲಾಖೆ ಮೂಲಕ ಜಾರಿಗೊಳಿಸುವುದು ಸಂವಿಧಾನಕ್ಕೆ ಮಾಡುವ ಅವಮಾನ. ಮತಾಂಧ ಶಕ್ತಿಗಳ ಓಲೈಕೆಗೆ ಮುಂದಾಗಿರುವ ಕಾಂಗ್ರೆಸ್ ಸರ್ಕಾರ ಜಿಲ್ಲೆಯ ಪೊಲೀಸ್ ವ್ಯವಸ್ಥೆಯನ್ನು ಕೈಗೊಂಬೆಯಾಗಿಸಿಕೊಂಡು ಹಿಂದೂ ಕಾರ್ಯಕರ್ತರನ್ನು ದಮನಿಸಲು ಮುಂದಾಗಿದೆ. ಹಿಂದೂ ವಿರೋಧಿ ನಿಲುವು, ಹಿಂದೂ ಕಾರ್ಯಕರ್ತರನ್ನು ದಮನಿಸುವ ಪ್ರಯತ್ನ ಕೈಬಿಟ್ಟು ಕರಾವಳಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.