
ಕುಂದಾಪುರ: ತಳ್ಳುವ ಗಾಡಿ, ಬುಟ್ಟಿ, ಟೇಬಲ್, ಸಣ್ಣ ಗೂಡ್ಸ್ ಗಾಡಿಗಳನ್ನು ಮುಂದಿಟ್ಟುಕೊಂಡು ಒಂದಷ್ಟು ವ್ಯಾಪಾರ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಬಡ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಪ್ರಯತ್ನ ಕಳೆದ ಕೆಲವು ದಿನಗಳಿಂದ ನಗರದಲ್ಲಿ ನಡೆಯುತ್ತಿದೆ.
ನಗರದ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಾಣದಿದ್ದರೂ ಇದೀಗ ಸುವ್ಯವಸ್ಥಿತ ಪಾರ್ಕಿಂಗ್ ಹೆಸರಿನಲ್ಲಿ ಬೀದಿ ಬದಿಯ ವ್ಯಾಪಾರಿಗಳನ್ನು ತೆರವುಗೊಳಿಸುತ್ತಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ನಗರದ ಪಾರ್ಕಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು. ಆದರೆ ಬೀದಿ ಬದಿ ವ್ಯಾಪಾರಿಗಳ ವ್ಯಾಪಾರಕ್ಕೆ ಧಕ್ಕೆಯಾಗದಂತೆ ಪುರಸಭೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಮುಂದುವರಿಯಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ. ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಚರ್ಚೆ ಆರಂಭವಾಗಿದೆ.
ವಿದೇಶಗಳಲ್ಲಿ, ಮುಂಬೈ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ಹಲವರ ಬದುಕನ್ನು ಕೋವಿಡ್ ಬೀದಿಗೆ ತಳ್ಳಿತ್ತು. ಈ ವೇಳೆ ಅನೇಕರು ಕುಟುಂಬ ನಿರ್ವಹಣೆಗಾಗಿ ಬೀದಿ ಬದಿಯ ವ್ಯಾಪಾರವನ್ನು ನೆಚ್ಚಿಕೊಂಡಿದ್ದರು.
ಆಮ್ಲೇಟ್ ಅಂಗಡಿ, ತರಕಾರಿ-ಸೊಪ್ಪು-ಹಣ್ಣುಗಳ ಗಾಡಿ, ಗೃಹ ಬಳಕೆಯ ಸಣ್ಣ ಸಣ್ಣ ವಸ್ತುಗಳ ಮಾರಾಟ, ಕಬ್ಬಿನ ಹಾಲು, ಚಪ್ಪಲಿ ರಿಪೇರಿ, ಅತ್ತರ್, ಫಾಸ್ಟ್ ಫುಡ್, ಸಿದ್ದ ಉಡುಪು, ಮೊಬೈಲ್ ಕವರ್‌ಗಳನ್ನು ವ್ಯಾಪಾರ ಮಾಡುವ ಈ ಬೀದಿ ಬದಿಯ ವ್ಯಾಪಾರಿಗಳ ಆದಾಯ ದಿನಕ್ಕೆ ಸಾವಿರದ ಗಡಿಯನ್ನು ದಾಟುವುದಿಲ್ಲ. ಶೇ 60 ಕ್ಕಿಂತ ಜಾಸ್ತಿ ಮಂದಿಯ ವ್ಯಾಪಾರ ನಡೆಯುವುದೇ ಸಂಜೆ ಬಳಿಕ ಎನ್ನುತ್ತಾರೆ ವ್ಯಾಪಾರಿಗಳು.
ಕುಂದಾಪುರ ನಗರಕ್ಕೆ ಇರುವುದೇ ಎರಡು ಪ್ರಮುಖ ರಸ್ತೆಗಳು, ಈ ರಸ್ತೆಯ ಅಂಚಿನಲ್ಲಿ ಇರುವ ಬಹುತೇಕ ವಾಣಿಜ್ಯ ಕಟ್ಟಡಗಳು ತಮ್ಮ ಅಂಗಡಿಗಳ ಮುಂಭಾಗದ ಸಾರ್ವಜನಿಕ ಜಾಗವನ್ನು ಪಾರ್ಕಿಂಗ್, ಜಾಹೀರಾತು ಫಲಕ ಹಾಗೂ ಇನ್ನಿತರ ಉದ್ದೇಶಗಳಿಗೆ ಬಳಸಿಕೊಂಡಿದ್ದರೂ ಯಾವುದೇ ಕ್ರಮ ಜರುಗಿಸದೆ, ಬೀದಿ ಬದಿ ವ್ಯಾಪಾರಿಗಳನ್ನು ಪರ್ಯಾಯ ವ್ಯವಸ್ಥೆ ಕಲ್ಪಿಸದೆ ತೆರವುಗೊಳಿಸುವುದು ಸರಿಯಲ್ಲ ಎಂದು ಜನರು ಹೇಳಿದ್ದಾರೆ.
ಶುಚಿತ್ವ ಹಾಗೂ ಪಾರ್ಕಿಂಗ್ ಬಗ್ಗೆ ಪುರಸಭೆ ಕ್ರಮ ವಹಿಸುವುದು ಸ್ವಾಗತಾರ್ಹ. ಆದರೆ ಬೀದಿ ಬದಿ ವ್ಯಾಪಾರವನ್ನೆ ಬದುಕಿನ ಆಸರೆಯನ್ನಾಗಿಸಿಕೊಂಡಿರುವ ವ್ಯಾಪಾರಿಗಳಿಗೆ ತೊಂದರೆ ಕೊಡಬೇಡಿದಿನೇಶ್ ಹೆಗ್ಡೆ ಮೊಳಹಳ್ಳಿ. ಕಾಂಗ್ರೆಸ್ ಮುಖಂಡ
ಖಂಡಿತವಾಗಿಯೂ ಪಾರ್ಕಿಂಗ್ ಸಮಸ್ಯೆ ಬಗೆಹರಿಯಬೇಕು. ಆದರೆ ಇದೇ ಕಾರಣಕ್ಕಾಗಿ ಯಾರದ್ದೋ ಬದುಕನ್ನು ಕಸಿದುಕೊಳ್ಳಬಾರದು. ಪರ್ಯಾಯ ವ್ಯವಸ್ಥೆಯ ಬಗ್ಗೆ ಆಲೋಚಿಸಬೇಕುಗಿರೀಶ್ ಜಿ.ಕೆ. ಪುರಸಭೆಯ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.